ನವದೆಹಲಿ:ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್ (DA and DR) ಅನ್ನು ಎರಡು ಪ್ರತಿಶತದಷ್ಟು ಏರಿಕೆ ಮಾಡುವ ನಿರ್ಧಾರಕ್ಕೆ ಕೇಂದ್ರ ಸಂಪುಟ ಇಂದು ಶುಕ್ರವಾರ ಅನುಮೋದನೆ ನೀಡಿದೆ. ಇದರೊಂದಿಗೆ ಸರ್ಕಾರಿ ನೌಕರರ ಒಟ್ಟು ತುಟ್ಟಿಭತ್ಯೆ ಶೇ. 53 ಇದ್ದದ್ದು ಶೇ. 55ಕ್ಕೆ ಏರುತ್ತದೆ. ಡಿಎ ಏರಿಕೆಯೊಂದಿಗೆ ಮನೆ ಬಾಡಿಗೆ ಭತ್ಯೆ, ಪ್ರಯಾಣ ಭತ್ಯೆ ಸೇರಿದಂತೆ ಇತರ ಭತ್ಯೆಗಳೂ ಹೆಚ್ಚಲಿವೆ. ಈ ಹೊಸ ಡಿಎ ಮತ್ತು ಡಿಆರ್ ದರಗಳು ಜನವರಿ ತಿಂಗಳಿಂದ ಅನ್ವಯ ಆಗುತ್ತವೆ. ಏಪ್ರಿಲ್ನಲ್ಲಿ ಸಿಗಲಿರುವ ಮಾರ್ಚ್ ತಿಂಗಳ ಸಂಬಳದಲ್ಲಿ ಈ ಏರಿಕೆ ಕಾಣಬಹುದು. ಜನವರಿಯನ್ನೂ ಸೇರಿಸಿ ಒಟ್ಟು ಮೂರು ತಿಂಗಳ ಅರಿಯರ್ಸ್ ಸೇರಿ ಬರುತ್ತದೆ. ಪಿಂಚಣಿದಾರರಿಗೂ ಹೆಚ್ಚಿನ ಪಿಂಚಣಿ ಬರುತ್ತದೆ.
ವರ್ಷಕ್ಕೆ ಎರಡು ಬಾರಿ ಡಿಎ ಮತ್ತು ಡಿಆರ್ ಪರಿಷ್ಕರಣೆ
ಹಣದುಬ್ಬರ ಅಥವಾ ಬೆಲೆ ಏರಿಕೆ ಪರಿಣಾಮವು ಉದ್ಯೋಗಿಗಳು ಮತ್ತು ಪಿಂಚಣಿದಾರರ ಮೇಲೆ ಆಗುವುದನ್ನು ತಪ್ಪಿಸಲು ಸರ್ಕಾರವು ಡಿಯರ್ನೆಸ್ ಅಲೋಯನ್ಸ್ ಮತ್ತು ಡಿಯರ್ನೆಸ್ ರಿಲೀಫ್ ಅನ್ನು ಹೆಚ್ಚಿಸುತ್ತದೆ. ಹಣದುಬ್ಬರ ದರದ ಆಧಾರವಾಗಿ ವರ್ಷಕ್ಕೆ ಎರಡು ಬಾರಿ ಡಿಎ ಮತ್ತು ಡಿಆರ್ ಅನ್ನು ಏರಿಕೆ ಮಾಡಲಾಗುತ್ತದೆ.

ಜನವರಿಯಿಂದ ಜೂನ್ವರೆಗೆ ಮತ್ತು ಜುಲೈನಿಂದ ಡಿಸೆಂಬರ್ವೆಗಿನ ಅವಧಿಗಳಿಗೆ ದರ ಪರಿಷ್ಕರಣೆ ಮಾಡಲಾಗುತ್ತದೆ. ದ್ವಿತೀಯಾರ್ಧದ ಡಿಎ ದರವನ್ನು ನವೆಂಬರ್ನಲ್ಲಿ ನಿರ್ಧರಿಸುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರದ ಅಡಿಯಲ್ಲಿ ಇರುವ ಉದ್ಯೋಗಿಗಳ ಸಂಖ್ಯೆ 48.66 ಲಕ್ಷ ಇದೆ. ನಿವೃತ್ತರಾಗಿ ಪಿಂಚಣಿ ಪಡೆಯುತ್ತಿರುವವರ ಸಂಖ್ಯೆ 66.55 ಲಕ್ಷ ಇದೆ. 1.15 ಕೋಟಿಗೂ ಅಧಿಕ ಮಂದಿಗೆ ಈ ಡಿಎ ಡಿಆರ್ ಏರಿಕೆ ಲಾಭವಾಗುತ್ತದೆ.
ಮೂಲವೇತನದೊಂದಿಗೆ ವಿಲೀನವಾಗುತ್ತಾ ಡಿಎ?
ಉದ್ಯೋಗಿಯ ಮೂಲವೇತನದ ಆಧಾರದ ಮೇಲೆ ಡಿಎ ನೀಡಲಾಗುತ್ತಿದೆ. ಅಂದರೆ, 50,000 ರೂ ಮೂಲವೇತನ ಹೊಂದಿರುವವರಿಗೆ ಶೇ. 53 ಡಿಎ ಎಂದರೆ 26,500 ರೂ ಇರುತ್ತದೆ. ಈಗ ಅದು ಶೇ. 55ಕ್ಕೆ ಏರಿಕೆ ಆದಲ್ಲಿ ಡಿಎ 27,500 ರೂಗೆ ಏರುತ್ತದೆ.
7ನೇ ವೇತನ ಆಯೋಗ ಮಾಡಿದ ಶಿಫಾರಸು ಪ್ರಕಾರ, ಡಿಎ ಪ್ರಮಾಣ ಶೇ. 55 ಮುಟ್ಟಿದಾಗ ಅದು ಉದ್ಯೋಗಿಯ ಮೂಲವೇತನದೊಂದಿಗೆ ವಿಲೀನಗೊಳ್ಳಬೇಕು. ಆ ರೀತಿ ಆದಲ್ಲಿ 50,000 ರೂ ಮೂಲವೇತನವು 77,500 ರೂಗೆ ಏರಬಹುದು.
ಬರಲಿದೆ 8ನೇ ವೇತನ ಆಯೋಗ
ಏಳನೇ ವೇತನ ಆಯೋಗ ಮಾಡಿದ ಶಿಫಾರಸುಗಳು ಈ ವರ್ಷದವರೆಗೆ ಮಾತ್ರ ಸಿಂಧು ಇರುತ್ತದೆ. ಸರ್ಕಾರ ಈಗಾಗಲೇ 8ನೇ ವೇತನ ಆಯೋಗ ರಚನೆ ಮಾಡಿದ್ದು, ಅದು 2026ರಿಂದ ಶಿಫಾರಸು ಮಾಡಲು ಕಾರ್ಯಾರಂಭಿಸುತ್ತದೆ. 8ನೇ ವೇತನ ಆಯೋಗ ಕಾರ್ಯಾಚರಣೆಗೆ ಇಳಿಯುವ ಮುನ್ನವೇ ಮೂಲವೇತನದೊಂದಿಗೆ ಡಿಎ ವಿಲೀನಗೊಳ್ಳುತ್ತದಾ ಎಂಬುದು ಗೊತ್ತಿಲ್ಲ. ಹಾಗೇನಾದರೂ ವಿಲೀನವಾದಲ್ಲಿ ಸರ್ಕಾರಿ ನೌಕರರ ಸಂಬಳ ಗಣನೀಯವಾಗಿ ಹೆಚ್ಚಳವಾಗಲು ಸಹಾಯವಾಗಬಹುದು.