ಲಕ್ಷ್ಮೇಶ್ವರ: ಹಳ್ಳಿಗಳಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆ ಸಾಧ್ಯವಾದಷ್ಟು ಕಡಿಮೆಯಾಗಬೇಕು ಜನರು ನೆಮ್ಮದಿಯಿಂದ ಬದುಕುವಂತಾಗಬೇಕು. ಈ ನಿಟ್ಟಿನಲ್ಲಿ ಗ್ರಾಮಸ್ಥರ ಸಹಕಾರದಿಂದ ಪೊಲೀಸ್ ಇಲಾಖೆಯಿಂದಾಗಬಹುದಾದ ಕೆಲಸಗಳನ್ನು ಮಾಡಲು “ಎಸ್ಪಿ ನಡೆ ಹಳ್ಳಿ ಕಡೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ನೂತನ ಎಸ್ಪಿ ರೋಹನ್ ಜಗದೀಶ ಹೇಳಿದರು.
ಲಕ್ಷ್ಮೇಶ್ವರ ಸುದ್ದಿ: ಪರಮೇಶ ಲಮಾಣಿ.
ಪಟ್ಟಣದಲ್ಲಿ ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಜಿಲ್ಲಾಧಿಕಾರಿಗಳು ಹಳ್ಳಿಗಳಲ್ಲಿ ವಾಸ್ತವ್ಯ ಮಾಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ರೀತಿಯಲ್ಲಿ ಎಸ್ಪಿ ನಡೆ ಹಳ್ಳಿಗಳ ಕಡೆ ಎನ್ನುವ ಕಾರ್ಯಕ್ರಮವನ್ನು ರೂಪಿಸಲಾಗುವುದು. ಒಂದು ದಿನ ಹಳ್ಳಿಗಳಲ್ಲಿ ಸುತ್ತಾಡಿ ಅಲ್ಲಿನ ಕಾನೂನು ವ್ಯವಸ್ಥೆ, ಅಕ್ರಮ ಮದ್ಯ ಮಾರಾಟ, ಇಸ್ಪೀಟ್, ಅಕ್ರಮ ಮರಳು ದಂಧೆ, ಕಳ್ಳತನಗಳ ನಿಯಂತ್ರಣ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಯ ಕಾರ್ಯವೈಖರಿ ಇತ್ಯಾದಿಗಳ ಬಗ್ಗೆ ತಿಳಿದು ಅಗತ್ಯ ಕ್ರಮ ಕೈಗೊಳ್ಳುವುದರ ಜತೆಗೆ ಆ ದಿನ ರಾತ್ರಿ ಗ್ರಾಮದಲ್ಲಿಯೇ ವಾಸ್ತವ್ಯ ಮಾಡುವ ನಿರ್ಧಾರ ಮಾಡಿದ್ದೇನೆ.
ಲಕ್ಷೇಶ್ವರ ತಾಲೂಕಿನಿಂದಲೇ ಈ ಕಾರ್ಯ ಪ್ರಾರಂಭಿಸೋಣ.. ಪತ್ರಕರ್ತರು ಆ ಗ್ರಾಮ ನಿಗದಿಪಡಿಸಲಿ’ ಎಂದರು.

ಪೊಲೀಸ್ ಜನಸ್ನೇಹಿಯಾಗಬೇಕು.. ವಾರದಲ್ಲಿ ಒಂದು ದಿನ ಜಿಲ್ಲೆಯ ತಾಲೂಕೊಂದರ ಹಳ್ಳಿಯನ್ನು ಆಯ್ಕೆ ಮಾಡಿಕೊಂಡು ವಸ್ತು ಸ್ಥಿತಿ ಅರಿಯುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಯಲ್ಲಿ ವಾಸ್ತವ್ಯ ಮಾಡಲು ಅವಕಾಶ ಕೋರುತ್ತೇನೆ. ಗ್ರಾಮಗಳ ಅನಿರೀಕ್ಷಿತ ಭೇಟಿ ಮಾಡುತ್ತೇನೆ. ಎಲ್ಲ ಠಾಣೆಗಳ ಸಿಪಿಐ, ಪಿಎಸ್‌ಐಗಳೂ ಈ ಕಾರ್ಯ ಮಾಡುವಂತೆ ಪ್ರೇರೆಪಿಸುವೆ. ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು, ಸಂಘ ಸಂಸ್ಥೆಗಳು, ಮಾಧ್ಯಮದವರು ಸಹಕಾರ ನೀಡಿದಲ್ಲಿ ಉತ್ತಮ ಸಮಾಜ, ಗ್ರಾಮ ನಿರ್ಮಾಣಕ್ಕೆ ಅಳಿಲು ಸೇವೆ ಮಾಡಿದಂತಾಗುತ್ತದೆ ಎಂದರು.
ಪಟ್ಟಣದಲ್ಲಿನ ಟ್ರಾಫಿಕ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸ್ವತಃ ಪರಿಶೀಲಿಸುತ್ತೇನೆ ಮತ್ತು ಅಗತ್ಯ ಕ್ರಮಕ್ಕೆ ಸೂಚಿಸುತ್ತೇನೆ. ಎಲ್ಲರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಥರ್ಡ್ ಐ ನಿಂದ ತಪ್ಪಿಸಿಕೊಳ್ಳಲು ಅನೇಕರು ನಂಬರ್ ಪ್ಲೇಟ್ ತಿರುಚಿರುವುದು, ತೆಗೆದು ಹಾಕಿರುವುದು ಸರಿಯಲ್ಲ. ಪ್ರತಿಯೊಬ್ಬರೂ ವ್ಯವಸ್ಥೆಯನ್ನು ದೂರುವುದನ್ನೇ ರೂಢಿಸಿಕೊಂಡಿದ್ದೇವೆ ಆದರೆ ಕರ್ತವ್ಯ, ಜವಾಬ್ದಾರಿ, ಕಾನೂನು ಪಾಲಿಸುತ್ತಿಲ್ಲ. ಈ ಬಗ್ಗೆ ಆತ್ಮ ವಿಮರ್ಶೆ ಅಗತ್ಯವಾಗಿದೆ ಎಂದರು.