ಗದಗ, ಅ.10:
ಗದಗ ಜಿಲ್ಲೆಯ ಹುಲಕೋಟಿಯ ಕೆ.ಹೆಚ್. ಪಾಟೀಲ್ ಗ್ರಾಮೀಣ ಆಸ್ಪತ್ರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಆಸ್ಪತ್ರೆಯ ಅಂಗಾಂಗ ಕಸಿ (Transplant) ತಂಡವು ಗ್ರಾಮೀಣ ಪರಿಸರದಲ್ಲಿಯೇ ಯಶಸ್ವಿಯಾಗಿ ಒಂಬತ್ತು ಮೂತ್ರಪಿಂಡ ಕಸಿಗಳನ್ನು (Kidney Transplant) ನೆರವೇರಿಸಿರುವ ಸಾಧನೆಯನ್ನು ಇಟಾಲಿಯನ್ ವೈದ್ಯರು ಮೆಚ್ಚಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಇಟಲಿ ಮತ್ತು ಇತರ ದೇಶಗಳ ಮೂತ್ರಪಿಂಡ ಕಸಿ ತಜ್ಞರು ಕೈಗೆಟುಕುವ ವೆಚ್ಚದಲ್ಲಿ ಗ್ರಾಮೀಣ ಆಸ್ಪತ್ರೆಗಳಲ್ಲಿ ಕಸಿ ಮಾಡಲು ಬೆಂಬಲ ನೀಡಲು ಮುಂದಾಗಿದ್ದಾರೆ.
ಹುಲಕೋಟಿಯ ಪ್ರಖ್ಯಾತ ಮೂತ್ರಶಾಸ್ತ್ರಜ್ಞ ಮತ್ತು ಕಸಿ ಶಸ್ತ್ರಚಿಕಿತ್ಸಕ ಡಾ. ಅವಿನಾಶ್ ಓದುಗೌಡರ್, ಇತ್ತೀಚೆಗೆ ಇಟಲಿಯ ಸಿಸಿಲಿಯ ವಲ್ಕಾನೊ ದ್ವೀಪದ ಡೊನಾರ್ಟೆಯಲ್ಲಿ ನಡೆದ ನಾಲ್ಕನೇ ಅಂತರರಾಷ್ಟ್ರೀಯ ಕಿಡ್ನಿ ಕಾನ್ಫರೆನ್ಸ್‌ಗೆ ಆಹ್ವಾನಿತರಾಗಿದ್ದರು. ಈ ಸಂದರ್ಭದಲ್ಲಿ ಡಾ. ಅವಿನಾಶ್ ಅವರು ಹುಲಕೋಟಿ ಗ್ರಾಮೀಣ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದ ಒಂಬತ್ತು ಕಸಿಗಳ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಅವರ ಪ್ರಸ್ತುತಿಯನ್ನು ಕೇಳಿದ ಇಟಾಲಿಯನ್ ವೈದ್ಯರು ಈ ಮಾದರಿಯ ಗ್ರಾಮೀಣ ವೈದ್ಯಕೀಯ ಸೇವೆಯನ್ನು ಮೆಚ್ಚಿಕೊಂಡು, ಭಾರತದಲ್ಲಿ ನಡೆಯುತ್ತಿರುವ ಈ ಸಾಮಾಜಿಕ ಆರೋಗ್ಯ ಚಳುವಳಿಗೆ ಬೆಂಬಲ ನೀಡುವ ಆಸಕ್ತಿ ವ್ಯಕ್ತಪಡಿಸಿದ್ದಾರೆ.
ಡಾ. ಅವಿನಾಶ್ ಅವರು “ಗ್ರಾಮೀಣ ಪ್ರದೇಶದ ಜನರಿಗೆ ಕೈಗೆಟುಕುವ ದರದಲ್ಲಿ ಮೂತ್ರಪಿಂಡ ಕಸಿ ಚಿಕಿತ್ಸೆ ಲಭ್ಯವಾಗಬೇಕು ಎಂಬ ಉದ್ದೇಶದಿಂದಲೇ ಈ ಕಾರ್ಯ ಪ್ರಾರಂಭಿಸಲಾಯಿತು. ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಈ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಗಿದೆ” ಎಂದು ತಿಳಿಸಿದ್ದಾರೆ.
ಮುಂದಿನ ಗುರಿ: ಲಿವರ್ ಕಸಿ ಸೌಲಭ್ಯ
ಹಲವಾರು ಯಶಸ್ವಿ ಮೂತ್ರಪಿಂಡ ಕಸಿಗಳ ನಂತರ, ಈಗ ಕೆ.ಹೆಚ್. ಪಾಟೀಲ್ ಗ್ರಾಮೀಣ ಆಸ್ಪತ್ರೆ ಯಕೃತ್ (Liver) ಕಸಿ ಸೌಲಭ್ಯ ಸ್ಥಾಪನೆಗೆ ಮುಂದಾಗಿದೆ. ಇದರ ಮೂಲಕ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಮತ್ತಷ್ಟು ಉನ್ನತ ಮಟ್ಟದ ವೈದ್ಯಕೀಯ ಚಿಕಿತ್ಸೆ ದೊರಕುವ ನಿರೀಕ್ಷೆಯಿದೆ.
ಆಸ್ಪತ್ರೆಯ ಅಧ್ಯಕ್ಷ ಡಾ. ಎಸ್.ಆರ್. ನಾಗನೂರ ಅವರು “ಇದು ತಂಡದ ಸಾಮೂಹಿಕ ಸಾಧನೆ. ಡಾ. ಅವಿನಾಶ್, ಡಾ. ದೀಪಕ್ ಕುರಟ್ಟಿ, ಡಾ. ಪವನ್ ಕೋಳಿವಾಡ್, ಡಾ. ಮೇಘನಾ, ಡಾ. ಪಂಚಗರ್, ಡಾ. ವಿಶಾಲ್, ವಂದನಾ ಮತ್ತು ಹರೀಶ್ ಅವರ ಒಗ್ಗಟ್ಟಿನ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಕಾರ್ಯದರ್ಶಿ ಡಾ. ವೆಮನ್ ಸೌಹುಕಾರ ಸೇರಿದಂತೆ ಸಂಪೂರ್ಣ ತಂಡ ಶ್ಲಾಘನೀಯ ಕೆಲಸ ಮಾಡಿದೆ” ಎಂದು ಪ್ರಶಂಸಿದ್ದಾರೆ.
ಗದಗದ ಹಿರಿಯ ವೈದ್ಯೆ ಡಾ. ಪ್ಯಾರಾಲಿ ನೂರಾನಿ ಅವರು, “ಇಟಲಿಯಿಂದ ಬಂದ ಮೆಚ್ಚುಗೆ ನಮ್ಮ ತಂಡದ ಉತ್ಸಾಹವನ್ನು ಹೆಚ್ಚಿಸಿದೆ. ನಾವು ಶೀಘ್ರದಲ್ಲೇ ಯಕೃತ್ ಕಸಿ ಸೌಲಭ್ಯವನ್ನು ಗ್ರಾಮೀಣ ಸಮುದಾಯದ ಸೇವೆಗೆ ಆರಂಭಿಸಲು ಸಿದ್ಧರಾಗಿದ್ದೇವೆ. ಈ ಯೋಜನೆಗೆ ನಿರಂತರ ಬೆಂಬಲ ನೀಡುತ್ತಿರುವ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಸದ್ಯ ಆಸ್ಪತ್ರೆಯ ವೈದ್ಯರು ಪ್ರಸ್ತುತ ನೆರೆ ಜಿಲ್ಲೆಯಾದ ಹಾವೇರಿ, ಧಾರವಾಡ ಮತ್ತು ವಿಜಯಪುರಗಳಲ್ಲಿ ಅಂಗಾಂಗ ದಾನ ಮತ್ತು ಕಸಿ ಕುರಿತು ಜನಜಾಗೃತಿ ಕಾರ್ಯಕ್ರಮಗಳನ್ನು ಸಹ ನಡೆಸುತ್ತಿದ್ದಾರೆ.
ಒಟ್ಟಾರೆ ಗದಗ ಜಿಲ್ಲೆಯ ವೈದ್ಯರು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು, ಜಿಲ್ಲೆಯ ಜನರಿಗೆ ಸಂತಸ ತಂದಿದೆ.
