ನರಗುಂದ: ತಾಲೂಕಿನಲ್ಲಿನ ಬೆಣ್ಣೆಹಳ್ಳ, ಮಲಪ್ರಭಾ ಕೊಳಚೆ ಕಾಲುವೆಗಳಿಗೆ ಎರಡು ದಶಕದ ಹಿಂದೆ ನಿರ್ಮಿಸಲಾದ 10 ಜಾಕವೆಲ್ ಗಳು ಇದ್ದೂ ಇಲ್ಲದಂತಾಗಿ ಕೇವಲ ಖಾಲಿ ಕಟ್ಟಡಗಳಾಗಿವೆ. ಎಂದೋ ಒಮ್ಮೆ ನೀರನ್ನು ಮೇಲೆತ್ತಿ ಜಮೀನಿಗೆ ಹರಿಸಿದ್ದನ್ನು ಬಿಟ್ಟರೆ ಏತ ನೀರಾವರಿ ಯೋಜನೆಗಳು ನಿಷ್ಪ್ರಯೋಜಕವಾಗಿವೆ.
ರೈತರಿಗೆ ವರದಾನವಾಗಬೇಕಿದ್ದ ಏತ ನೀರಾವರಿ ಯೋಜನೆ ಶಾಪವಾಗಿ ಪರಿಣಮಿಸಿದೆ.
10 ಏತ ನೀರಾವರಿ ಯೋಜನೆ : ಹದ್ಲಿ-ಮದಗುಣಕಿ, ಗಂಗಾಪುರ, ಸುರಕೋಡ, ರಡ್ಡೇರನಾಗನೂರ, ಖಾನಾಪುರ, ಬನಹಟ್ಟಿ, ಮೂಗನೂರ, ಕುರ್ಲಗೇರಿ, ಕೊಣ್ಣೂರ ಗ್ರಾಮಗಳ ಜಮೀನುಗಳಿಗೆ ಬೆಣ್ಣೆಹಳ್ಳ ಹಾಗೂ ಕೊಳಚೆ ಕಾಲುವೆ ಮೂಲಕ ಜಮೀನುಗಳಿಗೆ ನೀರು ಹರಿಸಲು
ಎರಡು ದಶಕಗಳ ಹಿಂದೆಯೇ ನಿರ್ಮಾಣ ಗೊಂಡಿವೆ. ಆದರೀಗ ಯಾವುದು ಆರಂಭವಿಲ್ಲ.
ಇದರಿಂದ ಪ್ರತಿ ವರ್ಷದಂತೆ ಹಿಂಗಾರು ಹಂಗಾಮಿನಲ್ಲಿ ರೈತರು ತೊಂದರೆ ಅನುಭವಿಸುವಂತಾಗಿದೆ. 12,513 ಹೆಕ್ಟೇರ್ ಭೂಮಿಗೆ ನೀರು ಉಣಿಸಬೇಕಿತ್ತು. ಆದರೆ ಅದು ನೆರವೇರಲಿಲ್ಲ. ಸರಿಯಾಗಿ ನಿರ್ವಹಣೆ ಮಾಡದಿರುವುದು ಪ್ರಮುಖ ಕಾರಣವಾದರೆ, ಈ ಮೊದಲು ಜೋಡಿಸಿದ್ದ ಕಾಂಕ್ರೀಟ್ ಪೈಪುಗಳು ಮುಖ್ಯವಾಗಿ ದುರಸ್ತಿಯಲ್ಲಿವೆ. ಜೊತೆಗೆ ವಿದ್ಯುತ್ತ ಕಂಬಗಳು ನೆಲಕಚ್ಚಿ ಟಿಸಿಗಳು ಹಾಳಾಗಿವೆ. ಪ್ರಸಕ್ತ ವರ್ಷದ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಗಂಗಾಪೂರ ಮತ್ತು ಮದುಗುಣಿಕಿ ಜಾಕವೆಲ್ಲಗಳಲ್ಲಿನ ಟ್ರಾನ್ಸಪರ್ಮರಗಳ ತಾಮ್ರದ ತಂತಿ ಕಳುವಾಗಿ ಜಾಕವೆಲ್ ಕೆಟ್ಟು ನಿಂತಿವೆ.
ದುರಸ್ತಿಗಾಗಿ ಅಂದಾಜು ₹44 ಲಕ್ಷ ಖರ್ಚಾಗಲಿದೆ. ಮೇಲಾಧಿಕಾರಿಗಳ ಇಲಾಖೆಗೆ ಎಸ್ಟಿಮೇಟ್ ತಯಾರಿಸಿ ಕಳಿಸಲಾಗಿದೆ. ಅನುದಾನ ಬಿಡುಗಡೆಯಾಗಿ ಬಂದ ಮೇಲೆ ಟೆಂಡರ ಕರೆದು ಕಾಮಗಾರಿ ಪ್ರಾರಂಭಿಸಬೇಕಾಗಿದೆ. ಜಾಕವೆಲ್ಲನಲ್ಲಿ ವಿದ್ಯುತ್ ಸಂಪರ್ಕವೂ ಇಲ್ಲ. ಹೆಸರಿಗೆ ಮಾತ್ರ ಜಾಕವೆಲ್ ಎಂಬಂತಾಗಿವೆ.
ಆರಂಭವಾಗದ ಕಾಮಗಾರಿ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾಕವೆಲ್ಲಗಳ ದುರಸ್ತಿಗೆ ₹80 ಕೋಟಿ ಅನುದಾನದ ಕಾಮಗಾರಿಗೆ ಶಾಸಕ ಸಿ ಸಿ ಪಾಟೀಲ ಅವರಿಂದ ಭೂಮಿ ಪೂಜೆಯೂ ನಡೆದಿದೆ. ನಂತರದ ದಿನಗಳಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಜರುಗಿ ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬಂದು ಅನುದಾನವನ್ನು ಸ್ಥಗಿತಗೊಳಿಸಿತು. ಈ ಕಾರಣದಿಂದ ಕಾಮಗಾರಿ ನಡೆಯದೇ ನೀರಾವರಿ ಇಲಾಖೆಯ ಕಾರ್ಯವೈಖರಿಗೆ ಸಾಕ್ಷಿಯಾಗಿದೆ.