ಬೆಂಗಳೂರು, ಏಪ್ರಿಲ್ 5: ರಾಜ್ಯದಲ್ಲಿ ಎರಡು ತಿಂಗಳ ಒಳಗೆ ಒಳ ಮೀಸಲಾತಿ ಜಾರಿಗೆ ಬರಲಿದ್ದು, ಇದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದ ಆವರಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಯಾರು ವಿರೋಧಿಸಿದರೂ ಒಳ ಮೀಸಲಾತಿ ಜಾರಿ ಮಾಡುವ ನಿರ್ಧಾರದಿಂದ ಹಿಂದೆ ಸರಿಯಲು ಸಾಧ್ಯವಿಲ್ಲ,” ಎಂದು ಹೇಳಿದ್ದಾರೆ.

“ಆಯೋಗದ ಅಧ್ಯಕ್ಷ ನಾಗಮೋಹನ್ ದಾಸ್ ಅವರು ಇನ್ನೂ 2 ತಿಂಗಳ ಅವಧಿ ಕೇಳಿದ್ದಾರೆ. ಈ ಅವಧಿಯೊಳಗೆ ಪರಿಶಿಷ್ಟ ಗುಂಪಿನ ಯಾವುದೇ ಜಾತಿಗೂ ಅನ್ಯಾಯವಾಗದಂತೆ, ನ್ಯಾಯಸಮ್ಮತವಾದ ರೀತಿಯಲ್ಲಿ ಒಳ ಮೀಸಲಾತಿಯನ್ನು ಜಾರಿಗೆ ತರುತ್ತೇವೆ,” ಎಂದು ಅವರು ಹೇಳಿದರು.
ಈ ಕುರಿತು ರಾಜ್ಯ ಸರ್ಕಾರ ಸ್ಪಷ್ಟ ರೂಪರೇಖೆ ಸಿದ್ಧಪಡಿಸುತ್ತಿದ್ದು, ಎಲ್ಲಾ ಸಮುದಾಯಗಳಿಗೆ ನ್ಯಾಯ ದೊರಕಿಸುವ ಬಗೆಯ ನಿರ್ಧಾರವಾಗಲಿದೆ ಎಂಬುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.