ಗದಗ:
ಗದಗ ನಗರದಲ್ಲಿ ಇತ್ತೀಚೆಗೆ ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಕಾರಿನ ಮೇಲೆ ಪಾಕಿಸ್ತಾನ ಧ್ವಜ ಪ್ರದರ್ಶನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು.
ಗದಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಕ್ರೀದ್ ಹಬ್ಬದಂದು, ಅಪ್ರಾಪ್ತ ವಯಸ್ಸಿನ ಇಬ್ಬರು ಯುವಕರು ಕಾರಿನ ಬೋನಟ್ ಮೇಲೆ ಪಾಕಿಸ್ತಾನ ರಾಷ್ಟ್ರದ ಬಾವುಟವನ್ನ ಅಳವಡಿಸಿ, ಜೊತೆಗೆ ನಂಬರ್ ಪ್ಲೇಟ್ ಮೇಲೆಯೂ ಪಾಕಿಸ್ತಾನ ರಾಷ್ಟ್ರಧ್ವಜದ ಚಿತ್ರವನ್ನು ಪ್ರದರ್ಶಿಸಿದ್ದರು. ಈ ದೃಶ್ಯಾವಳಿ ನಂತರ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೆಯಾಗಿದ್ದು, ‘ತಹಸೀಮ್’ ಎನ್ನುವ ಯುವಕನ ಐಡಿಯಿಂದ ಮೊದಲಿಗೆ ಪೋಸ್ಟ್ ಮಾಡಲಾಗಿತ್ತು. ಅದೇ ಪೋಸ್ಟ್ ಅನ್ನು ‘ಅಬ್ದುಲ್’ ಎನ್ನುವ ಇನ್ನೊಂದು ಖಾತೆಯಿಂದ ಮತ್ತೊಮ್ಮೆ ಹಂಚಿಕೊಳ್ಳಲಾಗಿತ್ತು.
ಈ ಕೃತ್ಯವು ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಸಾಧ್ಯತೆ ಇದ್ದುದರಿಂದ, ಪೊಲೀಸರು ಸ್ವಯಂ ಪ್ರೇರಿತವಾಗಿ (ಸುಮೋಟೋ) ಪ್ರಕರಣ ದಾಖಲಿಸಿಕೊಂಡಿದ್ದರು. BNS ಕಾಯ್ದೆ ಕಲಂ 299, 353(2), R/W 3/5 ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಈಗಾಗಲೇ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ನಂತರ ಘಟನೆಯು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ ಕಾನೂನಾತ್ಮಕ ಶಿಕ್ಷೆ ವಿಧಿಸಬೇಕು ಎಂಬ ಒತ್ತಾಯ ಹೆಚ್ಚಾಗಿತ್ತು. ಆರೋಪಿಗಳನ್ನು ಬಂಧಿಸದೆ ವಿಳಂಬ ಮಾಡುತ್ತಿರುವುದಕ್ಕೆ ಜನತೆಯಲ್ಲೂ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.
ಇದೀಗ ಈ ಪ್ರಕರಣದ ಹಿನ್ನೆಲೆಯಲ್ಲಿ ಗದಗ ಜಿಲ್ಲಾ ವಕೀಲರ ಸಂಘ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಆರೋಪಿಗಳ ಪರವಾಗಿ ಯಾರೂ ವಕಾಲತ್ತು ವಹಿಸಬಾರದು ಎಂಬಂತೆ ಒಮ್ಮತದಿಂದ ತೀರ್ಮಾನ ಕೈಗೊಂಡಿದೆ. ಸಂಘದ ಈ ನಿರ್ಧಾರವನ್ನು ಕಚೇರಿ ನೋಟಿಸ್ ಬೋರ್ಡ್ ಮೇಲೆ ಪ್ರಕಟಿಸಿ, ಆರೋಪಿಗಳ ಪರವಾಗಿ ವಕೀಲರು ಹಾಜರಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.
ಇತ್ತ, ಬಕ್ರೀದ್ ಹಬ್ಬದಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈಗಾಗಲೇ ಮಂಡ್ಯದಲ್ಲಿ ನಡೆದಿದ್ದ ಕಲ್ಲು ತೂರಾಟದ ಘಟನೆ ಇನ್ನೂ ಶಮನವಾಗುವ ಮುನ್ನವೇ ಗದಗದಲ್ಲೂ ಸಮಾನ ಘಟನೆ ಬಹಿರಂಗವಾಗಿರುವುದು ಸಾಮಾಜಿಕ ಸೌಹಾರ್ದತೆಗೆ ಹೊಸ ತಲೆನೋವಿನಂತೆ ಪರಿಣಮಿಸಿದೆ.
ಸಾರ್ವಜನಿಕರ ಮನಸ್ಸಿನಲ್ಲಿ ಈಗ ಒಂದು ಮಾತ್ರ ಬೇಡಿಕೆ– ಆರೋಪಿಗಳನ್ನು ಬಂಧಿಸಿ ಕಾನೂನಿನ ಮುಂದೆ ನಿಲ್ಲಿಸಬೇಕು ಮತ್ತು ಸಮಾಜದ ಐಕ್ಯತೆ ಕದಡುವ ಕೃತ್ಯಗಳಿಗೆ ಯಾವುದೇ ರೀತಿಯ ಸಡಿಲಿಕೆ ನೀಡಬಾರದು ಎನ್ನುವದು.