ಮುಂಡರಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮುಂಡರಗಿ ಶಾಖೆಯಿಂದ 2025 ನೇ ವರ್ಷದ ದಿನಚರಿ ಮತ್ತು ಕ್ಯಾಲೆಂಡರ್ ಬಿಡುಗಡೆ, ಸಂಘದ ಪದಾಧಿಕಾರಿಗಳು, ನಿರ್ದೇಶಕರ ಪದಗ್ರಹಣ ಹಾಗೂ ನಿವೃತ್ತ ನೌಕರರ ಸೇವಾ ಸ್ಮರಣೆ ಕಾರ್ಯಕ್ರಮವನ್ನು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಭಾಭವನದಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮುಂಡರಗಿ ತಹಶೀಲ್ದಾರ ಎಸ್ ಎರಿಸ್ವಾಮಿ ಅವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ದಿನಚರಿ ಬಿಡುಗಡೆಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿಶ್ವನಾಥ ಎಚ್ ನೆರವೇರಿಸಿದರು. ಕ್ಯಾಲೆಂಡರ್ ಬಿಡುಗಡೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ರವಿ ಗುಂಜಿಕರವರು ಬಿಡುಗಡೆ ಮಾಡಿದರು.

ಈ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿದ ಮಹೇಶ ಅಲ್ಲಿಪುರ, ರಾಜ್ಯ ಸರ್ಕಾರಿ ನೌಕರರ ಸಂಘ ಇದುವರೆಗೂ ನಡೆದು ಬಂದ ಹಾದಿ ಮತ್ತು ನೌಕರರ ಪರವಾಗಿ ಮಾಡಿದ ಹೋರಾಟ ಹಾಗೂ ಜಾರಿಯಾದ ಯೋಜನೆಗಳ ಕುರಿತು ತಿಳಿಸಿದರು.
ತಹಶೀಲ್ದಾರ ಪಿ ಎಸ್ ಎರಿಸ್ವಾಮಿ ಅವರು ಮಾತನಾಡಿ, ಶಾಸಕಾಂಗ ಯಶಸ್ವಿ ಆಡಳಿತ ನಡೆಸಲು ಕಾರ್ಯಾಂಗದ ನೌಕರರು ಪ್ರಾಮಾಣಿಕ ಪ್ರಯತ್ನವೇ ಕಾರಣ, ಯಾವುದೇ ಸರ್ಕಾರ ಆಡಳಿತ ವ್ಯವಸ್ಥೆಯಲ್ಲಿ ವಿಶೇಷವಾಗಿ ಮೂರು ಅಂಗಗಳಿದ್ದು ಅದರಲ್ಲಿ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ. ಇದರಲ್ಲಿ ಶಾಸಕಾಂಗ ಯಾವುದೇ ಯೋಜನೆಗಳನ್ನ ಜಾರಿಗೆ ತಂದ ಸಂದರ್ಭದಲ್ಲಿ ಅದನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಯಶಸ್ವಿಯಾಗಿ ತಲುಪಿಸುವ ಕಾರ್ಯವನ್ನು ನಿರ್ವಹಿಸುವುದು ಕಾರ್ಯಾಂಗ ಮಾತ್ರ. ಅದರ ಯಶಸ್ವಿಯಲ್ಲಿ ರಾಜ್ಯದ ಸರ್ಕಾರಿ ನೌಕರರು ಒತ್ತಡದ ನಡುವೆ ಖಾಲಿ ಹುದ್ದೆಗಳ ನಡುವೆ ಕೆಲಸ ನಿರ್ವಹಿಸುವುದೇ ದೊಡ್ಡ ಸವಾಲಾದರೂ ಸಹ ಯಶಸ್ವಿಯಾಗಿ ನಿರ್ವಹಿಸುತ್ತಿರುವದೇ ಕಾರಣ.ಹೀಗಾಗಿ ಅವರಿಗೆ ಸೂಕ್ತ ಯೋಜನೆಗಳನ್ನು ತಲುಪಿಸಲು ಸಂಘದ ಹೋರಾಟ ಮತ್ತು ಜವಾಬ್ದಾರಿ ಬಹಳ ಮುಖ್ಯವಾಗಿರುತ್ತದೆ ಎಂದರು.
ನಂತರ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿಶ್ವನಾಥ ಎಚ್ ಮಾತನಾಡಿ, ತಾಲೂಕ ಕರ್ನಾಟಕ ರಾಜ್ಯ ಸಂಘ ನೌಕರರ ಪರವಾಗಿ ಕೆಲಸ ಮಾಡುತ್ತಿದ್ದು ನೌಕರರ ಬೇಡಿಕೆಗಳನ್ನ ಸರ್ಕಾರದ ಹಂತಕ್ಕೆ ತಲುಪಿಸುವಲ್ಲಿ ಮನವಿ ನೀಡುವ ಮೂಲಕ ಬೆನ್ನೆಲುಬಾಗಿದೆ ಎಂದರು.
ಜಿಲ್ಲಾಧ್ಯಕ್ಷ ರವಿ ಗುಂಜಿಕರ ಅವರು ಮಾತನಾಡಿ, ಕರ್ನಾಟಕ ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷರು ಏಳನೇ ವೇತನ ಆಯೋಗಕ್ಕಾಗಿ ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿ ಅದನ್ನು ಜಾರಿಗೆ ಗೊಳಿಸುವ ಮೂಲಕ ನೌಕರರ ಮೊದಲ ಬೇಡಿಕೆಯನ್ನ ಈಡೇರಿಸಿಕೊಳ್ಳಲು ಶ್ರಮಿಸಿದ್ದಾರೆ.ಮುಂದೆ ಕೂಡ ಎನ್‌ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೆ ಮಾಡುವುದು ಈ ವರ್ಷದ ಮೊದಲ ಕೆಲಸವಾಗಿದೆ. ಪ್ರತಿಯೊಬ್ಬ ನೌಕರರು ಒತ್ತಡದ ಮಧ್ಯೆಯೂ ಕೂಡ ಕೆಲಸ ಮಾಡುತ್ತಿದ್ದು ಖಾಲಿ ಇರುವ ಹುದ್ದೆಗಳನ್ನ ಸರ್ಕಾರ ಭರ್ತಿ ಮಾಡುವ ತನಕ ನಮ್ಮ ಹೋರಾಟದ ಕೆಲಸವಾಗಿದೆ ಎಂದರು.
ತಾಲೂಕು ಅಧ್ಯಕ್ಷರಾದ ನಾಗರಾಜ್ ಹಳ್ಳಿಕೆರಿಯವರು ಮಾತನಾಡಿ, ಸರ್ಕಾರಿ ನೌಕರರ ಗಂಭೀರ ಸಮಸ್ಯೆಗಳಾದ ಎನ್.ಪಿ.ಎಸ್ ಹೋಗಲಾಡಿಸಲು ಸರ್ಕಾರಿ ನೌಕರರ ಸಂಘ ಬದ್ಧವಾಗಿರುತ್ತದೆ. ಮತ್ತು ಕರ್ನಾಟಕ ಸುವರ್ಣ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಕ್ಕಾಗಿಯೂ ಸಂಘ ನಿರಂತರ ಹೋರಾಟ ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಇಲಾಖೆಯ ಮುಖ್ಯ ಅಧಿಕಾರಿಗಳು ಹಾಗೂ ನೌಕರರು ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.