Home » News » ಕಪ್ಪತಗುಡ್ಡ ವನ್ಯಜೀವಿ ಧಾಮವಿನ್ನು ‘ಪರಿಸರ ಸೂಕ್ಷ್ಮ ವಲಯ..

ಕಪ್ಪತಗುಡ್ಡ ವನ್ಯಜೀವಿ ಧಾಮವಿನ್ನು ‘ಪರಿಸರ ಸೂಕ್ಷ್ಮ ವಲಯ..

by CityXPress
0 comments

ಕಪ್ಪತಗುಡ್ಡದ 322 ಚದರ ಕಿ.ಮೀ ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶವಾಗಿ ಅಂತಿಮ ಅಧಿಸೂಚನೆ ಪ್ರಕಟ : ಸಚಿವ ಎಚ್.ಕೆ.ಪಾಟೀಲ

ಗದಗ: 24: ಕಪ್ಪತಗುಡ್ಡ ವನ್ಯಜೀವಿ ಧಾಮವು “ಪರಿಸರ ಸೂಕ್ಷ್ಮ ವಲಯ ಎಂದು ಕೇಂದ್ರ ಅರಣ್ಯ ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಜರುಗಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಗದಗಿನ ಕಪ್ಪತಗುಡ್ಡ ರಕ್ಷಣೆಗೆ ಈ ಹಿಂದೆ ನಡೆದ ಹೋರಾಟವನ್ನು ನೆನಪಿಸಿಕೊಂಡ ಅವರು ಗದಗಿನ ತೋಂಟದಾರ್ಯ ಶ್ರೀಗಳ ನೇತೃತ್ವದಲ್ಲಿ ಜರುಗಿದ ಹೋರಾಟದ ಫಲವಾಗಿ ಇಂದು ಕಪ್ಪತಗುಡ್ಡ ಸಂರಕ್ಷಣೆಯಾಗಿದೆ. ಜಿಲ್ಲೆಯ ಜನತೆ ಶುದ್ಧ ಗಾಳಿ , ಪರಿಸರ ಸವಿಯಲು ಸಾಧ್ಯವಾಗಿದೆ ಎಂದರು.

ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ವಿಶೇಷ ಆಸಕ್ತಿ ಹಾಗೂ ಗಂಭೀರ ಕೆಲಸದ ಮೂಲಕ ಕಪ್ಪತಗುಡ್ಡ ಸೂಕ್ಷ್ಮ ಪ್ರದೇಶವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮಾರ್ಗದರ್ಶನದಲ್ಲಿ ಈ ಕಾರ್ಯ ಸಾಧ್ಯವಾಗಿದೆ ಎಂದು ಹೇಳಿದರು.

banner

ಜಿಲ್ಲೆಯ ಜನತೆಗೆ ಅಮೂಲ್ಯ ಆಸ್ತಿ ನಮ್ಮ ಕಪ್ಪತಗುಡ್ಡ ಇದರ ಸಂರಕ್ಷಣೆಯಲ್ಲಿ ತೊಡಗಿದ ಹಾಗೂ ಹೋರಾಟದಲ್ಲಿ ಪಾಲ್ಗೊಂಡ ಎಲ್ಲರೂ ಅಭಿನಂದನಾರ್ಹರು ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಗದಗ ಜಿಲ್ಲೆಯ ಕಪ್ಪತ್ತಗುಡ್ಡ ವನ್ಯಜೀವಿ ಧಾಮ 322 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ. ಈ ಹಿಂದೆ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿತ್ತು. ಅದಾದ ಬಳಿಕ ಅಂತಿಮ ಅಧಿಸೂಚನೆ ಸಂಖ್ಯೆ:2485 ದಿನಾಂಕ : 04-06-2025 ರಂದು ಆದೇಶ ಹೊರಡಿಸಿದೆ ಎಂದು ತಿಳಿಸಿದರು.

ಕಪ್ಪತ್ತಗುಡ್ಡ ವ್ಯಾಪ್ತಿಯು ಜಿಲ್ಲೆಯ ಮುಂಡರಗಿ, ಗದಗ, ಶಿರಹಟ್ಟಿ ಲಕ್ಷೇಶ್ವರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಹರಡಿದ್ದು ಇರುತ್ತದೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಂದಾಯ ಗ್ರಾಮಗಳ 298.89 ಚದರ ಕಿ.ಮೀ ಹಾಗೂ ಅಧಿಸೂಚಿತ ಅರಣ್ಯ ಪ್ರದೇಶಗಳ 23.80 ಕಿ.ಮೀ ಸೇರಿದೆ. ಈ ಪ್ರದೇಶದಲ್ಲಿ 62 ಗ್ರಾಮಗಳಿವೆ. ಪರಿಸರ ಸೂಕ್ಷ್ಮ ಪ್ರದೇಶವನ್ನು ಕನಿಷ್ಠ 4.30 ಕಿ. ಮೀವರೆಗೆ ಗುರುತಿಸಲಾಗಿದೆ ಎಂದರು.

ಕಪ್ಪತ್ತಗುಡ್ಡ ವನ್ಯಜೀವಿಧಾಮದ ಗಡಿಯಿಂದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿ ಕಂದಾಯ ಭೂಮಿ ಇರುವ ಕಡೆಗಳಲ್ಲಿ ಕನಿಷ್ಠ 1.00 ಕಿಮೀ ಅಂತರ ಇರುತ್ತದೆ ಮತ್ತು ಕಾಯ್ದಿಟ್ಟ ಅರಣ್ಯ ಪ್ರದೇಶ ಇರುವ ಕಡೆಗಳಲ್ಲಿ ಗರಿಷ್ಠ 4.30 ಕಿ. ಮೀ ಅಂತರ ಇರುತ್ತದೆ. ಕಪ್ಪತ್ತಗುಡ್ಡ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ವಲಯದ ಒಟ್ಟು ವಿಸ್ತೀರ್ಣ 322.695 ಚ.ಕಿ.ಮೀ. ಇರುತ್ತದೆ ಎಂದು ಹೇಳಿದರು.

ಅನುಮತಿಸಲಾದ ಚಟುವಟಿಕೆಗಳು: ಮಳೆ ನೀರು ಕೊಯ್ಲು, ಸಾವಯವ ಕೃಷಿ. ಎಲ್ಲಾ ಚಟುವಟಿಕೆಗಳಿಗೆ ಹಸಿರು ತಂತ್ರಜ್ಞಾನದ ಅಳವಡಿಕೆ, ಸ್ಥಳೀಯ ಸಮುದಾಯಗಳಿಂದ ನಡೆಯುತ್ತಿರುವ ಕೃಷಿ ಮತ್ತು ತೋಟಗಾರಿಕೆ ಪದ್ಧತಿಗಳು, ಈ ಕೆಲವು ಚಟುವಟಿಕೆಗಳ ಅತಿಯಾದ ವಿಸ್ತರಣೆಯನ್ನು ಮಾಸ್ಟರ್ ಯೋಜನೆಯ ಪ್ರಕಾರ ನಿಯಂತ್ರಿಸಬೇಕು.ನವೀಕರಿಸಬಹುದಾದ ಇಂಧನ ಮತ್ತು ಶುದ್ಧ ಇಂಧನಗಳ ಬಳಕೆ- ಜೈವಿಕ ಅನಿಲ, ಸೌರಶಕ್ತಿ, ಸಿಎನ್‌ಜಿ, ಎಲ್ ಪಿಜಿ ಇತ್ಯಾದಿಗಳು, ಕೃಷಿ-ಅರಣ್ಯ, ಪರಿಸರ ಸ್ನೇಹಿ ಸಾರಿಗೆಯ ಬಳಕೆ, ಕ್ಷೀಣಿಸಿದ ಭೂಮಿ/ ಅರಣ್ಯಗಳು/ ಆವಾಸಸ್ಥಾನದ ಪುನಃಸ್ಥಾಪನೆ .ಪರಿಸರ ಜಾಗೃತಿ ಈ ಎಲ್ಲ ಚಟುವಟಿಕೆ ಕೈಗೊಳ್ಳಲು ಅನುಮತಿಸಲಾಗಿದೆ.

ನಿರ್ಭಂಧಿತ ಚಟುವಟಿಕೆಗಳು : ಈಗಿರುವ ಹಾಗೂ ಹೊಸ ವಾಣಿಜ್ಯ ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಕಲ್ಲುಪುಡಿ ಮಾಡುವ ಘಟಕಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆಗಳ ಸ್ಥಾಪನೆಗೆ ನಿರ್ಭಂದ, ಯಾವುದೇ ಹೊಸ ಉಷ್ಣ ವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ. ಯಾವುದೇ ಅಪಾಯಕಾರಿ ವಸ್ತು ಬಳಕೆ, ಉತ್ಪಾದನೆ ಅಥವಾ ಸಂಸ್ಮರಣೆಗೆ ನಿರ್ಭಂದ, ನೈಸರ್ಗಿಕ ಜಲಮೂಲಗಳ ಅಥವಾ ಸಂಸ್ಕರಿಸದ ತ್ಯಾಜ್ಯಗಳ ವಿಸರ್ಜನೆಗೆ ನಿಷೇಧ, ಹೊಸದಾಗಿ ಘನತ್ಯಾಜ್ಯ ವಿಲೇವಾರಿ ಘಟಕ ಮತ್ತು ಜೈವಿಕ, ವೈದ್ಯಕೀಯ ತ್ಯಾಜ್ಯ ಸುಡುವ ಘಟಕಕ್ಕೆ ಅವಕಾಶವಿರುವುದಿಲ್ಲ. ಈಗಿರುವ ಹಾಗೂ ಹೊಸದಾಗಿ ಇಟ್ಟಿಗೆ ಗೂಡುಗಳ ಘಟಕ ಸ್ಥಾಪನೆಗೆ ನಿಷೇಧ, ಮರದ ಮಿಲ್‌ಗಳಿಗೆ ನಿರ್ಭಂಧ, ದೊಡ್ಡ ಪ್ರಮಾಣದಲ್ಲಿ ಜಾನುವಾರು ಹಾಗೂ ಕೋಳಿಗಳ ಧಾರ್ಮಗಳಿಗೆ ಅವಕಾಶವಿಲ್ಲ, ಮರ ಆಧಾರಿತ ಕೈಗಾರಿಕೆಗಳನ್ನು ಆರಂಭಿಸುವಂತಿಲ್ಲ, ಪರಿಸರ ಸೂಕ್ಷ್ಮ ಪ್ರದೇಶದ ಒಂದು ಕಿ.ಮೀ ವ್ಯಾಪ್ತಿಯೊಳಗೆ ಹೋಟೆಲ್‌ಗಳು ಹಾಗೂ ರೆಸಾರ್ಟಗಳನ್ನು ತೆರೆಯುವಂತಿಲ್ಲ.

ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕ ಡಿ.ಆರ್.ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ತಾಲೂಕಾ ಅಧ್ಯಕ್ಷ ಅಶೋಕ ಮಂದಾಲಿ, ಸಿದ್ಧು ಪಾಟೀಲ,ಫಾರೂಕ್ ಹುಬ್ಬಳ್ಳಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ್ ಹಾಜರಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb