ಗದಗ, ಜುಲೈ 28 – ಜಿಲ್ಲೆಯ ಹುಲಕೋಟಿ ಗ್ರಾಮದಲ್ಲಿ ಕಳೆದ ಏಪ್ರಿಲ್ 2ರಂದು ಸಂಭವಿಸಿದ್ದ ಟಗರು ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಗದಗ ಗ್ರಾಮೀಣ ಪೊಲೀಸರು, ಅತ್ಯಂತ ಕಾರ್ಯಕ್ಷಮ ತನಿಖೆಯಿಂದ ಆರೋಪಿತರನ್ನು ಪತ್ತೆ ಮಾಡಿ, ಸುಮಾರು ₹3.85 ಲಕ್ಷ ಮೌಲ್ಯದ 25 ಟಗರುಗಳನ್ನು ಮೋಟಾರ ಸೈಕಲ್ ಸಹಿತ ಜಪ್ತಿ ಮಾಡಿದ್ದಾರೆ.
ದಿನಾಂಕ 02.04.2025 ರಂದು ಮಧ್ಯರಾತ್ರಿ 12 ರಿಂದ ಬೆಳಗ್ಗೆ 2.30 ರೊಳಗಿನ ಅವಧಿಯಲ್ಲಿ ಹುಲಕೋಟಿ ಗ್ರಾಮದ ಗಿರಿಯಪ್ಪ ಅಳವಂಡಿ ಎಂಬುವವರ ಮನೆಯಿಂದ 5 ಟಗರುಗಳನ್ನು ಕಳ್ಳತನ ಮಾಡಿದ ಆರೋಪಿಗಳ ವಿರುದ್ಧ ಪ್ರಕರಣ (ಅಪರಾಧ ಸಂಖ್ಯೆ 77/2025) ದಾಖಲಿಸಲಾಗಿತ್ತು. ಈ ಕುರಿತು ಬಿಎನ್ಎಸ್-2023 ಕಾಯ್ದೆಯ ಸೆಕ್ಷನ್ 303(2) ಅಡಿಯಲ್ಲಿ ದೂರು ದಾಖಲಾಗಿತ್ತು.
ತೀಕ್ಷ್ಣ ತನಿಖೆ – ಶ್ಲಾಘನೀಯ ನೇತೃತ್ವ
ಈ ಪ್ರಕರಣವನ್ನ ಪತ್ತೆ ಹಚ್ಚಲು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀ ರೋಹನ್ ಜಗದೀಶ್, ಅವರ ನೇತೃತ್ವದಲ್ಲಿ ತನಿಖಾ ತಂಡ ವಹಿಸಿಕೊಂಡಿತ್ತು, ಉಪ ಪೊಲೀಸ್ ಅಧೀಕ್ಷಕರಾದ ಮಹಾಂತೇಶ ಸಜ್ಜನ (ಸಿಇಎನ್), ಮುರ್ತುಜಾ ಖಾದ್ರಿ (ಗದಗ ಉಪವಿಭಾಗ) ಇವರ ಮಾರ್ಗದರ್ಶನದೊಂದಿಗೆ ಕಾರ್ಯಾಚರಣೆ ನಡೆದಿತ್ತು.
ಆ ಪ್ರಕಾರ ಪಿಐ ಸಿದ್ದರಾಮೇಶ್ವರ ಗಡೇದ, ಪಿಎಸ್ಐ ಎಸ್.ಬಿ. ಕವಲೂರ ಹಾಗೂ ಸಿಬ್ಬಂದಿಗಳಾದ ಪ್ರಕಾಶ ಗಾಣಿಗೇರ, ಬಸವರಾಜ ಗುಡ್ಲಾನೂರ, ಹೇಮಂತ ಪರಸನ್ನವರ, ಅಶೋಕ ಬೂದಿಹಾಳ, ಅನೀಲ ಬನ್ನಿಕೊಪ್ಪ, ಕೋಟೆಪ್ಪ ಒಡೆಯರ, ಪ್ರವೀಣ ಶಾಂತಪ್ಪನವರ ಹಾಗೂ ತಾಂತ್ರಿಕ ಸಿಬ್ಬಂದಿಗಳಾದ ಗುರು ಬೂದಿಹಾಳ, ಸಂಜೀವ ಕೊರಡೂರ ಜವಾಬ್ದಾರಿಯೊಂದಿಗೆ ತನಿಖೆ ನಡೆಸಿ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿತರು:
1. ಶಿವರಾಜ ಚಂದ್ರಪ್ಪ ಭಜಂತ್ರಿ (21) – ಆಟೋ ಚಾಲಕ, ಕಳಸಾಪೂರ
2. ಆಕಾಶ ಫಕ್ಕಿರಪ್ಪ ಭಜಂತ್ರಿ (20) – ಸೆಂಟ್ರಿಂಗ್ ಕೆಲಸಗಾರ, ಬೆಣ್ಣೆಹಳ್ಳಿ.ಮುಂಡರಗಿ
3. ಕಾನೂನು ಸಂಘರ್ಷಕ್ಕೊಳಗಾದ ಬಾಲಕ – ವಿವರ ಪತ್ತೆ ಹಂಚಿಕೆಯಾಗಿಲ್ಲ.
ಚಾಣಾಕ್ಷತನದ ಬಂಧನ – ನ್ಯಾಯಾಂಗ ವಶಕ್ಕೆ ಒಪ್ಪಣೆ (ಮೈನರ್)
ದಿನಾಂಕ 27.07.2025 ರಂದು ಸಮರ್ಥ ರೀತಿ ಕಾರ್ಯಚರಿಸಿದ ತಂಡ, ಆರೋಪಿತರನ್ನು ಚಾಣಾಕ್ಷತನದಿಂದ ಬಂಧಿಸಿದ್ದು, ವಿಚಾರಣೆ ನಂತರ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಇವರಿಂದ ಕೃತ್ಯಕ್ಕೆ ಬಳಸಿದ ಮೋಟಾರ ಸೈಕಲ್ ಕೂಡ ಜಪ್ತಿ ಮಾಡಲಾಗಿದೆ.
ಪೊಲೀಸ್ ಇಲಾಖೆಗೆ ಅಭಿನಂದನೆ..
ಸತತ ನಿಗಾ, ವೈಜ್ಞಾನಿಕ ಪರಿಶೋಧನೆ ಮತ್ತು ಸಾರ್ವಜನಿಕರ ಸಹಕಾರದಿಂದ ಈ ದೊಡ್ಡ ಮಟ್ಟದ ಕಳ್ಳತನ ಬೆರಗು ಬಡಿಯುವಂತೆ ಬಯಲಾಗಿದ್ದು, ಈ ಕಾರ್ಯಾಚರಣೆಗೆ ಗದಗ ಎಸ್ಪಿ ಶ್ರೀ ರೋಹನ್ ಜಗದೀಶ್ ಐಪಿಎಸ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಸಾರ್ವಜನಿಕರ ಭದ್ರತೆಗಾಗಿ ತಮ್ಮ ತಂಡವು ನಿರಂತರ ಶ್ರಮಿಸುತ್ತಿದೆ ಎಂಬುದನ್ನು ಅವರು ಈ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.