ಬೆಳಗಾವಿ: ಬೆಳಗಾವಿ ಅಧಿವೇಶನದ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಿ.ಟಿ.ರವಿ ನಡುವೆ ನಡೆದ ಪ್ರಕರಣ ಎಲ್ಲರಿಗೂ ಗೊತ್ತಿರೋ ವಿಚಾರ. ಈ ವೇಳೆ ಅನೇಕ ಮಾಧ್ಯಮಗಳೆದುರು ಪ್ರಕರಣದ ಕುರಿತು ಲಕ್ಷ್ಮೀ ಹೆಬ್ಬಾಳ್ಕರ ಮಾತನಾಡಿದ್ದರು. ಹೀಗೆ ಮಾತನಾಡುವ ವೇಳೆ, ಸಿ.ಟಿ.ರವಿ ಆಡಿರೋ ಪದ ಬಳಕೆ ವಿಚಾರವಾಗಿ, ಧರ್ಮಸ್ಥಳ ಮಂಜುನಾಥ ಸನ್ನಿಧಿಯಲ್ಲಿ ಆಣೆ ಪ್ರಮಾಣದ ಸವಾಲೆಸೆದಿದ್ದರು.
ಈ ಸವಾಲು ಒಡ್ಡಿದ ಒಂದೇ ತಿಂಗಳಲ್ಲಿ ಅವರ ಕಾರು ಕಾಕತಾಳೀಯ ಎಂಬಂತೆ ಅಪಘಾತವಾಗಿದೆ. ಇದು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ವೈಯಕ್ತಿಕ ವಿಷಯದಲ್ಲಿ ಅನಗತ್ಯವಾಗಿ ಧರ್ಮಸ್ಥಳದ ಹೆಸರು ಎಳೆದು ತಂದಿರುವುದೇ ಈ ಅಪಘಾತಕ್ಕೆ ಕಾರಣ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಅಪ್ಪಿತಪ್ಪಿಯೂ ವಿವಾದಗಳಿಗೆ ದೇವರ ಹೆಸರನ್ನು ಯಾರೂ ಎಳೆದು ತರುವುದಿಲ್ಲ ಅನ್ನೋ ಮಾತು ಸಹ ಕೇಳಿ ಬರುತ್ತಿದೆ.

ಇಂದು ಬೆಳಿಗ್ಗೆ ಹೆಬ್ಬಾಳ್ಕರ್ ಕಾರು ಅಪಘಾತ!
ಚಾಲಕನ ನಿಯಂತ್ರಣ ತಪ್ಪಿ ಮಹಿಳಾ ಮತ್ತು ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತಕ್ಕೀಡಾಗಿರುವ ಘಟನೆ ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ನಡೆದಿದೆ.
ನಿನ್ನೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ಮುಗಿಸಿ ಇಂದು ಬೆಳಿಗ್ಗೆ ವಾಪಾಸ್ ಬೆಳಗಾವಿಗೆ ಬರುವಾಗ ಈ ಅಪಘಾತ ಸಂಭವಿಸಿದೆ. ಬೆಳಿಗ್ಗೆ 6 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಭೀಕರ ಕಾರು ಅಪಘಾತದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಎಂಎಲ್ಸಿ ಚೆನ್ನರಾಜು ಹಟ್ಟಿಹೊಳಿ ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ಅಡ್ಡಬಂದ ನಾಯಿ ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರ್ ಮರಕ್ಕೆ ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಕಾರು ನುಜ್ಜುಗುಜ್ಜಾಗಿದೆ. ಹಾಗಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆನ್ನು ಮತ್ತು ಮುಖಕ್ಕೆ ಸಣ್ಣಪುಟ್ಟ ಗಾಯಗಳು ಆಗಿವೆ. ಎಂಎಲ್ಸಿ ಚೆನ್ನರಾಜ ಹಟ್ಟಿಹೊಳಿ ಅವರಿಗೂ ತಲೆಗೆ ಗಾಯ ಆಗಿದೆ.
ಸದ್ಯ ಇಬ್ಬರನ್ನು ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಂಗಳೂರಿನಿಂದ ಬೆಳಗಾವಿಗೆ ಕಾರಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.