ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಬಿಇಎಂಎಲ್ ಸಹಯೋಗದೊಂದಿಗೆ ಗಂಟೆಗೆ 280 ಕಿ.ಮೀ ವೇಗದಲ್ಲಿ ಚಲಿಸುವ ಹೈಸ್ಪೀಡ್ ರೈಲುಗಳನ್ನು ವಿನ್ಯಾಸಗೊಳಿಸಿ ತಯಾರಿಸುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ಸಂಸತ್ತಿಗೆ ತಿಳಿಸಿದರು. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ವೈಷ್ಣವ್, “ಮೇಕ್ ಇನ್ ಇಂಡಿಯಾ” ದ ಅಡಿಯಲ್ಲಿ ವಂದೇ ಭಾರತ್ ರೈಲುಗಳ ಯಶಸ್ಸಿನ ನಂತರ, ಭಾರತೀಯ ರೈಲ್ವೆ (ಐಆರ್) ಈಗ ಹೈಸ್ಪೀಡ್ ರೈಲುಗಳ ವಿನ್ಯಾಸ ಮತ್ತು ತಯಾರಿಕೆಯನ್ನು ಕೈಗೆತ್ತಿಕೊಂಡಿದೆ ಎಂದು ಹೇಳಿದರು.
ಬಿಜೆಪಿ ಸಂಸದರಾದ ಸುಧೀರ್ ಗುಪ್ತಾ ಮತ್ತು ಅನಂತ ನಾಯಕ್ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಉತ್ಪಾದನಾ ವೆಚ್ಚವು ಪ್ರತಿ ಬೋಗಿಗೆ (ತೆರಿಗೆಗಳನ್ನು ಹೊರತುಪಡಿಸಿ) ಸರಿಸುಮಾರು 28 ಕೋಟಿ ರೂ. ಆಗಲಿದೆ. ಈ “ಹೈಸ್ಪೀಡ್ ರೈಲು ಬೋಗಿಗಲ ವಿನ್ಯಾಸ ಮತ್ತು ತಯಾರಿಕೆಯು ಕ್ಲಿಷ್ಟ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರಲಿವೆ” ಎಂದು ಸಚಿವರು ಹೇಳಿದರು.
ಎರೋಡೈನಾಮಿಕ್ ಮತ್ತು ಎರ್ ಟೈಟ್ ಕಾರ್ (ಬೋಗಿ) ಬಾಡಿಯ ವಿನ್ಯಾಸ ಮತ್ತು ಉತ್ಪಾದನೆ, ಹೈಸ್ಪೀಡ್ ಅಪ್ಲಿಕೇಶನ್ಗಾಗಿ ಹೊಂದುವಂತಹ ಎಲೆಕ್ಟ್ರಿಕ್ ಸಲಕರಣಿಗಳ ವಿನ್ಯಾಸ ಮತ್ತು ಉತ್ಪಾದನೆ, ರೈಲು ಸೆಟ್ಗಳ ತೂಕದಲ್ಲಿ ನಿಯಂತ್ರಣ ಮತ್ತು ಈ ರೈಲುಗಳಿಗೆ ಹೊಂದುವ ಹವಾನಿಯಂತ್ರಣ ದಂತಹ ಪ್ರಮುಖ ತಾಂತ್ರಿಕ ಅಂಶಗಳನ್ನು ಅವರು ಎತ್ತಿ ತೋರಿಸಿದರು. ಜೊತೆಗೆ ಸಿಸಿಟಿವಿ, ಮೊಬೈಲ್ ಚಾರ್ಜಿಂಗ್ ಸೌಲಭ್ಯಗಳು, ಗರಿಷ್ಠ ಬೆಳಕು, ಅಗ್ನಿ ಸುರಕ್ಷತಾ ಉಪಕರಣಗಳು ಮುಂತಾದ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಚೇರ್ ಕಾರುಗಳನ್ನು ಹೊಂದಿರುತ್ತವೆ” ಎಂದು ವೈಷ್ಣವ್ ಹೇಳಿದರು.