ಗದಗ, ಮೇ 18:
ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಿಂದ ಇದೇ ಮೊದಲ ಬಾರಿಗೆ ನೀಡಲಾಗುತ್ತಿರುವ “ಡಿಜಿಪಿ ಪ್ರಶಂಸನಾ ಪದಕ” (DGP Commendation Disc) ಗೆ ಗದಗ ಜಿಲ್ಲೆಯಿಂದ ಹಿರಿಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ಆಯ್ಕೆಯಾಗಿದ್ದಾರೆ. ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಬಿ.ಎಸ್. ನೇಮಗೌಡ, ಮುಳಗುಂದ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ಶಿವಯೋಗಿ, ಮತ್ತು ಮುಂಡರಗಿ ಠಾಣೆಯ ಕಾನ್ಸಟೇಬಲ್ ಜಾಫರ್ ಬಚ್ಚೇರಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕರ್ತವ್ಯ ನಿಷ್ಠೆ ಮತ್ತು ಸಾರ್ವಜನಿಕ ಸೇವೆಗೆ ಗೌರವ
ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 200 ಮಂದಿ ಪೊಲೀಸರನ್ನು ಆಯ್ಕೆಮಾಡಲಾಗಿದ್ದು, ಗದಗ ಜಿಲ್ಲೆಯಿಂದ ಮೂವರು ಹೆಸರುಗಳು ಈ ಪೈಕಿ ಪ್ರಾಮುಖ್ಯತೆಯೊಂದಿಗೆ ಕಾಣಿಸಿಕೊಂಡಿವೆ. ತಮ್ಮ-ತಮ್ಮ ಕ್ಷೇತ್ರಗಳಲ್ಲಿ ಕರ್ತವ್ಯ ನಿಷ್ಠೆ, ಅಪರಾಧ ನಿರೋಧನೆ, ಸಾರ್ವಜನಿಕರೊಂದಿಗೆ ಸಮನ್ವಯ, ಶಿಸ್ತುಪಾಲನೆ ಹಾಗೂ ಸಮಾಜಮುಖಿ policing ನಲ್ಲಿ ತೋರಿದ ಶ್ರೇಷ್ಠತೆ ಈ ಗೌರವಕ್ಕೆ ಕಾರಣವಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಮೇಲಿನ ಪೋಸ್ಟ್ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಬಿ.ಎಸ್. ನೇಮಗೌಡ: ಪ್ರಗತಿಗೆ ದಾರಿ ತೋರಿದ ನಾಯಕತ್ವ
ಜಿಲ್ಲಾ ಎಸ್ಪಿ ಬಿ.ಎಸ್. ನೇಮಗೌಡ ಅವರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ, ಪೊಲೀಸರ ಮನೋಬಲ ಹೆಚ್ಚಿಸುವಲ್ಲಿ ಹಾಗೂ ಕಟ್ಟುನಿಟ್ಟಿನ ಸಾರಿಗೆ ನಿಯಮ ಪಾಲನೆ, ಥರ್ಡ ಐ ನಂಥ ವಿಶಿಷ್ಠ ಯೋಜನೆ ಮತ್ತು ಟ್ರಾಫಿಕ್ ಸಿಗ್ನಲ್ ಗಳಲ್ಲಿ ಸಾರ್ವಜನಿಕರಿಗೆ ಅನೂಕೂಲಕರ ವಾತಾವರಣ ಸೇರಿದಂತೆ ಹೀಗೆ ಸಾರ್ವಜನಿಕರ ನಂಬಿಕೆ ಗಳಿಸುವಲ್ಲಿ ನಿರಂತರ ಪ್ರಯತ್ನಗಳನ್ನು ತೆಗೆದುಕೊಂಡಿದ್ದಾರೆ. ಅಧಿಕಾರದ ನಿಷ್ಠೆ ಮತ್ತು ಸಮಾಜದ ಒಳಿತಿಗಾಗಿ ಅವರ ಸೇವೆ ಶ್ಲಾಘನೀಯವಾಗಿರುವದು ಪ್ರಶಸ್ತಿಗೆ ಕಾರಣವಾಗಿದೆ.
ಸಂಗಮೇಶ ಶಿವಯೋಗಿ: ಮುಳಗುಂದದಲ್ಲಿ ಮಾದರಿ ಕಾನೂನು ಸುವ್ಯವಸ್ಥೆ
ಮುಳಗುಂದ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ಶಿವಯೋಗಿ ಅವರು ಗ್ರಾಮೀಣ ಪ್ರದೇಶದಲ್ಲಿ ಕಾನೂನು ಹಾಗೂ ಶಾಂತಿ ಕಾಪಾಡುವಲ್ಲಿ ನಿರಂತರ ಶ್ರಮವಹಿಸಿದ್ದಾರೆ. ಗದಗ ನಗರದಲ್ಲೂ ಅವರು ಕರ್ತವ್ಯ ನಿರ್ವಹಿಸಿ ಇಲಾಖೆಗೆ ಸವಾಲಾಗಿದ್ದ ಅಪರಾಧಿಗಳನ್ನ ಪತ್ತೆ ಹಚ್ಚುವಲ್ಲಿ ಮೊದಲ ಸ್ಥಾನದಲ್ಲಿದ್ದು, ಅವರ ತಂತ್ರಜ್ಞಾನದ ಜ್ಞಾನ ಹಾಗೂ ಪರಿಣಾಮಕಾರಿ ನಿರ್ವಹಣೆ ಹಾಗೂ ಸಾರ್ವಜನಿಕರ ಜೊತೆಗಿನ ಜನಸ್ನೇಹಿ ಆಡಳಿತ ಮುಳಗುಂದ ಮಾತ್ರವಲ್ಲದೇ ಗದಗ ಸೇರಿದಂತೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಜಾಫರ್ ಬಚ್ಚೇರಿ:ಜನತೆ ನಿಕಟ ಬಂಧು ಕಾನ್ಸಟೇಬಲ್, ಮಾದರಿ ಸೇವೆ
ಮುಂಡರಗಿ ಪೊಲೀಸ್ ಠಾಣೆಯ ಕಾನ್ಸಟೇಬಲ್ ಜಾಫರ್ ಬಚ್ಚೇರಿ ಅವರು ತಮ್ಮ ಕರ್ತವ್ಯನಿಷ್ಠೆ, ಜನಸ್ನೇಹಿ ನಡವಳಿಕೆ ಮತ್ತು ಅಪರಾಧ ಪತ್ತೆ ಕಾರ್ಯಗಳಲ್ಲಿ ತೋರಿದ ತೀವ್ರತೆಗಾಗಿ ರಾಜ್ಯ ಮಟ್ಟದ ಮಾನ್ಯತೆಯನ್ನು ಪಡೆದಿದ್ದಾರೆ. ಅವರು ಮುಂಡರಗಿಯ ಜನತೆಯ ನಿಕಟ ಬಂಧುವಾಗಿದ್ದು, ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲಿನ ವಿಶ್ವಾಸ ಹೆಚ್ಚುವಂತೆ ಮಾಡಿದ್ದಾರೆ.
ಮೇ 21ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ವಿತರಣಾ ಸಮಾರಂಭ
ಈ ಶ್ರೇಷ್ಠ ಸಾಧಕರಿಗೆ ಪ್ರಶಸ್ತಿ ವಿತರಣೆ, ಮೇ 21ರಂದು ಬೆಂಗಳೂರಿನಲ್ಲಿ ನಡೆಯಲಿರುವ ಡಿಜಿಪಿ ಕಮಾಂಡೇಷನ್ ಡಿಸ್ಕ್ ಪರೇಡ್ನಲ್ಲಿ ನಡೆಯಲಿದೆ. ಈ ಸಮಾರಂಭವನ್ನು ಡಿಜಿಪಿ ಅಲೋಕ್ ಮೋಹನ್ ಅವರು ನೇರವಾಗಿ ನಿರ್ವಹಿಸಲಿದ್ದು, ಇದು ಅವರ ನಿವೃತ್ತಿಗೆ ಮುನ್ನದ ಕೊನೆಯ ಅಧಿಕೃತ ಪರೇಡ್ ಆಗಿರುವುದು ವಿಶೇಷ.
ಅಭಿನಂದನೆಗಳ ಮಹಾಪೂರ
ಈ ತ್ರಿಮೂರ್ತಿಗಳ ಸಾಧನೆಗೆ ಜಿಲ್ಲೆಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಪೊಲೀಸ್ ಇಲಾಖೆಯ ಇತರ ಸಿಬ್ಬಂದಿ, ಸಾರ್ವಜನಿಕರು ಹಾಗೂ ಸ್ನೇಹಿತರು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ನೇರವಾಗಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. “ಇವರು ಸಕಾಲದಲ್ಲಿ ಮಾಡಿದ ಸತ್ಯ ಸೇವೆಗೆ ದೊರೆತ ಪ್ರಾಮಾಣಿಕ ಗೌರವ ಇದಾಗಿದೆ. ಇಂತಹ ಸೇವೆಗಳಿಗೆ ಪದಕ ರೂಪದಲ್ಲಿ ಸ್ಮರಣೆ ಸಿಗುವುದು ಮುಂದೆ ಕೆಲಸ ಮಾಡುವವರಿಗೆ ಪ್ರೇರಣೆ,” ಎಂದು ಹಿರಿಯರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ, ಗದಗ ಜಿಲ್ಲೆಯ ಮೂವರು ಶ್ರೇಷ್ಠರು ಪಡೆದ ಡಿಜಿಪಿ ಪ್ರಶಂಸಾ ಪದಕ ರಾಜ್ಯಕ್ಕೆ ಮಾತ್ರವಲ್ಲ, ಜಿಲ್ಲೆಯ ಪೊಲೀಸರು, ಸಾರ್ವಜನಿಕರಿಗೂ ಹೆಮ್ಮೆಯ ವಿಷಯ. ಇವರ ಸೇವೆ ಭವಿಷ್ಯದ ಪೀಳಿಗೆಗೆ ಮಾದರಿಯಾಗಿದೆ ಎಂಬುದು ಖಚಿತ.
