ಸಿಂಗಟಾಲೂರು, ಗದಗ ಜಿಲ್ಲೆ.
ಮುಖ್ಯಾಂಶಗಳು:
ಅಸ್ಪೃಶ್ಯತೆ ನಿರ್ಮೂಲನೆಗೆ ವಿಶೇಷ ಜಾಗೃತಿ ಕಾರ್ಯಕ್ರಮ.
ಇಲಾಖೆಗಳ ಸಹಯೋಗದಲ್ಲಿ ಹೊಸ ‘ಕ್ಷೌರಿಕ ಅಂಗಡಿ’ ಉದ್ಘಾಟನೆ.
ಜಾತಿ ತಾರತಮ್ಯ ಮಾಡುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ.
“ಮೇಲು-ಕೀಳು ಎಂಬ ಕೀಳರಿಮೆ ತೊರೆದು, ಸರ್ವರೂ ಸಮಾನರು ಎಂಬ ಉದಾತ್ತ ಭಾವನೆಯಿಂದ ಬಾಳಿದಾಗ ಮಾತ್ರ ಗ್ರಾಮದಲ್ಲಿ ಸಾಮರಸ್ಯ ಸಾಧ್ಯ” ಎಂದು ಗದಗ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬಟ್ಟಿ ಅವರು ಕರೆ ನೀಡಿದರು.
ವರದಿ : ಮಾಹಾಲಿಂಗೇಶ ಹಿರೇಮಠ
ಪರಮೇಶ ಎಸ್ ಲಮಾಣಿ, ಲಕ್ಷ್ಮೇಶ್ವರ
ಸಿಂಗಟಾಲೂರು ಗ್ರಾಮದಲ್ಲಿ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗೂ ದಲಿತಪರ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಅಸ್ಪೃಶ್ಯತೆ ನಿರ್ಮೂಲನೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮದಲ್ಲಿ ದಲಿತರಿಗೆ ಇದ್ದ ಕ್ಷೌರದ ಸಮಸ್ಯೆಯನ್ನು ನೀಗಿಸಲು ಇಲಾಖೆಯ ವತಿಯಿಂದ ಅಧಿಕೃತವಾಗಿ “ಕ್ಷೌರಿಕ ಅಂಗಡಿ”ಯನ್ನು ಸ್ಥಾಪಿಸಿ ಉದ್ಘಾಟಿಸಲಾಯಿತು.
ಅಧಿಕಾರಿಗಳ ಎಚ್ಚರಿಕೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಮಾತನಾಡಿ, “ಚಂದ್ರನ ಮೇಲೆ ವಾಸಿಸುವ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಕಾಲದಲ್ಲೂ ಅಸ್ಪೃಶ್ಯತೆ ಜೀವಂತವಾಗಿರುವುದು ಬೇಸರದ ಸಂಗತಿ. ಹೋಟೆಲ್, ದೇವಸ್ಥಾನ ಪ್ರವೇಶ ನಿರಾಕರಿಸುವುದು ಕಾನೂನು ಬಾಹಿರ. ಇಂತಹ ಅನಿಷ್ಟ ಪದ್ಧತಿ ಮುಂದುವರಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು,” ಎಂದು ಎಚ್ಚರಿಸಿದರು.
ವಿಶೇಷ ಪ್ರಯತ್ನ:
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ್ ಯಲಿವಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಗ್ರಾಮದಲ್ಲಿ ಈ ಹಿಂದೆ ನೋಟಿಸ್ ನೀಡಿದರೂ ಬಗೆಹರಿಯದ ಕ್ಷೌರದ ಸಮಸ್ಯೆಯನ್ನು, ಈಗ ಹಡಪದ ಸಮಾಜದ ಮುಖಂಡರ ಹಾಗೂ ಗ್ರಾಮ ಪಂಚಾಯತಿಯ ಸಹಕಾರದೊಂದಿಗೆ ಅಂಗಡಿ ಸ್ಥಾಪಿಸುವ ಮೂಲಕ ಬಗೆಹರಿಸಲಾಗಿದೆ. ಇದು ರಾಜ್ಯದಲ್ಲೇ ಒಂದು ಮಾದರಿ ಹಾಗೂ ಐತಿಹಾಸಿಕ ಕಾರ್ಯಕ್ರಮ,” ಎಂದರು.
ಕಾರ್ಯಕ್ರಮದಲ್ಲಿ ದಲಿತ ಹಾಗೂ ಹಡಪದ ಸಮಾಜದ ಮುಖಂಡರಾದ ಸೋಮಣ್ಣ ಹೈತಾಪೂರ, ಲಕ್ಷ್ಮಣ ತಗಡಿನಮನಿ, ಎಚ್.ಡಿ. ಪೂಜಾರ್, ಸತೀಶ್ ಪಾಸಿ ಮತ್ತು ದೇವು ಹಡಪದ ಅವರು ಸಮಾನತೆಯ ಕುರಿತು ಮಾತನಾಡಿದರು. ಇಓ ವಿಶ್ವನಾಥ್ ಹೆಚ್, ಪಿಡಿಓ ಈರಣ್ಣ ಬಂಡಿವಡ್ಡರ್ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಈ ಮೈಲಿಗಲ್ಲಿಗೆ ಸಾಕ್ಷಿಯಾದರು.
