ನರಗುಂದ: ಹಲವಾರು ಪ್ರದೇಶಗಳಲ್ಲಿ ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಒಂದಾಗಿಸಲು ನೂರಾರು ಮಹನೀಯರು ನಿರಂತರ ಶ್ರಮವಹಿಸಿ ಹೋರಾಡಿದ್ದಾರೆ. ಇದರ ಪರಿಣಾಮ ಕರ್ನಾಟಕ ಏಕೀಕರಣವಾಯಿತು. ಅದರ ಚರಿತ್ರೆ ಅರಿಯಬೇಕು ಎಂದು ನಿವೃತ್ತ ಪ್ರಾಚಾರ್ಯ ಡಾ.ಬಿ ಎಂ ಜಾಬಣ್ಣವರ ಹೇಳಿದರು.
ಗದಗ ಜಿಲ್ಲೆ ನರಗುಂದ ಪಟ್ಟಣದ ಲಯನ್ಸ್ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಶನಿವಾರ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಡೆದ ನುಡಿ ಹಬ್ಬ ಉದ್ಘಾಟಿಸಿ ಮಾತನಾಡಿದರು.
ಕನ್ನಡ, ಕನ್ನಡಿಗ ಹಾಗೂ ಕರ್ನಾಟಕ ಎಂಬುದು ಎಲ್ಲರ ಮನದಲ್ಲಿ ನೆಲೆಸಬೇಕು. ನರಗುಂದ ಸಾಹಿತ್ಯ, ಸಂಸ್ಕೃತಿಯ ಬೀಡಾಗಿದೆ. ನಮ್ಮವರೇ ಆದ ಹುಯಿಲಗೋಳ ನಾರಾಯಣರಾವ್, ಆಲೂರು ವೆಂಕಟರಾಯರ ಕೊಡುಗೆ ಅಪಾರ. ನರಗುಂದ ನೆಲಕ್ಕೂ ಹಳಗನ್ನಡ, ಜೈನಧರ್ಮಕ್ಕೂ ಪ್ರಾಚೀನ ಕಾಲದಿಂದಲೂ ನಂಟಿದೆ. ಜಾತಕ ತಿಲಕ ಬರೆದ ಶ್ರೀಧರಾಚಾರ್ಯ ನರಗುಂದದವರಾಗಿದ್ದು ಅವರ ಬಗ್ಗೆ ಅಧ್ಯಯನ ನಡೆಯಬೇಕು. ಬೇಂದ್ರೆಯವರ ಅಜ್ಜಿ ಇಲ್ಲಿಯವರಾಗಿದ್ದು ಇಲ್ಲಿಂದಲೇ ಸಾಹಿತ್ಯದ ಕಂಪು ಹರಡಿದೆ. ಆದ್ದರಿಂದ ನರಗುಂದ ಸಾಹಿತ್ಯ, ಸಂಸ್ಕೃತಿ, ರೈತ ಕ್ರಾಂತಿ ಎಲ್ಲರೂ ಅರಿತು ಕನ್ನಡ ನೆಲದ ಶ್ರೇಷ್ಟತೆ ಸಾರಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ.ಟಿ.ಗುಡಿಸಾಗರ ಮಾತನಾಡಿ ಕನ್ನಡ ಭಾಷೆ ಶ್ರೀಮಂತ ಭಾಷೆಯಾಗಿದೆ. ಕನ್ನಡಿಗರಾದ ನಾವು ಅದನ್ನು ಉಳಿಸಿ ಬೆಳೆಸಲು ಮುಂದಾಗಬೇಕು. ವಿದ್ಯಾರ್ಥಿಗಳು ನಾಡಾಭಿಮಾನ ಮೆರೆಯಬೇಕು ಎಂದರು.ಮುಖ್ಯಶಿಕ್ಷಕ ಡಾ.ವೈ.ಪಿ.ಕಲ್ಲನಗೌಡರ ಮಾತನಾಡಿ, ಕನ್ನಡ ಕವಿಗಳ ಪುಸ್ತಕ ಓದಿ, ಕನ್ನಡ ಭಾಷೆ ಬೆಳೆಸಬೇಕೆಂದರು.
ವಿದ್ಯಾರ್ಥಿನಿ ದಿವ್ಯ ತೇಜಿ ಮಾತನಾಡಿ, ಕನ್ನಡಿಗರು ಮೊದಲು ಕನ್ನಡವನ್ನು ಬೆಳೆಸಬೇಕು. ಆಗ ಮಾತ್ರ ಕನ್ನಡ ಭಾಷೆ ವಿಶ್ವದಲ್ಲಿ ಶ್ರೇಷ್ಠತೆ ಹೊಂದಲು ಸಾಧ್ಯ ಎಂದರು.
ಆಕರ್ಷಕ ಕನ್ನಡ ವಸ್ತು, ಪುಸ್ತಕ ಪ್ರದರ್ಶನ:
ವಿದ್ಯಾರ್ಥಿ ಗಳಿಂದ ಕನ್ನಡ ಕವಿಗಳ ಪುಸ್ತಕ ಪ್ರದರ್ಶನ ಗಮನ ಸೆಳೆಯಿತು. ನರಗುಂದದ ಐತಿಹಾಸಿಕ ಕೆಂಪಗಸಿ, ವೆಂಕಟೇಶ್ವರ ದೇವಾಲಯ, ಹಂಪಿಯ ಕಲ್ಲಿನ ರಥ, ಕರ್ನಾಟಕದ ನದಿಗಳು, ಹಲ್ಮಿಡಿ ಶಾಸನ, ತ್ರಿಪದಿ ಶಾಸನದ ಮಾದರಿಗಳು ಗಮನ ಸೆಳೆದವು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಪಂಪ ಪ್ರಶಸ್ತಿ , ಕರ್ನಾಟಕ ಪ್ರಶಸ್ತಿ ಪುರಸ್ಕೃತರ ವಸ್ತು ಪ್ರದರ್ಶನ ಗಮನ ಸೆಳೆಯಿತು. ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ಪ್ರದರ್ಶನವಾಯಿತು.
ಸಮಾರಂಭದಲ್ಲಿ ನಿರ್ದೇಶಕ ಸಿ.ಎಸ್.ಸಾಲೂಟಗಿಮಠ, ಡಾ.ವಿ ಎಸ್ ಪಾಟೀಲ ಹಾಗೂ ಬೋಧಕ/ಬೋಧಕೇತರ ಸಿಬ್ಬಂದಿ ಇದ್ದರು.ಡಾ.ಬಸವರಾಜ ಹಲಕುರ್ಕಿ ಸ್ವಾಗತಿಸಿದರು.ಶಿಕ್ಷಕಿಯರಾದ ಸರಸ್ವತಿ ಅಕ್ಕಿ ಹಾಗೂ ಅನ್ನಪೂರ್ಣ ಹೂಗಾರ ಜಂಟಿಯಾಗಿ ನಿರೂಪಿಸಿದರು.ಶಿವಾನಂದ ಮಲ್ಲಾಪುರ ವಂದಿಸಿದರು.