ಗದಗ:ಸಮೀಪದ ಹರ್ಲಾಪೂರ ಗ್ರಾಮದಲ್ಲಿ ಕೊಟ್ಟೂರೇಶ್ವರ ಮಠದ ಆಶ್ರಯದಲ್ಲಿ ಕಾರ್ತಿಕ ಮಾಸದಂಗವಾಗಿ ಹಮ್ಮಿಕೊಂಡ ನಮ್ಮೂರ ಲಕ್ಷ ದಿಪೋತ್ಸವವು ಭಕ್ತಿ ಭಾವಗಳ ಮಧ್ಯೆ ಸಂಭ್ರಮದಿಂದ ಜರುಗಿತು.ದೀಪವನ್ನು ಬೆಳಗುವುದರ ಮೂಲಕ ಮಾಜಿ ಸಚಿವ ನರಗುಂದ ಮತಕ್ಷೇತ್ರ ಶಾಸಕ ಸಿ.ಸಿ.ಪಾಟಿಲ ಅವರು ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದರು. ಡಾ ಕೊಟ್ಟೂರೇಶ್ವರ ಶ್ರೀಗಳು, ಮಳಖೇಡದ ಕೊಟ್ಟೂರೇಶ್ವರ ಶಿವಾಚಾರ್ಯರು, ಜಾಕನಪಲ್ಲಿಯ ಗವಿಶಿದ್ದಲಿಂಗ ಶಿವಾಚಾರ್ಯರು ಸೇರಿದಂತೆ ಹರ ಗುರು ಚರ ಮೂರ್ತಿಗಳು ಸಾನಿಧ್ಯ ವಹಿಸಿದ್ದರು.
ಈ ವೇಳೆ ಸಿ.ಸಿ.ಪಾಟೀಲ ಮಾತನಾಡಿ, ಮನುಷ್ಯನನ್ನು ಕತ್ತಲೆಯಿಂದ ಬೆಳಕಿನಡೆಗೆ ತರುವುದೇ ಕಾರ್ತಿಕೋತ್ಸವದ ಮೂಲ ಉದ್ದೇಶವಾಗಿದೆ. ಕೆಟ್ಟದನ್ನು ತೊರೆದು ಸನ್ಮಾರ್ಗದಲ್ಲಿ ಹೋಗುವುದಕ್ಕೆ ಕಾರ್ತಿಕ ಮಾಸವು ನಮಗೆ ಸಂಪ್ರದಾಯ ಮತ್ತು ಸಂಸ್ಕೃತಿಯ ಸಂಕೇತವಾಗಿದೆ. ಈ ನಿಟ್ಟಿನಲ್ಲಿ ಕೊಟ್ಟೂರೇಶ್ವರ ಮಠವು ಲಕ್ಷ ದೀಪೋತ್ಸವದ ಮೂಲಕ ಗ್ರಾಮಸ್ಥರಲ್ಲಿ ಬೆಳಕಿನ ಮಹತ್ವ ಅರ್ಥೈಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಗ್ರಾಮದ ಪ್ರತಿ ಮನೆಯ ಭಕ್ತರು ತಮ್ಮ ಮನೆಯ ಮುಂದೆ ದೀಪಗಳನ್ನು ಹಚ್ಚಿ ಭಕ್ತಿಯಿಂದ ಕಾರ್ತೀಕೋತ್ಸವವನ್ನು ಆಚರಿಸಿದರು. ಇಡೀ ಗ್ರಾಮವೇ ಲಕ್ಷ ದೀಪೋತ್ಸದಿಂದ ಝಗಮಗಿಸುತ್ತಿತ್ತು. ಇಡೀ ದಿನ ಅನ್ನ ಸಂತರ್ಪಣೆ ನಡೆಯಿತು. ಗ್ರಾಮ ಪಂಚಾಯತ ಸದಸ್ಯರು, ಗಣ್ಯರು, ಯುವಕರು, ಮಹಿಳೆಯರು ಲಕ್ಷ ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು.