ಗದಗ:ನಾಡಿನ ಗ್ರಾಮೀಣ ಸಂಸ್ಕೃತಿ, ರೈತ ಸಂಸ್ಕೃತಿ, ಶಿಲ್ಪಕಲೆ ಹಾಗೂ ಜನಪದ ಸಾಹಿತ್ಯವನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶದಿಂದ ಉತ್ಸವ ಗಾರ್ಡನ್ ಕಾರ್ಯನಿರ್ವಹಿಸುತ್ತಿದ್ದು, ಕಲೆಯ ಮೂಲಕ ವ್ಯವಹಾರವನ್ನು ಸಮರ್ಥವಾಗಿ ನಡೆಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡು, ಶಿಗ್ಗಾಂವ ಗ್ರಾಮದ ನೂರಾರು ಕುಟುಂಬಗಳಿಗೆ ಕಲಾತ್ಮಕ ಉದ್ಯೋಗ ನೀಡುವ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆದಿರುವುದು ನನಗೆ ಸಂತೃಪ್ತಿ ತಂದಿದೆ ಎಂದು ಉತ್ಸವ ಗಾರ್ಡನ್ ಕಲಾ ನಿರ್ದೇಶಕಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಡಾ. ವೇದಾರಾಣಿ ದಾಸನೂರ ಹೇಳಿದರು.
ನಗರದ ಕೆ.ಎಚ್. ಪಾಟೀಲ್ ಸಭಾಭವನದಲ್ಲಿ, ಸೋಮವಾರ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಕೈಗಾರಿಕಾ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳದ ರಜತ ಮಹೋತ್ಸವದ ಅಂಗವಾಗಿ, ಮಹಿಳೆಯರಿಗಾಗಿ ಜರುಗಿದ ವಿವಿಧ ಕ್ರೀಡಾಕೂಟ ಮತ್ತು ಅಡುಗೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪಾರಿತೋಷಕ ವಿತರಣೆ ಮತ್ತು ಸಾಂಸ್ಕೃತಿಕ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
“ರಾಜ್ಯದ ಗ್ರಾಮೀಣ ಹಾಗೂ ರೈತ ಸಂಸ್ಕೃತಿ, ಸಾಹಿತ್ಯ, ಕಲೆ, ಶಿಲ್ಪಕಲೆಗಳ ಐತಿಹಾಸಿಕ ಗತವೈಭವವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ದೃಷ್ಟಿಯಿಂದಲೇ ಉತ್ಸವ ಗಾರ್ಡನ್ ಹುಟ್ಟುಹಾಕಲಾಗಿದೆ. ಇದರಿಂದ ಕಲಾ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಒದಗಿದಂತಾಗಿದೆ. ಶಿಗ್ಗಾಂವ ಗ್ರಾಮದ ನೂರಾರು ಜನರಿಗೆ ಉದ್ಯೋಗ ದೊರಕಿರುವುದರಿಂದ, ಆ ಕುಟುಂಬಗಳ ಬದುಕಿಗೆ ಆರ್ಥಿಕ ಶಕ್ತಿ ನೀಡಿದೆ”ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ, ಗೃಹ ಉದ್ಯಮಿ ಶ್ರೀಮತಿ ಅನ್ನಪೂರ್ಣ ಆರ್. ಸಂಗೋಳಗಿ ಅವರು ಮಾತನಾಡಿ, “ಮಹಿಳೆ ಮನಸ್ಸು ಮಾಡಿದರೆ ಮತ್ತು ದೃಢ ಹಠ ಹೊಂದಿದರೆ, ಸಾರ್ವಜನಿಕ ವಲಯದಲ್ಲಿ ಬೇಕಾದ ಸಾಧನೆ ಮಾಡಬಹುದು. ಬ್ಯಾಂಕ್ ವ್ಯವಸ್ಥಾಪಕರ ಪತ್ನಿಯಾಗಿರುವ ನಾನು ನೂರಾರು ಕುಟುಂಬಗಳಿಗೆ ಉದ್ಯೋಗ ಕಲ್ಪಿಸಿ, ಅವರಲ್ಲಿ ಆರ್ಥಿಕ ಪ್ರಾಬಲ್ಯ ತುಂಬಿ, ಸಮಾಜದ ಮುಖ್ಯವಾಹಿನಿಗೆ ಕರೆ ತಂದಿರುವುದು ನಿಜವಾದ ಹೆಮ್ಮೆ. ಮಹಿಳೆ ಮನೆಯ ನಾಲ್ಕು ಗೋಡೆಗಳೊಳಗೆ ಸೀಮಿತವಾಗಿರಬಾರದು. ಸ್ವಾವಲಂಬಿ ಬದುಕಿನ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆಯಬೇಕು. ಈ ದೃಷ್ಟಿಯಿಂದ ಶೇಂಗಾ ಹಿಂಡಿ ಕುಟ್ಟುವ ಗೃಹ ಉದ್ಯಮವನ್ನು ಪ್ರಾರಂಭಿಸಿ, ಈಗ 15 ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿ ನೂರಾರು ಕೈಗಳಿಗೆ ಉದ್ಯೋಗ ನೀಡಿರುವುದು ನನಗೆ ತೃಪ್ತಿ ತಂದಿದೆ”ಎಂದರು.

ಕಾರ್ಯಕ್ರಮಕ್ಕೆ ಸೂಡಿಯ ಜುಕ್ತಿಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ನಂದಾ ಚಂದ್ರು ಬಾಳಿಹಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ತಾತನಗೌಡ ಪಾಟೀಲ್, ಉಪಾಧ್ಯಕ್ಷ ಅಶೋಕಗೌಡ ಪಾಟೀಲ್, ಚೇರ್‌ಮನ್ ಆನಂದ ಪೋತ್ನಿಸ್, ಕೋ-ಚೇರ್‌ಮನ್ ಸದಾಶಿವಯ್ಯ ಮದರಿಮಠ, ಸಂಗಯ್ಯ ಗಣಾಚಾರಿ, ಶ್ರೀಮತಿ ಸುವರ್ಣ ವಾಲೀಕಾರ, ಶ್ರೀಮತಿ ಜ್ಯೋತಿ ದಾನಪ್ಪಗೌಡರ, ಶ್ರೀಮತಿ ಎಂ.ಪಿ. ಸುಮಾ, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ ಬೆಂಗಳೂರು ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ನಾಗರತ್ನ ಶಿವಪ್ಪ ಮುಳಗುಂದ ಸೇರಿದಂತೆ ಮಹಿಳಾ ಘಟಕದ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಕೃಷ್ಣಪ್ರಿಯಾ ಪ್ರಾರ್ಥನೆ ಗೀತೆ ಹಾಡಿದರು. ಹೂವಿನ ಹಡಗಲಿಯ ಎಂ.ಪಿ. ಸುಮಾ ಅವರ ನೇತೃತ್ವದ ರಂಗಭಾರತಿ ಕಲಾ ತಂಡವು ಭಾರತೀಯ ನೃತ್ಯಗಳನ್ನು ಮನೋಜ್ಞವಾಗಿ ಪ್ರಸ್ತುತಪಡಿಸಿತು.
