ಲಕ್ಷ್ಮೇಶ್ವರ ಃ ಮಾರ್ಚ 18 ರಿಂದ ಎಪ್ರೀಲ್ 02 ರವರೆಗೆ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಯಾವುದೇ ಲೋಪಗಳಾಗದಂತೆ ಜಾಗೃತೆ ವಹಿಸುವುದರ ಜೊತೆಗೆ ನಕಲು ಮುಕ್ತ ಮತ್ತು ಸ್ನೇಹಮಯಿ ವಾತಾವರಣದಲ್ಲಿ ಪರೀಕ್ಷೆ ನಡೆಸುವದು ಅಗತ್ಯವಾಗಿದೆ ಎಂದು ತಹಸೀಲ್ದಾರ ಧನಂಜಯ ಎಂ., ಹೇಳಿದರು.
ವರದಿ : ಪರಮೇಶ ಎಸ್ ಲಮಾಣಿ.
ಅವರು ಪಟ್ಟಣದ ತಹಸೀಲ್ದಾರ ಕಚೇರಿ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಪರೀಕ್ಷಾ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು.
ತಾಲ್ಲೂಕಿನಲ್ಲಿ ಯಾವುದೇ ಅಡೆತಡೆ ಇಲ್ಲದೆ ಸುಸೂತ್ರವಾಗಿ ಪರೀಕ್ಷೆ ನಡೆಯುವ ಉದ್ಧೇಶದಿಂದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬರೆಯವ ಕೇಂದ್ರದ ಹತ್ತಿರ ಬಸ್ ನಿಲುಗಡೆ ಮಾಡುವ ಮೂಲಕ ಹೆಚ್ಚಿನ ಅನುಕೂಲ ಮಾಡಿಕೊಡುವುದು ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳು ಹೆಚ್ಚಿನ ಕಾಳಜಿಯಿಂದ ಕೆಲಸ ಮಾಡುವುದು ಅಗತ್ಯವಾಗಿದೆ, ಎಲ್ಲ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಕಡ್ಡಾಯವಾಗಿದ್ದು ಎಲ್ಲರೂ ವಿಶೇಷ ಆಸಕ್ತಿಯಿಂದ ಕಾರ್ಯನಿರ್ವಹಿಸಿ ಎಂದು ಹೇಳಿದ ಅವರು,
ಗ್ರಾಮೀಣ ಭಾಗದಲ್ಲಿರುವ ಕೇಂದ್ರಗಳಿಗೆ ಬಸ್ ಸೌಲಭ್ಯ ದೊರಕಿಸಲು ಇಲಾಖೆಗೆ ತಿಳಿಸಲಾಗಿದೆ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಮುಖ್ಯ ಅಧೀಕ್ಷಕರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.
ಪ್ರೌಢ ವಿಭಾಗ ಶಿಕ್ಷಣ ಸಂಯೋಜಕ ಆರ್.ಬಿ.ಜೋಶಿ ಮಾತನಾಡಿ ಲಕ್ಷ್ಮೇಶ್ವರ ತಾಲೂಕಿನಲ್ಲಿ ಒಟ್ಟು ೬ ಪರೀಕ್ಷಾ ಕೇಂದ್ರಗಳಿದ್ದು. ಲಕ್ಷ್ಮೆಶ್ವರದ ಪುರಸಭೆ ಉಮಾ ವಿದ್ಯಾಲಯ, ಪಿಎಸ್‌ಬಿಡಿ ಬಾಲಕಿಯರ ಪ್ರೌಢ ಶಾಲೆ, ಬಿಸಿಎನ್ ಕನ್ನಡ ಮಾಧ್ಯಮ ಪ್ರೌಢ ಶಾಲೆ, ಸರ್ಕಾರಿ ಪ್ರೌಢ ಶಾಲೆ ಪುಟಗಾಂವ್‌ಬಡ್ನಿ, ಎಸ್‌ಎಸ್‌ಕೆ ಪ್ರೌಢ ಶಾಲೆ ಶಿಗ್ಲಿ ಹಾಗೂ ಸರ್ಕಾರಿ ಪ್ರೌಢ ಶಾಲೆ ಬಾಲೆಹೊಸೂರು ಸೇರಿದಂತೆ ಒಟ್ಟು ಆರು ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಯಾವುದೇ ಸಮಸ್ಯೆ ಆಗದಂತೆ ಪರೀಕ್ಷೆಗಳನ್ನು ನಡೆಸಲು ಇಲಾಖೆಯಿಂದ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಗಾಳಿ, ಬೆಳಕು, ವಿದ್ಯುತ್ ವ್ಯವಸ್ಥೆ ಎಲ್ಲವನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಈ ವೇಳೆ ಸಭೆಯಲ್ಲಿ ಸಾರಿಗೆ ಘಟಕ ವ್ಯವಸ್ಥಾಪಕಿ ಸವಿತಾ ಆದಿ, ಎಎಸ್‌ಐ ವಿ.ಸಿ.ದೊಡ್ಡಮನಿ, ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಆರೋಗ್ಯ ಇಲಾಖೆಯ ಕೃಷ್ಣಕುಮಾರ ಕುಲಕರ್ಣಿ, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರುಗಳಾದ ಜೆ.ಡಿ.ಲಮಾಣಿ, ಬಿ.ಸಿ.ಪಟ್ಟೇದ, ಕೆ.ವಾಯ್. ಮೇಲಿನಮನಿ,ಬಿ.ಎನ್.ಗಾಯಕವಾಡ, ಎಸ್.ವಿ.ಪಾಟೀಲ, ಎನ್.ಕೆ.ಹತ್ತಿಕಾಳ, ಎಂ.ಬಿ.ಸಂಗನಪೇಟ, ಕೆ.ರವಿ, ಡಾ.ಜಯಶ್ರೀ ಕೋಲಕಾರ, ಎಲ್.ಎಸ್.ಅರಳಹಳ್ಳಿ, ಎಂ.ಎಚ್.ಬೆಬಗಟ್ಟಿ ಹಾಜರಿದ್ದರು.
