ಗದಗ ನಗರದ ಮುಳಗುಂದ ನಾಕಾ ಬಳಿಯ ದುರ್ಗಾ ಬಾರ್ ಎದುರು ನಿನ್ನೆ ತಡರಾತ್ರಿ ಯುವಕನ ಮೇಲೆ ಭೀಕರ ಹಲ್ಲೆ ನಡೆದಿದೆ.
ತಲ್ವಾರ್, ಚಾಕು ಮತ್ತು ಬೀಯರ್ ಬಾಟಲಿನ ಸಹಾಯದಿಂದ ಮೂವರು ಪುಡಿ ರೌಡಿಗಳು ಅರುಣಕುಮಾರ್ ಕೋಟೆಗಲ್ಲ ಎಂಬ ಯುವಕನ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಘಟನೆ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.
ಘಟನೆ ತನ್ನ ಸಿನಿಮೀಯ ಛಾಪು ತೋರುತ್ತಿದ್ದರೂ, ಅದರ ನಿಜಸ್ವರೂಪ ಅತ್ಯಂತ ಭಯಾನಕವಾಗಿತ್ತು. ಜನನಿಬೀಡ ಪ್ರದೇಶದಲ್ಲೇ ನೂರಾರು ಜನ್ರ ಎದುರಿನಲ್ಲಿ ಮೂವರು ಯುವಕರು ಯಾವುದೇ ಭಯವಿಲ್ಲದೆ ಹಠಾತ್ ಹಲ್ಲೆ ನಡೆಸಿದ್ದು, ಸ್ಥಳದಲ್ಲಿದ್ದ ಕೆಲವರು ಮೊಬೈಲ್ ಫೋನ್‌ನಲ್ಲಿ ಈ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಈಗ ಅವುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಗದಗ–ಬೆಟಗೇರಿ ಅವಳಿ ನಗರಗಳನ್ನು ಬೆಚ್ಚಿಬೀಳುವಂತೆ ಮಾಡಿದೆ.
ಹಳೆಯ ದ್ವೇಷದ ಹಿನ್ನಲೆ
ಕಿಲ್ಲಾ ಓಣಿ ಹಾಗೂ ಒಕ್ಕಲಿಗರ ಓಣಿ ಯುವಕರ ನಡುವಿನ ಹಳೆಯ ಗಲಾಟೆಯೇ ಈ ಹಲ್ಲೆಗೆ ಕಾರಣ ಎನ್ನಲಾಗುತ್ತಿದೆ. ಹಲ್ಲೆಯ ವೇಳೆ ಕತ್ತು, ಮುಖ, ತಲೆ, ಹೊಟ್ಟೆ, ಎದೆ, ಕೈ ಸೇರಿ ದೇಹದ ಹಲವು ಭಾಗಗಳಿಗೆ ಚಾಕುವಿನಿಂದ ಗಂಭೀರ ಇರಿತ ಮಾಡಲಾಗಿದೆ.
ಹೋಟೆಲ್‌ಗೆ ನುಗ್ಗಿ ದಾಳಿ ಮಾಡಿದ ನಂತರ ಬಾರ್ ಬಳಿ ಮತ್ತೊಂದು ಹಲ್ಲೆ
ಘಟನೆಯ ಮುನ್ನ ಅರುಣಕುಮಾರ್ ಹೋಟೆಲ್ ವೊಂದರಲ್ಲಿ ಆಹಾರ ಸೇವಿಸುತ್ತಿದ್ದಾಗ, ಮೂವರು ಯುವಕರು — ಅಭಿಷೇಖ್, ಸಾಯಿಲ್ ಮತ್ತು ಮುಸ್ತಾಕ್ — ಏಕಾಏಕಿ ಒಳನುಗ್ಗಿ ಅರುಣಕುಮಾರ ಮೇಲೆ ತಲ್ವಾರ್ ಹಾಗೂ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಅರುಣಕುಮಾರ್ ಹೊರಗೆ ಓಡಿದ ಬಳಿಕ ದುರ್ಗಾ ಬಾರ್ ಹತ್ತಿರ ಅವರಿಗೆ ಮತ್ತೊಮ್ಮೆ ಬೀಯರ್ ಬಾಟಲಿನಿಂದ ತಲೆಗೆ ಬಲವಾಗಿ ಹೊಡೆದು ಗಂಭೀರ ಗಾಯಪಡಿಸಲಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದ ಅರುಣಕುಮಾರ್; ಜನರು ಆಸ್ಪತ್ರೆಗೆ ಸಾಗಣೆ..
ಹಲ್ಲೆಯ ನಂತರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅರುಣಕುಮಾರ್ ನನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದು, ಪ್ರಸ್ತುತ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗನ ಮೇಲಿನ ದಾಳಿ ತಿಳಿದು ಆಸ್ಪತ್ರೆಗೆ ಧಾವಿಸಿದ ತಾಯಿ ಕಣ್ಣೀರಲ್ಲಿ ಮಗನ ಸ್ಥಿತಿ ನೋಡಿ ಭಾವುಕರಾಗಿದ್ದಾರೆ.
ಪೊಲೀಸರ ವೇಗದ ತನಿಖೆ — ಮೂವರು ಆರೋಪಿಗಳ ಬಂಧನ
ಘಟನೆಯ ಬಳಿಕ ಪರಾರಿಯಾಗಿದ್ದ ಆರೋಪಿಗಳನ್ನು ಶಹರ ಪೊಲೀಸರು ತನಿಖೆ ಚುರುಕುಗೊಳಿಸಿ ಕೆಲವು ಗಂಟೆಗಳಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು —
- ಮುಸ್ತಾಕ್ (ಕಿಲ್ಲಾ ಓಣಿ), ತಂದೆ: ಹುಸೇನ್ ಸಾಬ ಮೂಲಿಮನಿ — ಆಟೋ ಚಾಲಕ
- ಅಭಿಷೇಕ್ ಹರ್ಲಾಪೂರ (ಹುಡ್ಕೋ ನಿವಾಸಿ)
- ಸಾಯಿಲ್ (ದಾಸರ ಓಣಿ), ತಂದೆ: ಹುಸೇನ್ ಸಾಬ — ಟೈಲ್ಸ್ ಕೆಲಸಗಾರ
ಪೊಲೀಸರು ಆರೋಪಿಗಳಿಂದ ಪ್ರಾಥಮಿಕ ವಿಚಾರಣೆ ನಡೆಸಿದ್ದು, ಹಳೆಯ ವೈಷಮ್ಯವೇ ದಾಳಿಗೆ ಕಾರಣ ಎಂದು ಸೂಚಿಸಲಾಗಿದೆ.
ಘಟನಾ ಸ್ಥಳಕ್ಕೆ ಗದಗ ಡಿವೈಎಸ್ಪಿ ಮುರ್ತುಜಾ ಖಾದ್ರಿ ಹಾಗೂ ಇನ್ಸಪೆಕ್ಟರ್ ಜೂಲಕಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗದಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಈ ಪ್ರಕರಣ ಸ್ಥಳೀಯರಲ್ಲಿ ಭಯ, ಆತಂಕವನ್ನು ಉಂಟುಮಾಡಿದ್ದು, ಜನಸಂದಣಿಯ ಪ್ರದೇಶದಲ್ಲಿ ಕಾನೂನು–ಸುವ್ಯವಸ್ಥೆ ಪ್ರಶ್ನಾರ್ಥಕವಾಗಿರುವ ಘಟನೆ ಎಂದು ನಾಗರಿಕರು ವ್ಯಕ್ತಪಡಿಸುತ್ತಿದ್ದಾರೆ.
