ಮುಂಡರಗಿ: ಜಮೀನಿಗೆ ವಾರಸುದಾರರು ಇಲ್ಲದೇ ಇರೋದನ್ನೇ ಬಂಡವಾಳ ಮಾಡಿಕೊಂಡ ತಹಶೀಲ್ದಾರ ಕಚೇರಿಯ ಸರ್ಕಾರಿ ಅಧಿಕಾರಿಗಳು ಹಾಗೂ ರಿಯಲ್ ಎಸ್ಟೇಟ್ ಕುಳಗಳು ಕೂಡಿಕೊಂಡು ಕೊಟ್ಟಿ ದಾಖಲೆ ಸೃಷ್ಟಿಸಿ 42 ಎಕರೆ ಜಮೀನು ಮಾರಾಟ ಮಾಡಿರುವ ಘಟನೆ ಗದಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಹೌದು, ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ರಿ.ಸ.ನಂ 133 ರ 15 ಎಕರೆ -30 ಗುಂಟೆ ಜಮೀನು ಮತ್ತು 136 ರಲ್ಲಿಯ 27 ಎಕರೆ 24 ಗುಂಟೆ ಜಮೀನು ವಾರಸುದಾರರು ಇಲ್ಲದೇ ಹಲವಾರು ವರ್ಷಗಳಿಂದ ಪಾಳು ಬಿದ್ದಿತ್ತು. ಸಾಗುವಳಿ ಇಲ್ಲದ್ದನ್ನ ತಿಳಿದುಕೊಂಡಿದ್ದ ಮುಂಡರಗಿ ತಹಶೀಲ್ದಾರ ಕಚೇರಿಯ ಅಧಿಕಾರಿಗಳು ಹಾಗೂ ನೌಕರರು ಕೊಟ್ಟಿ ವ್ಯಕ್ತಿಯನ್ನ ಜಮೀನು ಮಾಲೀಕನಂತೆ ಬಿಂಬಿಸಿ, ಹಾಜರಪಡಿಸಿ, ತಮ್ಮ ಆಪ್ತರು ಹಾಗೂ ಸಂಬಂಧಿಗಳ ಹೆಸರಿನಲ್ಲಿ ಖರೀದಿಸಿದಂತೆ ಕೊಟ್ಟಿ ದಾಖಲೆಗಳನ್ನ ಸೃಷ್ಠಿ ಮಾಡಿರುವದು ಲೋಕಾಯುಕ್ತ ತನಿಖೆ ಹಾಗೂ ದಾಖಲೆಗಳಿಂದ ಧೃಡಪಟ್ಟಿದೆ.
ಈ ಕುರಿತು ಮುಂಡರಗಿಯ ನಾಗರಾಜ ಕಪ್ಪತ್ತ ಹೊಸಮನಿ ಅನ್ನುವವರು, ಎರೆಡೂ ಜಮೀನಿನ ದಾಖಲೆಗಳೊಂದಿಗೆ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು.
ಮುಂಡರಗಿ ತಾಲೂಕಿನ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು, ಮುಂಡರಗಿಯ ರಿಯಲ್ ಎಸ್ಟೇಟ್ ಕುಳಗಳೊಂದಿಗೆ, ಹಾಗೂ ಪ್ರಭಾವಿ ವ್ಯಕ್ತಿಗಳೊಂದಿಗೆ ಶ್ಯಾಮಿಲಾಗಿ, ಭ್ರಷ್ಟಾಚಾರವೆಸಗಿ ತಮ್ಮ ಹುದ್ದೆಗಳನ್ನು ದುರುಪಯೋಗಪಡಿಸಿಕೊಳ್ಳುವುದರ ಮೂಲಕ ಜಮೀನುಗಳನ್ನು ತಮ್ಮ ಆಪ್ತರಿಗೆ, ಸಂಬಂಧಿಗಳ ಹೆಸರಿನಲ್ಲಿ ಖರೀದಿಸಿ, ಸರ್ಕಾರಕ್ಕೆ ಮೋಸ, ವಂಚನೆ ಹಾಗೂ ದ್ರೋಹವೆಸಗಿರುವುದು ಸಾಬೀತಾಗಿದೆ.

ಈ ಪ್ರಕರಣದಲ್ಲಿ ಮುಂಡರಗಿಯ ಹಿಂದಿನ ಎಫ್ ಡಿ ಸಿ ಆಗಿದ್ದ, ಎಂ.ಎ. ನದಾಫ, ಕಂದಾಯ ನಿರೀಕ್ಷಕರಾಗಿದ್ದ
ಎಚ್.ಎಂ. ಪಾಟೀಲ, ಕೊರ್ಲಹಳ್ಳಿಯ ಹಿಂದಿನ ಗ್ರಾಮ ಆಡಳಿತಾಧಿಕಾರಿ ಮಂಜುನಾಥ ವಾಲ್ಮೀಕಿ, ತಹಶೀಲ್ದಾರ ಕಚೇರಿಯ ವಿಷಯ ನಿರ್ವಾಹಕ ಮಹೇಶ ಬಿ. ನಾಯ್ಕ, ಖಾಸಗಿ ವ್ಯಕ್ತಿಗಳಾದ ಭೀಮಣ್ಣ ಕರಿಯಪ್ಪ ಮರದ, ಶ್ರೀಕಾಂತ ಗೋಪಾಲರಾವ್ ಅರಣೆಕರ/ ಅರ್ಣಿಕರ್, ಮಹ್ಮದಹನೀಫ್ ಅಕ್ಷರಸಾಬ ಹುಯಿಲಗೋಳ, ಮೆಹಬೂಬಸಾಬ್ ಖಾಜಾಸಾಬ್ ತಾಡಪತ್ರಿ, ಜಹುರ ಮೆಹಬೂಬಸಾಬ ಯರಗುಡಿ, ಬಸವರಾಜ ಬಸಪ್ಪ ರಾಮೇನಹಳ್ಳಿ, ಮೌಲಾಸಾಬ ಇಮಾಮಸಾಬ ನದಾಫ, ಗಣೇಶ ವಿಶ್ವನಾಥಸಾ ಕಬಾಡಿ ಹಾಗೂ ಯಲ್ಲಪ್ಪ ರಾಮಪ್ಪ ಕುಕನೂರ ಹಾಗೂ ಇತರ ಹಿರಿಯ ಅಧಿಕಾರಿಗಳು, ನೌಕರರು ಮತ್ತು ಇನ್ನಿತರೆ ಖಾಸಗಿ ವ್ಯಕ್ತಿಗಳು ಈ ಪ್ರಕರಣದಲ್ಲಿ ಕೃತ್ಯ ಎಸಗಿರುವುದನ್ನ ಲೋಕಾಯುಕ್ತ ಅಧಿಕಾರಿಗಳು ಬಯಲಿಗೆಳೆದಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಹನುಮಂತರಾಯ, ಉಪಾಧೀಕ್ಷಕ ವಿಜಯ ಬಿರಾದಾರ ತನಿಖೆಯ ನೇತೃತ್ವ ವಹಿಸಿದ್ದು, ಎರಡೂ ಜಮೀನುಗಳ ಅವ್ಯವಹಾರ, ಭ್ರಷ್ಟಾಚಾರದಲ್ಲಿ ಭಾಗಿಯಾದ ತಹಶೀಲ್ದಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳ ವಿರುದ್ಧ 2024ರ ಡಿ. 26 ರಂದು ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ.
ಮುಂಡರಗಿ ತಾಲೂಕ ಕೊರ್ಲಹಳ್ಳಿ ಗ್ರಾಮದ ರಿ.ಸ. ನಂ: 133 ಮತ್ತು 136ರ ಮೂಲ ಮಾಲೀಕರಾದ ಪ್ರಲ್ಲಾದರಾವ ಗುರುರಾವ ಅರ್ಣೆಕರ/ಅರಣಿಕರ ಅವರು ಕೊರ್ಲಹಳ್ಳಿ ಗ್ರಾಮದ ನಿವಾಸಿಯಾಗಿರುವ ಬಗ್ಗೆಯಾಗಲಿ, ಅವರ ಹೆಸರಿನಲ್ಲಿ ಜಮೀನುಗಳು ಇರುವ ಬಗ್ಗೆ ಮತ್ತು ಅವರು ಸದ್ಯ ಎಲ್ಲಿ ವಾಸವಾಗಿದ್ದಾರೆ, ಜೀವಂತವಾಗಿದ್ದಾರಾ ಅಥವಾ ಮೃತಪಟ್ಟಿದ್ದಾರಾ ಎಂಬ ಮಾಹಿತಿ ಇಲ್ಲದಿರುವ ಕುರಿತು ಹಾಗೂ 1929-30 ರಿಂದ 1988-89ರ ವರೆಗಿನ ಅವಧಿಯಲ್ಲಿ ಪಹಣಿಗಳಲ್ಲಿ ರಿ.ಸ. ನಂ: 133 ಮತ್ತು 136ರಲ್ಲಿಯ ಜಮೀನುಗಳಲ್ಲಿ ಯಾವದೇ ಬೆಳೆ ಬೆಳೆದಿಲ್ಲ (ಕರ್ಲ/ಪಡಾ) ಎಂದು ನಮೂದಿಸಿರುವ ಕುರಿತು ಮಾಹಿತಿ ತಿಳಿದ ಕಂದಾಯ ಅಧಿಕಾರಿಗಳು ಎರೆಡು ಜಮೀನುಗಳ ಪೈಕಿ ಕೊರ್ಲಹಳ್ಳಿ ಗ್ರಾಮ ರಿ.ಸ.ನಂ: 133(319). ಕ್ಷೇತ್ರ 15 ಎಕರೆ-30 ಗುಂಟೆ ಜಮೀನನ್ನು ಕೊಪ್ಪಳ ಜಿಲ್ಲೆಯ ಹುನಕಂಟಿ ಗ್ರಾಮದ ಮೌಲಾಸಾಬ ಇಮಾಮಸಾಬ ನದಾಫ್ ಅವರು, ಪ್ರಹ್ಲಾದರಾವ ತಂದೆ ಗುರುರಾದ ಅರ್ಣೆಕರ್ @ ಅರಣಿಕರ ಆವರಿಂದ 24,30,000 ರೂ. ಗಳಿಗೆ ಖರೀದಿಸಿದಂತೆ ದಾಖಲೆಗಳನ್ನು ಸೃಷ್ಟಿ ಮಾಡಿ 2023ರ ಸೆ. 6 ರಂದು ಮುಂಡರಗಿ ಉಪ ನೋಂದಣಿ ಕಚೇರಿಯಲ್ಲಿ ಖರೀದಿ ದಸ್ತಾವೇಜು (2779/2023-24) ನೋಂದಣಿ ಮಾಡಿರುತ್ತಾರೆ. 2023 ರ ಸೆ. 11 ರಂದು ಹಕ್ಕು ಬದಲಾವಣೆಯಾಗಿ ಖರೀದಿದಾರರ ಹೆಸರಿನಲ್ಲಿ ಪಹಣಿ ಸೃಜನೆ ಮಾಡಿದ್ದಾರೆ.
*ಏನಿದು ಪ್ರಕರಣ*
ಅದೇ ರೀತಿ ಕೊರ್ಲಹಳ್ಳಿ ಗ್ರಾಮದ ರಿ.ಸ.ನಂ:136(322)ರ 27ಎಕರೆ 24 ಗುಂಟೆ ಜಮೀನನ್ನು ಮುಂಡರಗಿಯ ಹೆಮರಡ್ಡಿ ಮಲ್ಲಮ್ಮ ನಗರದ ನಿವಾಸಿ ಗಣೇಶ ವಿಶ್ವನಾಥನಾ ಕಬಾಡಿ ಅವರು ಪ್ರಲ್ಲಾದರಾವ್ ಗುರುರಾವ್ ಅರ್ಣೆಕರ್/ಅರಣಿಕರ ಆವರಿಂದ 45,50,000 ರೂ. ಗಳಿಗೆ ಖರೀದಿಸಿದಂತೆ ದಾಖಲೆಗಳನ್ನು ಸೃಷ್ಟಿ ಮಾಡಿ 2023ರ ಸೆ. 14 ರಂದು ಮುಂಡರಗಿ ಉಪ ನೋಂದಣಿ ಕಚೇರಿಯಲ್ಲಿ ಖರೀದಿ ದಸ್ತಾವೇಜು (2769/2023-24) ನೋಂದಣಿ ಮಾಡಿ, ಈ ಜಮೀನಿನ ಹಕ್ಕು ಬದಲಾವಣೆಯನ್ನು ಮುಂಡರಗಿ ತಹಶೀಲ್ದಾರ ನ್ಯಾಯಾಲಯದ ತಕರಾರು ಅರ್ಜಿಯ ಮೂಲಕ ಇತ್ಯರ್ಥಪಡಿಸಿ, ಮುಂಡರಗಿ ತಹಶೀಲದಾರ ನ್ಯಾಯಾಲಯದ 2023 ರ ಅ. 13ರ ಆದೇಶದಂತೆ ಹಕ್ಕು ಬದಲಾವಣೆಯಾಗಿ ಖರೀದಿದಾರರ ಹೆಸರಿನಲ್ಲಿ ಪಹಣಿ ಸೃಜನೆ ಮಾಡಿದ್ದಾರೆ.
ಅಲ್ಲದೇ, ಈ ಎರಡು ಜಮೀನುಗಳ ಮಾಲೀಕನೆಂದು ಮುಂಡರಗಿ ಉಪ-ನೋಂದಣಿ ಕಚೇರಿಗೆ ಹಾಜರಾಗಿ ಜಮೀನುಗಳನ್ನು ಖರೀದಿಗೆ ಕೊಟ್ಟ ಪ್ರಲ್ಲಾದರಾವ ತಂದೆ ಗುರುರಾವ ಅರ್ಣೆಕರ್/ಅರಣಿಕರ ಎಂಬ ವ್ಯಕ್ತಿಯೂ ನಕಲಿ(ಕೊಟ್ಟಿ)ಯಾಗಿದ್ದು, ವ್ಯಕ್ತಿಯ ಆಧಾರ ಕಾರ್ಡ ಸಹ ಕೊಟ್ಟಿಯಾಗಿದ್ದು, ಈ ವೃದ್ಧನನ್ನು ಕರೆದುಕೊಂಡು ಬಂದು ಖರೀದಿ ಪತ್ರಗಳನ್ನು ನೋಂದಣಿ ಮಾಡಿಸಿದ ವ್ಯಕ್ತಿಯು ನಾಪತ್ತೆಯಾಗಿದ್ದಾನೆ.
” ಪ್ರಕರಣದಲ್ಲಿ ಕೇಳಿ ಬಂದಿರೋ ಮುಂಡರಗಿ ತಹಶೀಲ್ದಾರ ಕಚೇರಿಯ ಅಂದಿನ ಕೆಲವು ಅಧಿಕಾರಿಗಳು ಈಗಾಗಲೇ ಈ ಪ್ರಕರಣದ ಕುರಿತು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ ಎನ್ನಲಾಗಿದೆ. ಅಲ್ಲದೇ, ಪ್ರಕರಣದಲ್ಲಿ ಇಬ್ಬರ ಹೆಸರು ಒಂದೇ ಆಗಿರುವದರಿಂದ ದೂರುದಾರರು ವಿನಾಕಾರಣ ನಮ್ಮನ್ನ ದೋಷಿಸಲ್ಪಟ್ಟಿದ್ದಾರೆ ಎಂದು ಅಧಿಕಾರಿಗಳ ಮಾತಾಗಿದೆ.”
ಅದೇನೆ ಇರಲಿ, ಬೆಂಗಳೂರು ಹಾಗೂ ಮೈಸೂರಿನಂಥ ದೂರದ ದೊಡ್ಡ ದೊಡ್ಡ ನಗರಗಳಲ್ಲಿ ನಡೆಯುತ್ತಿದ್ದ ಲ್ಯಾಂಡ್ ಮಾಫಿಯಾ ಇದೀಗ ಮುಂಡರಗಿಯಂಥ ಪಟ್ಟಣಕ್ಕೆ ಕಾಲಿಟ್ಟಿರುವದು ಆತಂಕಕಾರಿ ಬೆಳವಣಿಗೆಯಾಗಿದೆ. ಸದ್ಯ ಲೋಕಾಯುಕ್ತ ಅಧಿಕಾರಿಗಳು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.