Home » News » ಗದಗನ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲಿ ಇಂದಿರಾ‌ ಕ್ಯಾಂಟೀನ್: ಅಗಸ್ಟ 15 ರಂದು ಲೋಕಾರ್ಪಣೆಗೆ ಕ್ರಮ ವಹಿಸಿ: ಸಚಿವ ಎಚ್.ಕೆ.ಪಾಟೀಲ..

ಗದಗನ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲಿ ಇಂದಿರಾ‌ ಕ್ಯಾಂಟೀನ್: ಅಗಸ್ಟ 15 ರಂದು ಲೋಕಾರ್ಪಣೆಗೆ ಕ್ರಮ ವಹಿಸಿ: ಸಚಿವ ಎಚ್.ಕೆ.ಪಾಟೀಲ..

by CityXPress
0 comments

ಗದಗ: ಜೂನ್ 24: ಅಪೂರ್ಣ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಮೂಲಕ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಕಾರ್ಯಕ್ಕೆ ಅಧಿಕಾರಿ ವರ್ಗ ಸದಾ ಸರ್ವಸನ್ನದ್ಧ ಎಂಬುದನ್ನು ಸಾಬೀತುಪಡಿಸಬೇಕು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನೆನೆಗುದಿಗೆ ಬಿದ್ದಿರುವ ಅಪೂರ್ಣ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.

ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯ ಸೌಲಭ್ಯ ಬಡಜನರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಇಲಾಖೆಯ ಅಧಿಕಾರಿಗಳದ್ದಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ವಿಶೇಷ ಆಸಕ್ತಿಯಿಂದ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಬಡವರು ಮತ್ತು ಕಾರ್ಮಿಕರಿಗೆ ಕೈಗೆಟಕುವ ದರದಲ್ಲಿ ಊಟ, ಉಪಹಾರ ಒದಗಿಸುವ ಮಹಾತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ ಯೋಜನೆಯು ಅನುಷ್ಟಾನಗೊಂಡಿದೆ.

ಗದಗ ನಗರದ ಪಂಡಿತ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದ ಆವರಣದಲ್ಲಿ ಅಗಸ್ಟ 15 ರಂದು ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದರು. ಈ ಕುರಿತು ಸಂಬಂಧಿತ ಅಧಿಕಾರಿ ವರ್ಗ ಕಾರ್ಯೋನ್ಮುಖವಾಗಲು ನಿರ್ದೇಶನ ನೀಡಿದರು.

banner

ಗಂಗಿಮಡಿಯಲ್ಲಿ ಬಡವರಿಗಾಗಿ ಜಿ+ ಮಾದರಿಯಲ್ಲಿನ 3630 ಮನೆಗಳ ಸಮುಚ್ಛಯ ನಿರ್ಮಾಣ ಕಾಮಗಾರಿ ವಿವಿಧ ಹಂತದಲ್ಲಿ ಪ್ರಗತಿಯಲ್ಲಿದ್ದು ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಲು ಇರುವ ತಾಂತ್ರಿಕ ತೊಂದರೆ ಪರಿಹಾರ ಕಂಡುಕೊಳ್ಳಿ. ಸರ್ಕಾರದ ಹಂತದಲ್ಲಿ ದೊರೆಯಬೇಕಾದ ಅನುಮೋದನೆಗಳಿದ್ದಲ್ಲಿ ತಮ್ಮ ಗಮನಕ್ಕೆ ತರುವ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಒಟ್ಟಾರೆ ಬಡವರಿಗಾಗಿ ನಿರ್ಮಿಸುತ್ತಿರುವ ವಸತಿ ಸಮುಚ್ಛಯ ಕಾಮಗಾರಿ ಪೂರ್ಣಗೊಳಿಸಲು ಶ್ರಮಿಸುವಂತೆ ತಿಳಿಸಿದರು.

ಹಲವು ವರ್ಷದಿಂದ ತಾ.ಪಂ. ಕಚೇರಿಯ ನೂತನ ಕಟ್ಟಡದ ನಿರ್ಮಾಣ ಕಾರ್ಯ ನಿಧಾನಗತಿಯಲ್ಲಿ ಸಾಗಿದೆ. ಪರಿಷ್ಕೃತ ಅಂದಾಜು ವೆಚ್ಚ ಪಡೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸುಮ್ಮನೆ ಕೂಡದೇ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು ಸರ್ಕಾರದಿಂದ ಅನುದಾನ ಬಿಡುಗಡೆ ಸೇರಿದಂತೆ ಎಲ್ಲ ರೀತಿಯ ಒಪ್ಪಿಗೆ ಪಡೆದು ಕಾಮಗಾರಿ ಪೂರ್ಣಗೊಳಿಸಲು ಗಮನ ಹರಿಸುವಂತೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಲ್ಲಯ್ಯ ಅವರಿಗೆ ಸೂಚಿಸಿದರು.

ಬೇಸಿಗೆಯಲ್ಲಿ ಅವಳಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ತಗ್ಗಿಸಲು ಕೈಗೊಂಡ ಯೋಜನೆ ಕೆರೆ ನಿರ್ಮಾಣ ಕಾಮಗಾರಿಯಾಗಿದೆ. ಈ ಕೆರೆ ನಿರ್ಮಾಣ ಕಾಮಗಾರಿಯನ್ನು ಪಾಪನಾಶಿ ಹತ್ತಿರ ನಿರ್ಮಿಸಲು ಉದ್ದೇಶಿಸಿ ಹಲವು ವರ್ಷಗಳೇ ಗತಿಸಿದರೂ ಕಾಮಗಾರಿ ಪ್ರಗತಿ ಸಾಧಿಸದ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸುತ್ತಾ , ಇರುವ ತಾಂತ್ರಿಕ ಹಾಗೂ ಆರ್ಥಿಕ ತೊಂದರೆಗಳ ಪರಿಹಾರಕ್ಕೆ ಶೀಘ್ರವಾಗಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಆ ಮೂಲಕ ಅವಳಿ ನಗರದ ಜನತೆಗೆ ನೀರಿನ ಸಮರ್ಪಕ ಪೂರೈಕೆ ಸಾಧ್ಯವಾಗಲಿದೆ ಎಂದರು.

ಅಂಧ ಅನಾಥರ ಬಾಳಿನಲ್ಲಿ ನಿರಂತರ ಜ್ಯೋತಿಯಾಗಿ ಬೆಳಗುತ್ತಿರುವ ನಗರದ ಲಿಂ. ಪಂಡಿತ ಪುಟ್ಟರಾಜ ಗವಾಯಿಗಳವರ ಸ್ಮಾರಕ ಭವನದ ಎಲ್ಲ ಹಂತದ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇದಕ್ಕೆ ಅಗತ್ಯವಿರುವ ಪರಿಷ್ಕೃತ ಅಂದಾಜು ಪಟ್ಟಿಯನ್ನು ಇಂದೇ ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ಲೋಕೋಪಯೋಗಿ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು.

ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಮಂಜೂರಾಗಿರುವ ಒಟ್ಟು ಪೌರಕಾರ್ಮಿಕರ ಹುದ್ದೆಗಳು ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಖಾಯಂ ಪೌರಕಾರ್ಮಿಕರ ಸಂಖ್ಯೆ ಮತ್ತು ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರ ವಿವರಗಳನ್ನು ಸಲ್ಲಿಸಬೇಕು. ಜೊತಗೆ ಪೌರಕಾರ್ಮಿಕರನ್ನು ಖಾಯಂಗೊಳಿಸುವ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಬೇಕೆಂದು ನಗರಸಭೆ ಅಧಿಕಾರಿಗಳಿಗೆ ಎಚ್.ಕೆ. ಪಾಟೀಲ ತಿಳಿಸಿದರು.

ಸಭೆಯಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಅಪರ ಜಿಲ್ಲಾಧಿಕಾರಿ ಶ್ರೀಮತಿ ಅನ್ನಪೂರ್ಣ ಎಂ, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟ್ಟೂರ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಮೇಶ ಪಾಟೀಲ, ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb