ಗದಗ: ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಬಿ.ಸಿ.ಎ. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಬಿಪಿನ್ ಎಸ್. ಚಿಕ್ಕಟ್ಟಿ ಅವರಿಗೆ ರಸಾಯನಶಾಸ್ತ್ರದಲ್ಲಿ ಹುಬ್ಬಳ್ಳಿಯ ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯವು ‘ಡಾಕ್ಟರ್ ಆಫ್ ಫಿಲಾಸಫಿ’ (ಪಿ.ಎಚ್.ಡಿ.) ಪದವಿಯನ್ನು ಪ್ರಧಾನ ಮಾಡಿದೆ. ಈ ಮಹತ್ವದ ಸಾಧನೆಯ ಹಿನ್ನೆಲೆಯಲ್ಲಿ ಡಾ. ಬಿಪಿನ್ ಎಸ್. ಚಿಕ್ಕಟ್ಟಿ ಹಾಗೂ ಅವರ ಶ್ರೀಮತಿ, ಪ್ರಾಚಾರ್ಯರಾದ ದೀಪಾ ಬಿ. ಚಿಕ್ಕಟ್ಟಿ ದಂಪತಿಗಳನ್ನು ಚಿಕ್ಕಟ್ಟಿ ಶಾಲಾ–ಕಾಲೇಜಿನ ಬೋಧಕ–ಬೋಧಕೇತರ ಸಿಬ್ಬಂದಿಯವರು ಹಾಗೂ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀ ರಾಮಚಂದ್ರ ಮೋನೆ ಅವರಿಂದ ಚಿಕ್ಕಟ್ಟಿ ಸಭಾಂಗಣದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸಮಾರಂಭದಲ್ಲಿ ಗೌರವಾನ್ವಿತರನ್ನುದ್ದೇಶಿಸಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀ ರಾಮಚಂದ್ರ ಮೋನೆ ಅವರು ಮಾತನಾಡಿ, ಶಿಕ್ಷಣವು ವ್ಯಕ್ತಿಯ ಜೀವನವನ್ನು ರೂಪಿಸುವ ಶಕ್ತಿಯಾಗಿದೆ. ಅದರಲ್ಲಿಯೂ ಪಿ.ಎಚ್.ಡಿ ಎಂಬುದು ಕೇವಲ ಪದವಿಯಲ್ಲ, ಅದು ನಿರಂತರ ಅಧ್ಯಯನ, ಪರಿಶ್ರಮ, ತಾಳ್ಮೆ ಮತ್ತು ಶ್ರಮದ ಪ್ರತಿಫಲವಾಗಿದೆ. ಈ ಸಾಧನೆಯ ಹಿಂದೆ ಅವರ ಶ್ರೀಮತಿ, ಪ್ರಾಚಾರ್ಯರಾದ ದೀಪಾ ಬಿ. ಚಿಕ್ಕಟ್ಟಿ ಅವರ ಪರಿಶ್ರಮವೂ ಅಡಗಿದೆ. ಡಾ. ಬಿಪಿನ್ ಎಸ್. ಚಿಕ್ಕಟ್ಟಿ ಪಡೆದಿರುವ ‘ಡಾಕ್ಟರೇಟ್’ ಪದವಿ ಚಿಕ್ಕಟ್ಟಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದೆ. ಇದೇ ರೀತಿಯಲ್ಲಿ ನಿರಂತರ ಅಧ್ಯಯನದೊಂದಿಗೆ ಮತ್ತೊಂದು ಪಿ.ಎಚ್.ಡಿ ಪದವಿಯನ್ನು ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್. ವಾಯ್. ಚಿಕ್ಕಟ್ಟಿ ಅವರು ಮಾತನಾಡಿ, ಬಿಪಿನ್ ಚಿಕ್ಕಟ್ಟಿ ಅವರು ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿಯೇ ವಿದ್ಯಾಭ್ಯಾಸ ಮಾಡಿ, ಎಂಟರಿಂದ ಹತ್ತನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಪೂರ್ಣಗೊಳಿಸಿದ್ದಾರೆ. ನಂತರ ಚಿಕ್ಕಟ್ಟಿ ಕಾಲೇಜಿನಲ್ಲಿಯೇ ಪಿ.ಯು.ಸಿ ಎರಡು ವರ್ಷಗಳ ವ್ಯಾಸಂಗವನ್ನು ಪೂರ್ಣಗೊಳಿಸಿ, ಜೆ.ಟಿ. ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆದು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದಲ್ಲಿ ಎಂ.ಎಸ್.ಸಿ ಪದವಿ ಪಡೆದಿದ್ದಾರೆ. ಮುಂದಾಗಿ ಹುಬ್ಬಳ್ಳಿಯ ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಓದಿದವರೂ ಸಹ ಪಿ.ಎಚ್.ಡಿ ಪದವಿ ಪಡೆಯಬಹುದು ಎಂಬುದಕ್ಕೆ ಬಿಪಿನ್ ಚಿಕ್ಕಟ್ಟಿಯವರೇ ಸಾಕ್ಷಿ. ಪಿ.ಎಚ್.ಡಿ ಪದವಿ ಎಂದರೆ ತಮ್ಮ ಆಯ್ದ ಕ್ಷೇತ್ರದಲ್ಲಿ ಹೊಸ ಜ್ಞಾನವನ್ನು ಸಮಾಜಕ್ಕೆ ನೀಡುವ ಮಹತ್ತರ ಸಾಧನೆ. ಇದು ವೈಯಕ್ತಿಕ ಯಶಸ್ಸು ಮಾತ್ರವಲ್ಲ, ಗುರುಗಳು, ಕುಟುಂಬ, ಸಂಸ್ಥೆ ಹಾಗೂ ಸಮಗ್ರ ಸಮಾಜಕ್ಕೆ ಗೌರವ ತರುವ ಸಾಧನೆಯಾಗಿದೆ. ಈ ಸಾಧನೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.
ಕನ್ನಡ ಉಪನ್ಯಾಸಕರಾದ ಶ್ರೀಶೈಲ ಶಿ. ಬಡಿಗೇರ ಅವರು ಮಾತನಾಡಿ, ಪಿ.ಎಚ್.ಡಿ ಪದವಿ ವಿದ್ಯಾರ್ಹತೆಯಷ್ಟೇ ಅಲ್ಲ, ಪರಿಶ್ರಮ, ಶ್ರದ್ಧೆ, ಸಹನೆ ಮತ್ತು ನಿರಂತರ ಅಧ್ಯಯನದ ಪ್ರತಿಫಲವಾಗಿದೆ. ಅನೇಕ ವರ್ಷಗಳ ಸಂಶೋಧನೆ, ಪರೀಕ್ಷೆಗಳು, ಸವಾಲುಗಳು ಹಾಗೂ ತ್ಯಾಗಗಳ ಬಳಿಕ ಈ ಹಂತವನ್ನು ತಲುಪಿರುವುದು ಶ್ಲಾಘನೀಯ. ಡಾ. ಬಿಪಿನ್ ಎಸ್. ಚಿಕ್ಕಟ್ಟಿ ಪಡೆದಿರುವ ಪಿ.ಎಚ್.ಡಿ ಪದವಿ ಚಿಕ್ಕಟ್ಟಿ ಸಂಸ್ಥೆಗೆ ಸಲ್ಲಿಸಿದ ಕಳಸದಂತಿದೆ ಎಂದರು.
ಸನ್ಮಾನಿತರಾದ ಡಾ. ಬಿಪಿನ್ ಎಸ್. ಚಿಕ್ಕಟ್ಟಿ ಅವರು ಮಾತನಾಡಿ, ಇಂದು ನನಗೆ ದೊರೆತಿರುವ ಈ ಗೌರವ ನನ್ನ ಜೀವನದ ಅತ್ಯಂತ ಸಂತೋಷ ಮತ್ತು ಹೆಮ್ಮೆಯ ಕ್ಷಣಗಳಲ್ಲಿ ಒಂದಾಗಿದೆ. ಪಿ.ಎಚ್.ಡಿ ಪದವಿ ನನ್ನೊಬ್ಬನ ಪ್ರಯತ್ನದ ಫಲವಲ್ಲ; ಇದು ನನ್ನ ಮಾರ್ಗದರ್ಶಕರ ದಾರಿದೀಪ, ತಂದೆ–ತಾಯಿಯವರು, ಕುಟುಂಬದವರು, ಗುರುಗಳ ಆಶೀರ್ವಾದ, ಸ್ನೇಹಿತರ ಪ್ರೋತ್ಸಾಹ ಹಾಗೂ ಸಂಸ್ಥೆಯ ಸಹಕಾರದ ಒಟ್ಟಾರೆ ಫಲವಾಗಿದೆ. ಪಿ.ಎಚ್.ಡಿ ಪದವಿ ಅಂತಿಮ ಗುರಿಯಲ್ಲ, ಇದು ಹೊಸ ಜವಾಬ್ದಾರಿಗಳ ಆರಂಭವಾಗಿದೆ. ಸಮಾಜದ ಅಭಿವೃದ್ಧಿ, ಜ್ಞಾನ ವೃದ್ಧಿ ಹಾಗೂ ಮುಂದಿನ ತಲೆಮಾರಿಗೆ ದಾರಿತೋರಲು ನನ್ನ ಜ್ಞಾನವನ್ನು ಬಳಸಿಕೊಳ್ಳುವುದು ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ ಎಂದು ಹೇಳಿದರು.
ಗೌರವಪೂರ್ವಕವಾಗಿ ಸನ್ಮಾನಿಸಿದ ಚಿಕ್ಕಟ್ಟಿ ಶಾಲಾ–ಕಾಲೇಜಿನ ಬೋಧಕ–ಬೋಧಕೇತರ ಸಿಬ್ಬಂದಿಯವರಿಗೆ ಹಾಗೂ ನಿವೃತ್ತ ಶಿಕ್ಷಕರಾದ ಶ್ರೀ ರಾಮಚಂದ್ರ ಮೋನೆ ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.
ಈ ಸನ್ಮಾನ ಸಮಾರಂಭದಲ್ಲಿ ಉಪಪ್ರಾಚಾರ್ಯರಾದ ಶ್ರೀಮತಿ ಶೋಭಾ ಎಸ್. ಸ್ಥಾವರಮಠ, ಉಪಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ರಿಯಾನಾ ಮುಲ್ಲಾ, ಬೋಧಕ–ಬೋಧಕೇತರ ಸಿಬ್ಬಂದಿಯವರು ಹಾಗೂ ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
