ಬೆಂಗಳೂರು: ಕೆಲವೊಬ್ಬರಿಗೆ ಸಿನಿಮಾ ಹುಚ್ಚು ಎಷ್ಟಿರುತ್ತದೆ ಎಂದರೆ ತಮ್ಮ ಜೀವದ ಹಂಗನ್ನ ತೊರೆದು ಸಿನಿಮಾ ವೀಕ್ಷಣೆ ಅಥವಾ ಸಿನಿಮಾದಲ್ಲಿನ ಹಿರೋಗಳನ್ನ ನೋಡೋಕೆ ಹಾತೊರೆಯುತ್ತಾರೆ. ಆದರೆ ಅದರಿಂದ ತಮ್ಮ ಜೀವಕ್ಕೆ ಪ್ರಾಣಹಾನಿ ಅನ್ನೋದು ಅವರು ಮರೆತುಬಿಡುತ್ತಾರೆ.
ಇದಕ್ಕೆ ಸಾಕ್ಷಿ ಎನ್ನುವಂತೆ ಬೆಂಗಳೂರಿನಲ್ಲೊಂದು ಇಂಥಹ ಘಟನೆ ಜರುಗಿದೆ. ಇಂದು ಬಿಡುಗಡೆ ಆಗಿರೋ ಪುಷ್ಪಾ-2 ಸಿನಿಮಾ ನೋಡಲು ತೆರಳುತ್ತಿದ್ದ 19 ವರ್ಷದ ಯುವಕ ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಜರುಗಿದೆ. ಗುರುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ರೈಲ್ವೇ ಸೇತುವೆ ಬಳಿ ಈ ದಾರುಣ ಘಟನೆ ಜರುಗಿದ್ದು, ಮೃತ ಯುವಕನನ್ನ ಪ್ರವೀಣ್ ಎಂದು ಗುರುತಿಸಲಾಗಿದೆ. ಪ್ರವೀಣ್ ಆಂಧ್ರಪದೇಶದ ನಿವಾಸಿಯಾಗಿದ್ದು, ಬ್ಯಾಂಕ್ ಸರ್ಕಲ್ ಬಳಿಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಗೆಳೆಯರೊಂದಿಗೆ ಸಿನಿಮಾ ನೋಡಲು ತೆರಳುವ ವೇಳೆ ರೈಲ್ವೆ ಹಳಿ ದಾಟುತ್ತಿರುವಾಗ ಏಕಾಏಕಿ ಬಂದ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ.