ಲಕ್ಷ್ಮೇಶ್ವರ:ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನಲ್ಲಿ ಮರಳು ಮಾಫಿಯಾ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ತಾವು ಮಾಡಿದ್ದೇ ನಿಯಮ, ಹೇಳಿದ್ದೇ ಕಾನೂನು ಎನ್ನುವ ರೀತಿಯಲ್ಲಿ ಈ ಮರಳುದಂಧೆಕೋರರು ವರ್ತಿಸುತ್ತಿದ್ದಾರೆ. ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರ ಗ್ರಾಮದಲ್ಲಂತೂ ಮರಳು ದಂಧೆಕೋರರ ಅಡ್ಡೆಯಾಗಿ ಬದಲಾವಣೆಗೊಂಡಿದೆ.ಇಲ್ಲಿ ಅಕ್ರಮ ಮರಳುದಂಧೆ ನಡೆಸುವ ಕುಳಗಳು ಹಳ್ಳಗಳಲ್ಲಿ ಬೃಹತ್ ಪ್ರಮಾಣದಲ್ಲಿ ಮರಳು ತೆಗೆದಿದ್ದಾರೆ.ಈ ಹಿಂದೆಯೂ ಈ ರೀತಿಯ ಅಕ್ರಮ ಮರಳುಗಳ್ಳರ ಹಾವಳಿ ಇದ್ದರೂ ಸಹ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಇದೀಗ ಮತ್ತೆ ಅಕ್ರಮ ಮರಳು ಗುಂಡಿಗಳು ಮೇಲೆ ಬರುತ್ತಿವೆ.
ಹಳ್ಳದ ಜಾಗವನ್ನು ಸಂಪೂರ್ಣ ನುಂಗಿ ನೀರು ಕುಡಿದಿರುವ ಈ ಕುಳಗಳು ಹಳ್ಳಗಳನ್ನು ತಮ್ಮದೇ ಆಸ್ತಿ ಎನ್ನುವಂತೆ ವರ್ತಿಸುತ್ತಿದ್ದಾರೆ.ಅಲ್ಲದೆ ಗ್ರಾಮಿಣ ಭಾಗದ ರಸ್ತೆಗಳಲ್ಲಿ ತಮ್ಮ ಅಕ್ರಮ ಮರಳು ಲಾರಿಗಳು ಸಲೀಸಾಗಿ ಸಾಗುವಂತೆ ನೋಡಿಕೊಳ್ಳುತ್ತಿದ್ದಾರೆ.ರಾತ್ರಿ-ಹಗಲೆನ್ನದೆ ಹಳ್ಳಗಳ ಒಡಲನ್ನು ಬಗೆಯುವ ಈ ಕುಳಗಳು ರಾಜಕೀಯ ಪಕ್ಷಗಳ ಬೆಂಬಲಿಗರೆಂದು ಮುಸುಕು ಹಾಕಿ ಮರಳು ಲೂಟಿ ಮಾಡುತ್ತಿವೆ.ಅಲ್ಲದೇ ರಾಜಕೀಯ ಪಕ್ಷದ ಮುಖಂಡರ ಜೊತೆಗೆ ವೈಟ್ ಕಾಲರ್ ಶರ್ಟು ಹಾಕಿ ಮಿಂಚುತ್ತಲೂ ಇರುತ್ತಾರೆ.ಈ ಕಾರಣಕ್ಕಾಗಿ ಯಾವ ಅಧಿಕಾರಿಯೂ ಇವರ ಅಕ್ರಮವನ್ನು ಪ್ರಶ್ನಿಸಲು ಮುಂದೆ ಬರುತ್ತಿಲ್ಲ.
ಇದೇ ಕಾರಣಕ್ಕಾಗಿ ಜಿಲ್ಲಾಡಳಿತವೂ ಇವರ ಹತ್ತಿರವೂ ಸುಳಿಯದೆ, ಇವರ ಎಲ್ಲಾ ಅಕ್ರಮಗಳಿಗೆ ಅಭಯಹಸ್ತವನ್ನೂ ದಯಪಾಲಿಸಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.ಒಂದೆಡೆ ಹಳ್ಳಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೆ, ಇನ್ನೊಂದೆಡೆ ಪರವಾನಿಗೆ ಇಲ್ಲದೇ ಮಾಲ್ಕಿ ಜಮಿನಿನಲ್ಲಿ ಈ ಮರಳುಗಳ್ಳರು ಲೂಟಿ ಹೊಡೆಯುತ್ತಿದ್ದಾರೆ.ಜಿಲ್ಲೆಯಲ್ಲಿ ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ, ಆಯಾ ಇಲಾಖೆ ಅಧಿಕಾರಿಗಳು ಜಾಣಕುರುಡರಾಗಿದ್ದಾರೆ ಅನ್ನೋದು ಸಾರ್ವಜನಿಕರ ಆರೋಪವಾಗಿದೆ.