ಗದಗ: ನಗರದ ಜಾಮೀಯಾ ಮಸೀದಿ ಬಳಿಯ ತ್ರಿವೇಣಿ ಹೋಟೆಲ್ ನಲ್ಲಿ ಗುರುವಾರ ಬೆಳಗಿನ ಜಾವ ಅಕಸ್ಮಾತ್ ಬೆಂಕಿ ಹೊತ್ತಿಕೊಂಡು ಹೋಟೆಲ್ ಸಂಪೂರ್ಣವಾಗಿ ಧಗಧಗಿಸಿದೆ. ಬೆಳಿಗ್ಗೆ ಸುಮಾರು 4.30 ರ ಸುಮಾರಿಗೆ ಸಂಭವಿಸಿದ ಈ ಅಗ್ನಿ ಅವಘಡದಲ್ಲಿ ಹೋಟೆಲ್‌ನ ಪೀಠೋಪಕರಣಗಳು, ಅಡುಗೆ ಉಪಕರಣಗಳು, ಹೋಟೆಲ್ ಸಾಮಾನುಗಳು ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಭಸ್ಮವಾಗಿವೆ.
ಮೂಲಗಳ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಪ್ರಾರಂಭಗೊಂಡಿದ್ದು ಕ್ಷಣಾರ್ಧದಲ್ಲಿ ಹೋಟೆಲ್‌ನೊಳಗೆ ವ್ಯಾಪಿಸಿದೆ. ಸ್ಥಳೀಯರು ಹೊಗೆಯುಬ್ಬರವನ್ನು ಗಮನಿಸಿ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಪರಿಣಾಮ, ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಕ್ಕೆ ಕೈ ಹಾಕಿದರು. ಹಲವು ಗಂಟೆಗಳ ಶ್ರಮದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.
ಈ ಹೋಟೆಲ್ ನಾಗೇಶ್ ಸವಡಿ ಅವರ ಮಾಲೀಕತ್ವದಲ್ಲಿದ್ದು, ಅವಘಡದಲ್ಲಿ ಸುಮಾರು ₹10 ಲಕ್ಷ ಮೌಲ್ಯದ ವಸ್ತುಗಳು ಹಾನಿಗೊಂಡಿವೆ ಎಂದು ಪ್ರಾಥಮಿಕ ಅಂದಾಜು ವ್ಯಕ್ತವಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಘಟನಾ ಸ್ಥಳಕ್ಕೆ ನಗರ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಾರ್ಟ್ ಸರ್ಕ್ಯೂಟ್ ಕಾರಣವೇ ಬೆಂಕಿಗೆ ಮೂಲ ಎಂದು ಶಂಕಿಸಲಾಗಿದೆ.ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು, ಪ್ರಕರಣದ ಕುರಿತು ಮುಂದಿನ ತನಿಖೆ ನಡೆಯುತ್ತಿದೆ.
