ಮುಂಡರಗಿ: ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ‘ಶ್ರೀ ಜಗದ್ಗುರು ಅನ್ನದಾನೀಶ್ವರ ಸಾಹಿತ್ಯ ಭವನ’ ದ ಕಟ್ಟಡ ನಿರ್ಮಾಣವಾಗುತ್ತಿದೆ. ಸಾಹಿತ್ಯಕ್ಕೆ ಹೆಸರಾಗಿರುವ ಸ್ಥಳಿಯ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದ ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು, ಸಾಹಿತ್ಯ ಭವನಕ್ಕೆ ಭೂ ದಾನ ಮಾಡಿದ್ದಾರೆ.
ಶ್ರೀಗಳ ಮೇರು ಸಾಹಿತ್ಯದ ಪ್ರೇರಣಾನುಸಾರ ಮೃಡಗಿರಿ ನಾಡು ಅತ್ಯುನ್ನತ ಸಾಹಿತ್ಯ ಸಾಧಕರನ್ನು ಹಾಗೂ ಸಾಹಿತ್ಯಾಸಕ್ತರನ್ನ ಹೊರಹೊಮ್ಮಿಸಿದೆ. ಪರಿಣಾಮ ಸಾಹಿತ್ಯ, ಸಂಸ್ಕೃತಿ,ಕಾರ್ಯ ಚಟುವಟಿಕೆಗಳಿಗೆ ವೇದಿಕೆಯಾಗಿ ಸಾಹಿತ್ಯ ಭವನ ನಿರ್ಮಾಣವಾಗುತ್ತಿದೆ.
ಆದರೆ ಇಲ್ಲಿ ಗಮನಾರ್ಹ ಸಂಗತಿ ಎಂದರೆ, ಈಗಾಗಲೇ ಭವನದ ಕಟ್ಟಡ ಕಾಮಗಾರಿ ಸ್ಲ್ಯಾಬ್ ವರೆಗೂ ಬಂದು ನಿಂತಿದೆ. ಪ್ರಾರಂಭದಲ್ಲಿ ಪ್ಲಿಂತ್ ಮಟ್ಟದ ವರೆಗೂ ನಿರ್ಮಿತ ಕೇಂದ್ರದ ಅನುದಾನದ ಸಹಾಯ ಪಡೆದಿದ್ದು ಬಿಟ್ಟರೆ, ನಂತರದಲ್ಲಿ ಸ್ವತಂತ್ರವಾಗಿ ಪರಿಷತ್ ಸದಸ್ಯರಿಂದ ಹಾಗೂ ಉದಾರ ದಾನಿಗಳಿಂದಲೇ ಕಟ್ಟಡ ಕಾಮಗಾರಿ ಕೈಗೊಂಡಿದ್ದು, ಈವರೆಗೂ ಸರ್ಕಾರದ ಅನುದಾನವಿಲ್ಲದೆ ಭವನ ನಿರ್ಮಾಣವಾಗಿದೆ.
ಮುಂಡರಗಿ ನಾಡಿನ ಸಾಹಿತ್ಯಾಸಕ್ತರ ಇಚ್ಛಾಶಕ್ತಿ, ಅಭಿಲಾಷೆ, ಅಭಿಮಾನ, ಪ್ರೇರಣೆಯೇ ಸಾಹಿತ್ಯ ಭವನ ಮೇಲೆಳಲು ಸಾಧ್ಯವಾಗಿದೆ ಅನ್ನೋದು ಜಿಲ್ಲೆಯ ನಾಗರಿಕರ ಪ್ರಶಂಸೆಯ ಮಾತಾಗಿದೆ.
ಇನ್ನು ನಿರ್ಮಾಣವಾಗುತ್ತಿರುವ ಭವನದ ಕಟ್ಟಡ ಕಾಮಗಾರಿ ಸ್ಥಳಕ್ಕೆ ಸರ್ಕಾರದ ಜನಪ್ರತಿನಿಧಿ, ಶಿರಹಟ್ಟಿ ಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ ಭೇಟಿ ನೀಡಿ ವೀಕ್ಷಣೆ ಮಾಡಿದ್ರು. ಸಾಹಿತ್ಯಾಸಕ್ತರ ಸ್ವ ಇಚ್ಛಾಶಕ್ತಿ ಮೇರೆಗೆ, ಸರ್ಕಾರದ ಅನುದಾನವಿಲ್ಲದೇ ಸಾಹಿತ್ಯ ಭವನ ನಿರ್ಮಾಣವಾಗುತ್ತಿರುವದಕ್ಕೆ ಸಂತಸ ವ್ಯಕ್ತಪಡಿಸಿದರು.
ಅಲ್ಲದೇ, ವೈಯಕ್ತಿಕವಾಗಿ ಶಾಸಕರ ಸಹಕಾರ ಕೋರಿದ ಕಸಾಪ ಸದಸ್ಯರ ಮನವಿಗೆ ಸ್ಪಂದಿಸಿದ ಅವರು, ಖಂಡಿತ ತಮ್ಮ ಕೈಲಾದ ಮಟ್ಟದಲ್ಲಿ ಸಾಹಿತ್ಯ ಭವನಕ್ಕೆ ಸಹಕಾರ ನೀಡಲಿದ್ದೇನೆ ಎಂದು ಭರವಸೆ ನೀಡಿದರು. ಈ ವೇಳೆ ಸಾಹಿತ್ಯ ಪರಿಷತ್ತಿನ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.