ಏಪ್ರಿಲ್ 20 ರಿಂದ ಆಗಸ್ಟ್ 19ರ ವರೆಗೆ ಸುಮಾರು 4 ತಿಂಗಳ ಕಾಲ ಚನ್ನಮ್ಮ ವೃತ್ತದಿಂದ ಬಸವ ವನದವರೆಗೆ (500 ಮೀ.), ವಿಜಯಪುರ ರಸ್ತೆಯಲ್ಲಿ ಚನ್ನಮ್ಮ ವೃತ್ತದಿಂದ ಕೋರ್ಟ್ ವೃತ್ತದವರೆಗೆ (150 ಮೀ.) ಹಾಗೂ ಚನ್ನಮ್ಮ ವೃತ್ತದಲ್ಲಿ ಆಯ್ದ ಭಾಗಗಳಲ್ಲಿ ಪಿಲ್ಲರ್ ಕಾಮಗಾರಿಗಳಿಗೆ ಬ್ಯಾರಿಕೇಡ್ ಹಾಕಲು ಚನ್ನಮ್ಮ ವೃತ್ತಕ್ಕೆ ಸಂಪರ್ಕಿಸುವ ರಸ್ತೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹೇಳಿದ್ದಾರೆ.
ನಗರದಲ್ಲಿ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ಶೇ.50 ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಉಳಿದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಪ್ರಮುಖ ಮಾರ್ಗ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರ ಸಹಕಾರ ಅವಶ್ಯವಾಗಿದೆ ಎಂದು ತಿಳಿಸಿದರು.
4 ತಿಂಗಳ ಕಾಲ ನಗರ ಸಾರಿಗೆ ನಿಲ್ದಾಣವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ. ಐಟಿ ಪಾರ್ಕ್ ಹತ್ತಿರದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಅಲ್ಲದೇ ಉಪ ನಗರ ಬಸ್ ನಿಲ್ದಾಣವನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳು ನಿರ್ವಹಣೆ ಹಾಗೂ ರಕ್ಷಣೆ ಮಾಡಬೇಕು. ವಿಜಯಪುರ ಮತ್ತು ಗದಗ ಹಾಗೂ ಉಳಿದ ಪ್ರದೇಶದಿಂದ ಬರುವ ಬಸ್ಗಳಿಗೆ ಕಾರವಾರ ರಸ್ತೆ, ಸಿ.ಬಿ.ಟಿ. ಹಾಗೂ ಹೊಸೂರು ಬಸ್ ನಿಲ್ದಾಣಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಟ್ರಾಫಿಕ್ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಮೇಲಿನ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಧಾರವಾಡದಿಂದ ವಿಜಯಪುರ ಮತ್ತು ಗದಗಗೆ ಹೋಗುವ ಮಾರ್ಗ: ಹೊಸೂರು ವೃತ್ತದಿಂದ ಕಾಟನ್ ಮಾರ್ಕೆಟ್, ಶಾರದಾ ಹೋಟೆಲ್, ದೇಸಾಯಿ ವೃತ್ತದ ಮೂಲಕ ಪಿಂಟೋ ವೃತ್ತ ಅಥವಾ ಕೋರ್ಟ್ ವೃತ್ತದ ಮೂಲಕ ಗದಗ ಹಾಗೂ ವಿಜಯಪುರಕ್ಕೆ ಸಂಚರಿಸಬಹುದಾಗಿದೆ ಅಥವಾ ಹೊಸೂರು ವೃತ್ತದಿಂದ ಕಾಟನ್ ಮಾರ್ಕೆಟ್, ನೀಲಿಜಿನ ರಸ್ತೆ, ಚನ್ನಮ್ಮ ವೃತ್ತ, ಸರ್. ಸಿದ್ದಪ್ಪ ಕಂಬಳಿ ರಸ್ತೆ ಮೂಲಕವಾಗಿಯೂ ಸಹ ಗದಗ ಹಾಗೂ ಸಿ.ಬಿ.ಟಿಗೆ ಸಂಚರಿಸಬಹುದಾಗಿದೆ.

ವಿಜಯಪುರದಿಂದ ಧಾರವಾಡ ಹೋಗುವ ಮಾರ್ಗ: ಸರ್ವೋದಯ ವೃತ್ತದಿಂದ ಡಿ.ಆರ್.ಎಮ್ ಆಫೀಸ್, ಸ್ಟೇಷನ್ ರಸ್ತೆ, ಚನ್ನಮ್ಮ ವೃತ್ತ ಕಾರವಾರ ರಸ್ತೆ ಭಾರತ ಮಿಲ್ ವೃತ್ತ ಮತ್ತು ವಾಣಿ ವಿಲಾಸ ವೃತ್ತದ ಮೂಲಕ ಧಾರವಾಡಕ್ಕೆ ಸಂಚರಿಸಬಹುದಾಗಿದೆ.
ಗದಗದಿಂದ ಧಾರವಾಡ ಹೋಗುವ ಮಾರ್ಗ: ಸ್ಟೇಷನ್ ರಸ್ತೆ, ಚನ್ನಮ್ಮ ವೃತ್ತ, ಕಾರವಾರ ರಸ್ತೆ, ಭಾರತ ಮಿಲ್ ವೃತ್ತ ಮತ್ತು ವಾಣಿ ವಿಲಾಸ ವೃತ್ತದ ಮೂಲಕ ಧಾರವಾಡಕ್ಕೆ ಸಂಚರಿಸಬಹುದಾಗಿದೆ.
ನೀಲಿಜಿನ ರಸ್ತೆ: ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನೀಲಿಜಿನ ರಸ್ತೆಯನ್ನು ಕೇವಲ ವಾಯುವ್ಯ ಸಾರಿಗೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಇಲ್ಲಿ ಲಘು ವಾಹನಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ.

ಉಪನಗರ ಸಾರಿಗೆ ವಾಹನಗಳ ಕಾರ್ಯಾಚರಣೆ ಮಾಡಲು ಪ್ರಸ್ತಾಪಿತ ಮಾರ್ಗ: ಹೊಸೂರು ಸರ್ಕಲ್, ಕಾಟನ್ ಮಾರ್ಕೆಟ್ ರಸ್ತೆ, ಸಾಂಸ್ಕೃತಿಕ ಭವನ ಮುಂಚೆ ಬರುವ ಬಲ ತಿರುವು, ಉತ್ತರ ಸಂಚಾರ ಪೊಲೀಸ್ ಠಾಣೆ ಪಕ್ಕದ ಬಲ ತಿರುವು, ಆಟೋ ಹೌಸ್ ಬಳಿ ಬಲ ತಿರುವು ಪಡೆದು, ಗ್ಲಾಸ್ ಹೌಸ್ ಕಂಪೌಂಡ್ ಪಕ್ಕದಲ್ಲಿರುವ ಬಸ್ ನಿಲುಗಡೆ ಮುಖಾಂತರ ಮರಳಿ ಹೊಸೂರು ಸರ್ಕಲ್ ತೆರಳುವುದು. ಈ ಸಂಪೂರ್ಣ ರಸ್ತೆಯನ್ನು ಉಪನಗರ ಸಾರಿಗೆ ನಿಲುಗಡೆ ಮತ್ತು ಕಾರ್ಯಾಚರಣೆ ಮಾಡಲಿದೆ. ಕಮರಿಪೇಟ ಪೊಲೀಸ್ ಠಾಣೆಯಿಂದ ಚೆನ್ನಮ್ಮ ಸರ್ಕಲ್‌ಗೆ ಬರುವ ವಾಹನಗಳನ್ನು ನಿರ್ಬಂಧಿಸಲಾಗಿದೆ ಎಂದು ವಿವರಿಸಿದರು.