ಗದಗ, ಜುಲೈ 7: ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗಳು ರಾಜ್ಯ ರಾಜಕೀಯದಲ್ಲಿ ಮತ್ತೆ ಸದ್ದು ಮಾಡುತ್ತಿರುವ ಈ ಹೊತ್ತಿನಲ್ಲಿ, ಈ ಬಗ್ಗೆ ಪ್ರತಿಕ್ರಿಯೆ ನೀಡದಂತೆ ಕಾಂಗ್ರೆಸ್ ಹೈಕಮಾಂಡ್ನಿಂದ ಸ್ಪಷ್ಟ ಸೂಚನೆ ಬಂದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಕಾಂಗ್ರೆಸ್ ನಾಯಕರಿಗೆ “ಈ ವಿಚಾರವಾಗಿ ಬಾಯಿ ಮುಚ್ಚಿಕೊಂಡು ಇರಬೇಕು” ಎಂಬ ಸೂಚನೆ ನೀಡಿದ್ದಾರೆ ಎಂದು ಗದಗನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಇಂದು ಗದಗ ಜಿಲ್ಲೆಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಮಧು ಬಂಗಾರಪ್ಪ ಅವರು, ಸಿಎಂ ಬದಲಾವಣೆಯ ಬಗ್ಗೆ ಕೇಳಿದ ಪ್ರಶ್ನೆಗೆ, “ಮಲ್ಲಿಕಾರ್ಜುನ ಖರ್ಗೆ ಸಾಹೇಬ್ರು, ಈ ವಿಚಾರದಲ್ಲಿ ಬಾಯಿ ಮುಚ್ಚಿಕೊಂಡು ಇರ್ರಿ ಅಂತ ಹೇಳಿದಾರೆ. ಇದೊಂದು ಬಿಟ್ರೆ ನನಗೆ ಏನು ಗೊತ್ತಿಲ್ಲ, ಈ ವಿಷಯದಲ್ಲಿ ದಯವಿಟ್ಟು ನನಗೆ ಯಾವುದೇ ಪ್ರಶ್ನೆ ಕೇಳಬೇಡಿ” ಎಂದು ಸ್ಪಷ್ಟವಾಗಿ ಹೇಳಿದ್ರು.
ಗ್ಯಾರಂಟಿ ಯೋಜನೆಗೆ ಕಾಂಗ್ರೆಸ್ ಬದ್ಧ: ಮಧು ಬಂಗಾರಪ್ಪ
ಬಿಜೆಪಿ ನಾಯಕರು ವಿವಿಧ ವೇದಿಕೆಗಳಲ್ಲಿ “ಕಾಂಗ್ರೆಸ್ ನೀಡಿದ ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ” ಎಂಬ ಅನಾವಶ್ಯಕ ಟೀಕೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ, ಸಚಿವ ಮಧು ಬಂಗಾರಪ್ಪ ತೀವ್ರವಾಗಿ ಪ್ರತಿಕ್ರಿಯಿಸಿದರು.
“ಮೂರು ವರ್ಷಗಳ ಕಾಲ ಬಿಜೆಪಿಯವರಿಗೆ ಬೇರೆ ಕೆಲಸವೇ ಇಲ್ಲ. ಇಷ್ಟು ದಿನ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದ್ದರು, ಈಗ ಜನರ ಬೆಂಬಲ ನೋಡಿ ನಾವು ಗ್ಯಾರಂಟಿ ವಿರೋಧಿಗಳು ಅಲ್ಲ ಅಂತ ಹೇಳ್ತಿದ್ದಾರೆ. ಜನ ಚೀಮಾರಿ ಹಾಕಿ, ಮುಖಕ್ಕೆ ಉಗಿದಾಗ ಅರ್ಥವಾಗುತ್ತೆ!” ಎಂದು ಅಕ್ರೊಶಭರಿತ ಹೇಳಿಕೆಯೊಂದಿಗೆ ಈ ರೀತಿ ಹೇಳುವದನ್ನ ಬಿಜೆಪಿಯವ್ರು, ಇನ್ನು ಮೂರು ವರ್ಷ ಅಲ್ಲ.ಇನ್ನೈದು ವರ್ಷ ಪ್ಯಾಕೇಜ್ ಡೀಲ್ ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
“ನಮ್ಮ ಶಾಸಕರಲ್ಲಿ ಯಾರೂ ಗ್ಯಾರಂಟಿಗೆ ವಿರೋಧ ಮಾಡಿಲ್ಲ” – ಸ್ಪಷ್ಟನೆ
ಈ ನಡುವೆ, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಇತ್ತೀಚೆಗೆ, ರಸ್ತೆ ಬೇಕಂದ್ರೆ, ಗ್ಯಾರಂಟಿ ಬಂದ್ ಆಗುತ್ತೆ ಅನ್ನೋ ವಿಚಾರವನ್ನ ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ, “ನಮ್ಮ ಶಾಸಕರು ಯಾರೂ ಗ್ಯಾರಂಟಿ ಯೋಜನೆಗೆ ವಿರೋಧಿಸುತ್ತಿಲ್ಲ. ಕೆಲವು ಮಾಧ್ಯಮಗಳು ಬರೆಯೋದು ತಲೆಕೆಳಗೆ. ನಾವು ಹೇಳಿದ್ದು ಬೇರೆ, ನೀವು ಬರೆಯೋದೆ ಬೇರೆ ಎಂದು ತಳ್ಳಿ ಹಾಕಿ, ಶಾಸಕ ರಾಯರೆಡ್ಡಿ ಅವರೂ ಗ್ಯಾರಂಟಿಗೆ ವಿರೋಧಿಸುತ್ತಿಲ್ಲ ಎಂಬುದನ್ನು ಅವರು ಪುನರುಚ್ಚರಿಸಿದರು.
“ಐದು ವರ್ಷ ಗ್ಯಾರಂಟಿ ನಿಲ್ಲಲ್ಲ” – ನಂಬಿಕೆ ವ್ಯಕ್ತಪಡಿಸಿದ ಸಚಿವ..
“ಯಾರೇನೇ ಏನು ತಿಪ್ಪರಲಾಗಾ ಹಾಕಿದ್ರೂ, ಐದು ವರ್ಷ ಈ ಸರ್ಕಾರದ ಗ್ಯಾರಂಟಿ ಯೋಜನೆ ನಿಲ್ಲಲ್ಲ. ಇದರಲ್ಲಿ ನಾನು ಗಟ್ಟಿಯಾದ ವಿಶ್ವಾಸ ಹೊಂದಿದ್ದೇನೆ. ಏಕೆಂದರೆ ನಾನು ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷ. ಈ ಯೋಜನೆಗಳ ರೂಪುರೇಷೆ ತಯಾರಿಯಲ್ಲಿ ನನ್ನ ಪಾಲು ಇದೆ ಎಂಬುದಕ್ಕೆ ನನಗೆ ಹೆಮ್ಮೆ” ಎಂದು ಅವರು ಹೇಳಿದರು.
ಪ್ರಿಯಾಂಕಾ ಖರ್ಗೆಯ ‘RSS ನಿಷೇಧ’ ಹೇಳಿಕೆಯ ಬೆನ್ನಲ್ಲೇ ಸ್ಪಷ್ಟನೆ..
ಆರ್.ಎಸ್.ಎಸ್. ಸಂಘದ ನಿಷೇಧದ ಬಗ್ಗೆ ಕಾಂಗ್ರೆಸ್ ಸಚಿವ ಪ್ರಿಯಾಂಕಾ ಖರ್ಗೆ ನೀಡಿದ ಹೇಳಿಕೆಯ ಕುರಿತು ಮಾತನಾಡಿದ ಸಚಿವರು, “ಯಾರೇ ಸಂವಿಧಾನ ವಿರುದ್ಧ ಹೋದರೂ, ಅಂಥವರೆಲ್ಲರನ್ನೂ ಬ್ಯಾನ್ ಮಾಡೋದು ಒಳ್ಳೆಯದು, ಎಂದು ಪರೋಕ್ಷವಾಗಿ ಪ್ರಿಯಾಂಕಾ ಖರ್ಗೆಗೆ ಬೆಂಬಲ ನೀಡಿದರು.