ಗಜೇಂದ್ರಗಡ (ಗದಗ ಜಿಲ್ಲೆ), ಜೂನ್ 23:
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಚಿಲಝರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಬೆಳಿಗ್ಗೆ ಶಾಲಾ ಕಟ್ಟಡದ ಒಂದು ಕೊಠಡಿಯ ಛಾವಣಿ ಏಕಾಏಕಿ ಕುಸಿದು ಬಿದ್ದು, ಇಬ್ಬರು ವಿದ್ಯಾರ್ಥಿಗಳು ಹಾಗೂ ಒಬ್ಬ ಶಿಕ್ಷಕ ಗಾಯಗೊಂಡಿರುವ ದುರ್ಘಟನೆ ಜರುಗಿದೆ.ಇನ್ನುಳಿದ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ಬೆಳಿಗ್ಗೆ 9.30ರ ಸುಮಾರಿಗೆ ನಡೆದಿದ್ದು, ಪ್ರತಿದಿನದಂತೆ ಮಕ್ಕಳನ್ನು ಪ್ರಾರ್ಥನೆಗೆ ಕರೆಯಲು ಶಿಕ್ಷಕ ಎಂಡಿ ಒಂಟಿ ಅವರು ಶಾಲೆಯ ಪ್ರಾರ್ಥನಾ ಕೊಠಡಿಗೆ ಹೋಗಿದ್ದರು. ಇದೇ ವೇಳೆ ಹಳೆಯ ಹಾಗೂ ಶಿಥಿಲಾವಸ್ಥೆಯಲ್ಲಿದ್ದ ಕೊಠಡಿಯ ಕಾಂಕ್ರೀಟ್ ಛಾವಣಿ ಕುಸಿದು ಅವರ ಮೇಲೆಯೇ ಬಿದ್ದಿದೆ. ಛಾವಣಿಯಿಂದ ಜಾರಿದ ಭಾರಿ ಬಲ್ಕ್‌ನಿಂದಾಗಿ ಮಕ್ಕಳ ತಲೆಗೆ ಹಾಗೂ ಶಿಕ್ಷಕರ ಭುಜಕ್ಕೆ ತೀವ್ರ ಗಾಯವಾಗಿದೆ.
ಘಟನೆಯ ಬಳಿಕ ಶಾಲಾ ಸಿಬ್ಬಂದಿ ಹಾಗೂ ಗ್ರಾಮಸ್ಥರು ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಮಕ್ಕಳ ಸ್ಥಿತಿಯು ಆರೋಗ್ಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ, ಆದರೆ ಶಿಕ್ಷಕರಿಗೆ ಭುಜದ ಭಾಗದಲ್ಲಿ ಗಂಭೀರ ಗಾಯವಾಗಿರುವುದರಿಂದ ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಅವಶ್ಯವಾಗಿದೆ.
ಈ ಶಾಲಾ ಕಟ್ಟಡವು ಸುಮಾರು 25 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ಕಳೆದ ಕೆಲವು ವರ್ಷಗಳಿಂದ ಶಿಥಿಲ ಸ್ಥಿತಿಗೆ ತಲುಪಿದೆಯೆಂದು ವರದಿಯಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ಶಾಲಾ ಆಡಳಿತವು ಆರು ತಿಂಗಳ ಹಿಂದೆ ಅಧಿಕಾರಿಗಳಿಗೆ ಪತ್ರದ ಮೂಲಕ ಲಿಖಿತವಾಗಿ ಗಮನಕ್ಕೆ ತಂದರೂ, ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ ಎಂಬುದು ಸ್ಥಳೀಯ ಮೂಲಗಳಿಂದ ತಿಳಿದು ಬಂದಿದೆ.
“ಪದೇ ಪದೇ ಮನವಿಗಳಿಂದೂ ಶಾಲೆಯ ದುರಸ್ಥಿಗೆ ಗಮನಹರಿಸದ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ,” ಎಂಬ ಗಂಭೀರ ಆರೋಪ ಸ್ಥಳೀಯ ನಾಗರಿಕರಿಂದ ಕೇಳಿಬರುತ್ತಿದೆ. ಶಾಲಾ ಮಕ್ಕಳ ಪ್ರಾಣದ ಸುರಕ್ಷತೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಅಸಡ್ಡೆಯ ಧೋರಣೆಯನ್ನು ಗ್ರಾಮಸ್ಥರು ಖಂಡಿಸಿದ್ದಾರೆ.
ಈ ಘಟನೆ ಜಿಲ್ಲೆಯಲ್ಲಿ ಶಾಲಾ ಕಟ್ಟಡಗಳ ಸುರಕ್ಷತೆ ಕುರಿತು ಮರುಚಿಂತನಕ್ಕೆ ಕಾರಣವಾಗಿದ್ದು, ಇಂತಹ ಅಪಘಾತಗಳು ಪುನರಾವೃತವಾಗದಂತೆ ತುರ್ತು ಕ್ರಮ ತೆಗೆದುಕೊಳ್ಳಬೇಕೆಂಬ ಒತ್ತಾಯವೂ ವ್ಯಕ್ತವಾಗಿದೆ.