ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕದಾಂಪುರ ಹಾಗೂ ಮುಂಡರಗಿ ವ್ಯಾಪ್ತಿಯ ಶಿರೋಳ ಗ್ರಾಮಗಳಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ನಿನ್ನೆ (ಅ.8) ರಾತ್ರಿ ಖಚಿತ ಮಾಹಿತಿ ಮೇರೆಗೆ ನಡೆಸಿದ ದಾಳಿಯಲ್ಲಿ ಅಪಾರ ಪ್ರಮಾಣದ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿ ಪತ್ತೆಯಾಗಿದೆ. ಈ ಕಾರ್ಯಾಚರಣೆಯು ಜಿಲ್ಲೆಯಾದ್ಯಂತ ಹುಟ್ಟಿಕೊಳ್ಳುತ್ತಿರುವ ಅಕ್ರಮ ಅಕ್ಕಿ ದಂಧೆಕೋರರಿಗೆ ಸಾಕಷ್ಟು ಬಿಸಿ ಮುಟ್ಟಿಸಿದೆ.
ಆಹಾರ ಇಲಾಖೆ ಉಪನಿರ್ದೇಶಕ ಎಂ.ಎಸ್. ರಮೇಶ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ದಾಳಿಯ ವೇಳೆ, ಕದಾಂಪುರ ಗ್ರಾಮದ ಮನೆಯೊಂದರ ಚಾವಣಿಯಲ್ಲಿ ಇರಿಸಲಾಗಿದ್ದ ಸುಮಾರು 61 ಚೀಲಗಳುಳ್ಳ 25 ಕ್ವಿಂಟಲ್ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ಆದರೆ ಅಲ್ಲಿ ಅಕ್ರಮವಾಗಿ ಅಕ್ಕಿ ಸಂಗ್ರಹಿಸಿ ಇಟ್ಟಿದ್ದ ವ್ಯಕ್ತಿ ಅಧಿಕಾರಿಗಳ ಕೈಯಿಂದ ತಪ್ಪಿಸಿಕೊಂಡಿದ್ದು, ಅತನ ಬಳಿಯಿದ್ದ ತೂಕದ ಯಂತ್ರವನ್ನ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ ಮುಂಡರಗಿ ವ್ಯಾಪ್ತಿಯ ಶಿರೋಳ ಗ್ರಾಮದಲ್ಲಿ ನಡೆದ ದಾಳಿಯಲ್ಲಿ, ಸ್ಥಳೀಯರಾದ ಬೂದಪ್ಪ ಕುರಿ ಅನ್ನೋರಿಗೆ ಸೇರಿದ 203 ಚೀಲಗುಳಳ್ಳ 93 ಕ್ವಿಂಟಲ್ ಪಡಿತರ ಅಕ್ಕಿ ಪತ್ತೆಯಾಗಿದೆ. ಈ ವೇಳೆ ಗದಗ ಗ್ರಾಮೀಣ ಆಹಾರ ನಿರೀಕ್ಷಕ M.S.ಹಿರೇಮಠ, ಮುಂಡರಗಿ ತಾಲೂಕು ಆಹಾರ ನಿರೀಕ್ಷಕ ಶಿವರಾಜ ಆಲೂರು ಹಾಗೂ ಮುಂಡರಗಿ ಪೊಲೀಸ್ ಸಿಬ್ಬಂದಿ ಸಹ ದಾಳಿಯಲ್ಲಿ ಪಾಲ್ಗೊಡಿದ್ದರು.
ಇನ್ನು ಇಂದೂ ಸಹ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 95 ಚೀಲಗುಳಳ್ಳ 40 ಕ್ವಿಂಟಲ್ ಅಕ್ಕಿ ಪತ್ತೆಯಾಗಿದೆ. ಆಹಾರ ಇಲಾಖೆ ಉಪನಿರ್ದೇಶಕರ ಮಾರ್ಗದರ್ಶನ ಮೇರೆಗೆ ಶಿವರಾಜ ಆಲೂರು ಈ ದಾಳಿ ನಡೆಸಿದ್ದು ಶಂಕರಪ್ಪ ಮೇಟಿ ಅನ್ನೋರು ಈ ಅಕ್ರಮ ಪಡಿತರ ಅಕ್ಕಿಯನ್ನ ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ.
ಒಟ್ಟಾರೆ ನಾಲ್ಕು ಲಕ್ಷಕ್ಕೂ ಅಧಿಕ ಈ ಪಡಿತರ ಅಕ್ಕಿಯನ್ನ ವಶಪಡಿಸಿಕೊಳ್ಳಲಾಗಿದ್ದು, ಅನ್ನಭಾಗ್ಯದ ಅಕ್ಕಿ ಯೋಜನೆಯಡಿ ಬಡಜನರಿಗೆ ತಲುಪಬೇಕಾದದ್ದಾಗಿದ್ದು, ಇಷ್ಟು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿಟ್ಟಿರುವುದು ಅಧಿಕಾರಿಗಳಿಗೆ ಆಘಾತಕಾರಿಯಾಗಿದೆ.
ಆದರೆ, ಘಟನೆ ನಡೆದು ಹಲವು ಗಂಟೆಗಳಾದರೂ ಸಂಬಂಧಿತ ತಾಲೂಕು ಆಹಾರ ಇಲಾಖೆ ಅಧಿಕಾರಿಗಳು ಇನ್ನೂ ಪ್ರಕರಣವನ್ನು ದಾಖಲಿಸಿಲ್ಲ. ಇಷ್ಟು ದೊಡ್ಡ ಮಟ್ಟದಲ್ಲಿ ಪಡಿತರ ಅಕ್ಕಿ ದುರುಪಯೋಗವಾಗುತ್ತಿರುವಾಗ, ಆಡಳಿತದಿಂದ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ತಡವಾಗುತ್ತಿರುವುದು ಗಂಭೀರ ವಿಚಾರವಾಗಿ ಹೊರಹೊಮ್ಮಿದೆ.
ಈ ದಾಳಿಯ ಹಿನ್ನೆಲೆಯಲ್ಲಿ, ಅನ್ನಭಾಗ್ಯ ಯೋಜನೆಯ ಅಕ್ಕಿ ಹಗರಣದ ಮೇಲೆ ಮತ್ತೊಮ್ಮೆ ಸಾರ್ವಜನಿಕರ ಗಮನ ಸೆಳೆಯಲಾಗಿದೆ. ಬಡಜನರಿಗೆ ತಲುಪಬೇಕಾದ ಅಕ್ಕಿ ಅಕ್ರಮವಾಗಿ ಸಂಗ್ರಹಣೆಗೊಳ್ಳುತ್ತಿರುವುದು ಕಳವಳದ ಸಂಗತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಡರಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮುಂದಿನ ತನಿಖೆ ನಡೆಯಬೇಕಿದೆ.