ಗದಗ: ಛಲ, ಶ್ರದ್ಧೆ, ಸತ್ಯದ ವಿಧದಲ್ಲಿ ನಡೆಯುವ ಮನುಷ್ಯನಿಗೆ ಯಾವ ಸಾಧನೆಯೂ ಕಷ್ಟವಲ್ಲ, ಅಂತಹ ಸಾಧನೆಗೆ ಸಾಕ್ಷಿಭೂತವಾಗಿರುವವರು ನಮ್ಮೆಲ್ಲರ ಆತ್ಮೀಯರಾದ ಸಹೋದರಿ ಕುಮಾರಿ. ಶೈಲಜಾ ಹಿರೇಮಠ ಎಂದು ಕೆ.ಎಸ್.ಆರ್.ಟಿ.ಸಿ.ಯ ಗದಗ ವಿಭಾಗದ ನಿವೃತ್ತ ವಿಭಾಗೀಯ ನಿಯಂತ್ರಾಣಾಧಿಕಾರಿ ಶ್ರೀ.ಎಫ್.ಸಿ.ಹಿರೇಮಠ ಅಭಿಪ್ರಾಯ ಪಟ್ಟರು.
ಶೈಲಜಾ ಹಿರೇಮಠ ಅವರು, ಗದಗ ಜಿಲ್ಲಾ ನ್ಯಾಯವಾದಿಗಳ ಸಂಘದ ಕೋಶಾಧ್ಯಕ್ಷೆಯಾಗಿ ಪ್ರಚಂಡ ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ. ಶೈಲಜಾ ಅವರು ಹಿರೇಮಠ ಮನೆತನದ ಒಬ್ಬ ಸದಸ್ಯೆಯಾಗಿ ಸುಮಾರು ೨೫-೩೦ ವರ್ಷಗಳವರೆಗೆ ನ್ಯಾಯವಾದಿಯಾಗಿ ನಿರಂತರ ಸೇವೆಯನ್ನು ಸಲ್ಲಿಸುವುದರ ಜೊತೆಗೆ ಅನೇಕ ಬ್ಯಾಂಕಿಂಗ್ ಹಾಗೂ ಹಣಕಾಸು ಸಂಸ್ಥೆಗಳಿಗೆ ಕಾನೂನು ಮಾರ್ಗದರ್ಶಕರಾಗಿ ತಮ್ಮ ಪ್ರತಿಭೆಯನ್ನು ತೆರೆದಿಡುತ್ತಿರುವದು ನಮ್ಮೆಲ್ಲರಿಗೂ ಹೆಮ್ಮೆ ಎಂದು ತಿಳಿಸಿದರು.
ಸನ್ಮಾರ್ಗ ಪದವಿ ಪೂರ್ವ ಕಾಲೇಜಿನ ಆಡಳಿತಾಧಿಕಾರಿಯಾದ ಶ್ರೀ.ಮೃತ್ಯುಂಜಯ ಹಿರೇಮಠರು ಮಾತನಾಡಿ, ಶೈಲಜಾ ಅವರಲ್ಲಿನ ಮನೋಬಲ, ಸಾಧಿಸಬೇಕೆಂಬ ಅವಿರತ ಪ್ರಯತ್ನ ಹಾಗೂ ಆತ್ಮವಿಶ್ವಾಸಗಳು ವಿಶೇಷವಾಗಿ ಸ್ತ್ರೀ ಸಂಕುಲದಲ್ಲಿ ಬೆಳೆದು ಬಂದಾಗ ‘ಸಾರಾಸರ ವಿಚಾರ ಮಾಡಿದರ ಹೆಣ್ಣು ಆಳತದ ಸಂಸಾರ’ ಎಂಬ ಉಕ್ತಿಗೆ ಸಾಕ್ಷಾತ್ಕಾರ ದೊರಕಿದ ಹಾಗೆ ಎಂದು ತಿಳಿಸಿ, ಸಕಲ ಹಿರೇಮಠ ಹಾಗೂ ಶಿಗ್ಲಿಮಠ ಮನೆತನದ ಸರ್ವಹಿರಿಯರ ಶುಭಾಶೀರ್ವಾದ ಹಾಗೂ ಎಲ್ಲರ ಹೃತ್ಪೂರ್ವಕ ಶುಭಾಶಯಗಳು ಸಲ್ಲಬೇಕು ಎಂದರು.
ಹಿರೇಮಠ ಹಾಗೂ ಶಿಗ್ಲಿಮಠ ಬಂಧುಗಳಿಂದ ಜರುಗಿದ ಸನ್ಮಾನ ಸಮಾರಂಭದಲ್ಲಿ ಎಲ್ಲರ ಮುಖದಲ್ಲಿ ಮಂದಹಾಸ, ಮೆಚ್ಚುಗೆಯ ಮುಖ ಭಾವ ಕಾಣುತ್ತಿತ್ತು.
ಸಮಾರಂಭದಲ್ಲಿ ಶ್ರೀ.ಸೋಮಣ್ಣ ಶಿಗ್ಲಿಮಠ, ಶ್ರೀ.ವೀರೇಂದ್ರ ಹಿರೇಮಠ, ಶ್ರೀ.ಬಿ.ಎಸ್.ಹಿರೇಮಠ, ಶ್ರೀ.ಉಮೇಶ ಶಿಗ್ಲಿಮಠ, ಶ್ರೀ.ವಿ.ಜೆ.ಬಾಳಿಹಳ್ಳಿಮಠ ಹಾಗೂ ಶ್ರೀಮತಿ ಶಾಂತಾ ಹಿರೇಮಠ, ವಿಜಯಲಕ್ಷ್ಮೀ ಹಿರೇಮಠ, ಶ್ರೀದೇವಿ ಶಿಗ್ಲಿಮಠ, ಜಯಶ್ರೀ ಹಿರೇಮಠ ಹಾಗೂ ಸರ್ವಬಂಧು ಬಾಂಧವರು ಉಪಸ್ಥಿತರಿದ್ದು ಕುಮಾರಿ ಶೈಲಜಾ ಹಿರೇಮಠ ಅವರಿಗೆ ಹೃದಯಪೂರ್ವಕ ಶುಭಾಶಯಗಳನ್ನು ಅರ್ಪಿಸಿದರು.