ಗದಗ: ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಬ್ರೆಕ್ ಬಿದ್ದಂತೆ ಕಾಣುತ್ತಿಲ್ಲ.ಇದಕ್ಕೆ ಸಾಕ್ಷಿ ಎನ್ನುವಂತೆ ಅಕ್ರಮ ಮರಳು ದಂಧೆ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ದಂಧೆಕೋರರು ಹಲ್ಲೆ ನಡೆಸಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಶೀರನಹಳ್ಳಿ ಗ್ರಾಮದಲ್ಲಿ (27-02-2025) ರಂದು ರಾತ್ರಿ ವೇಳೆ ನಡೆದಿದೆ.
ಕೋಟೆಪ್ಪ ಮಲ್ಲಾಪುರ ಎಂಬುವವರಿಗೆ ಮರಳು ದಂಧೆಕೋರರು ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದು, ಶೀರನಳ್ಳಿ ಗ್ರಾಮದ ವ್ಯಾಪ್ತಿಯ ತುಂಗಭದ್ರಾ ನದಿಯಲ್ಲಿ ಗ್ರಾಮದ ಗುಡ್ಡದಯ್ಯ ಮಜ್ಜಗಿ ಹಾಗೂ ಗ್ಯಾಂಗ್ ನಿಂದ ರಾತ್ರಿ ವೇಳೆ ಮರಳು ದಂಧೆ ನಡೆಸಲಾಗುತ್ತಿತ್ತು.
ಇದನ್ನ ಗಮನಿಸಿದ್ದ ಕೋಟೆಪ್ಪ, ಜಮೀನು ರಸ್ತೆ ಹಾಳಾಗುತ್ತದೆ ಹಾಗೂ ಫಸಲಿಗೆ ತೊಂದರೆಯಾಗುತ್ತದೆ ಎಂದು ಬುದ್ಧಿ ಹೇಳಿದರೂ ದಂಧೆಕೋರರು ಕೇಳಿದ್ದಿಲ್ಲವಂತೆ. ಹೀಗಾಗಿ ಕೋಟೆಪ್ಪ ಹಾಗೂ ಆತನ ಕುಟುಂಬ ಪೊಲೀಸರಿಗೆ ದೂರು ನೀಡಿ ಬಂದಿದ್ದರು.

ಇದರಿಂದ ಗುಡದಯ್ಯ ಮತ್ತು ಆತನ ಗ್ಯಾಂಗ್ ಕೋಪಗೊಂಡಿತ್ತು. ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಕೋಪಗೊಂಡಿದ್ದ ಗುಡ್ಡದಯ್ಯ ಮತ್ತು ಗ್ಯಾಂಗ್ ಕೋಟೆಪ್ಪನ ಮನೆ ಬಳಿ ಬಂದು ಗಲಾಟೆ ಮಾಡಿರೋ ಆರೋಪ ಕೇಳಿಬಂದಿದ್ದು, ಈ ವೇಳೆ 10 ಕ್ಕೂ ಹೆಚ್ಚು ಜನರ ತಂಡ ಕೋಟೆಪ್ಪನ ಅಣ್ಣನ ಮಕ್ಕಳಿಗೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಬಿಡಿಸಲು ಬಂದ ಕೋಟೆಪ್ಪನಿಗೂ ದೊಣ್ಣೆ, ಕೊಡಲಿಯಿಂದ ಹಲ್ಲೆ ನಡೆಸಲಾಗಿದ್ದು, ಕೋಟೆಪ್ಪನಿಗೆ ತಲೆ, ಗುತ್ತಿಗೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ.
ಸದ್ಯ ಗಾಯಾಳು ಕೋಟೆಪ್ಪನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ದಂಧೆಕೋರರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಗಾಯಾಳು ಕೋಟೆಪ್ಪ ಹಾಗೂ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಅದೇನೆ ಇರಲಿ, ಗದಗ ಜಿಲ್ಲೆಯ ತುಂಗಭದ್ರಾ ನದಿ ಅಕ್ರಮ ಮರಳು ದಂಧೆಕೋರರ ಅಟ್ಟಹಾಸಕ್ಕೆ ವಿಲವಿಲ ಅಂತಿದೆ. ಮರಳು ಕಳ್ಳರು ರಾತ್ರೋರಾತ್ರಿ ನದಿ ಒಡಲು ಬಗೆದು ಮರಳು ಲೂಟಿ ಎಗ್ಗಿಲ್ಲದೇ ನಡೆಸಿದ್ದಾರೆ. ಅಕ್ರಮ ಮರಳು ದಂಧೆಕೋರರು ರೈತರ ಜಮೀನುಗಳ ರಸ್ತೆ ಹಾಳು ಮಾಡ್ತಾಯಿದ್ದಾರೆ. ಅಕ್ರಮ ಮರಳು ದಂಧೆ ನಡೆದ್ರೂ ತಾಲೂಕಾಡಳಿತ ಯಾಕೇ ಮೌನವಾಗಿದೆ ಅಂತ ಸಾರ್ವಜನಿಕರು ಕಿಡಿಕಾರಿದ್ದಾರೆ. ನದಿ ತೀರದ ರೈತರು, ಗ್ರಾಮಸ್ಥರು ತಹಶೀಲ್ದಾರ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ರೂ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ಅಧಿಕಾರಿಗಳು ಅಕ್ರಮ ಮರಳು ದಂಧೆಕೋರರ ಜೊತೆ ಶಾಮೀಲಾಗಿದ್ದಾರಾ ಅಂತ ನದಿ ತೀರದ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಆಡಳಿತ ನಿರ್ಲಕ್ಷ್ಯ ತೋರಿದ್ದರಿಂದಲೇ ಕಳೆದ ವಾರವಷ್ಟೇ ಗದಗ ಡಿಸಿ ಸಿ ಎನ್ ಶ್ರೀಧರ್ ಹಾಗೂ ಎಸಿ ಗಂಗಪ್ಪ ಸ್ವತಃ ನದಿಗೆ ಇಳಿದು ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಿದ್ರು. ಈಗ ಮತ್ತೆ ದಂಧೆಕೋರರು ತಮ್ಮ ಅಟ್ಟಹಾಸ ಮೆರೆದಿದ್ದಾರೆ.
ದಂಧೆಕೋರರ ವಿರುದ್ಧ ಕಠಿಣ ಕಾನೂನು ಕ್ರಮ ಆಗಬೇಕು ಅಂತ ಹಲ್ಲೆಗೊಳಗಾದ ರೈತ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾನೆ. ರೈತನ ಮೇಲಿನ ಮಾರಣಾಂತಿಕ ಹಲ್ಲೆ ಈ ಭಾಗದ ರೈತರ ಆತಂಕಕ್ಕೆ ಕಾರಣವಾಗಿದೆ. ಈಗಲಾದ್ರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಅಕ್ರಮ ಮರಳು ದಂಧೆಕೋರರಿಗೆ ತಕ್ಕ ಶಿಕ್ಷೆ ನೀಡುವ ಮೂಲಕ ದಂಧೆಕೋರರಿಗೆ ಎಚ್ಚರಿಕೆ ನೀಡಬೇಕಿದೆ.