ಗದಗ: ಕರ್ನಾಟಕದ ಇತಿಹಾಸ, ಸಂಸ್ಕೃತಿ, ಸಾಹಿತ್ಯ, ಸಂಗೀತ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಅನನ್ಯ ಸ್ಥಾನ ಪಡೆದಿರುವ ಗದಗ ಜಿಲ್ಲೆ, ಆ.24 ರಂದು ಗದಗ ಜಿಲ್ಲೆಯಾಗಿ ತನ್ನ 28 ವರ್ಷಗಳ ಪಯಣವನ್ನು ಪೂರೈಸಿ 29ನೇ ವಸಂತಕ್ಕೆ ಕಾಲಿಟ್ಟಿದೆ. ಈ ಹರ್ಷದ ಕ್ಷಣವನ್ನು ಗದಗ ನಗರದಲ್ಲಿರುವ ಕೆಫೆ 26 ಕಾಫಿ ಶಾಪ್ನಲ್ಲಿ, ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ರೋಹನ್ ಜಗದೀಶ್ ಅವರಿಂದ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಲಾಯಿತು.
ಈ ಕಾರ್ಯಕ್ರಮವನ್ನು ಗದಗ Online ತಂಡದ ಅಡ್ಮಿನ್ ಮನೋಜ್ ಕ್ರೂಜ್ ಹಾಗೂ ಅವರ ತಂಡದ ಸದಸ್ಯರು ಸಂಯೋಜಿಸಿದ್ದು, ಜಿಲ್ಲೆಯ ಅಸ್ತಿತ್ವಕ್ಕೆ ಸಂಬಂಧಿಸಿದ ಸ್ಮರಣೀಯ ಕ್ಷಣಗಳನ್ನು ನೆನೆದು ಸಂತೋಷ ಹಂಚಿಕೊಳ್ಳಲಾಯಿತು.
ಗದಗ ಜಿಲ್ಲೆಯ ಸ್ಥಾಪನೆಯ ಇತಿಹಾಸ
1997ರ ಆಗಸ್ಟ್ 24ರಂದು ರಾಜ್ಯದ ಅದಾಗಿನ ಮುಖ್ಯಮಂತ್ರಿ ಜೆ.ಹೆಚ್. ಪಟೇಲ್ ಅವರ ಆಡಳಿತಕಾಲದಲ್ಲಿ ಗದಗನ್ನು ಪ್ರತ್ಯೇಕ ಜಿಲ್ಲೆ ಎಂದು ಘೋಷಿಸಲಾಯಿತು. ಆ ದಿನದಿಂದ ಪ್ರಾರಂಭವಾದ ಈ ಜಿಲ್ಲೆಯ ಆಡಳಿತ ಪಯಣ ಇಂದು 28 ವರ್ಷಗಳ ಗರಿಮೆಯನ್ನು ಹೊಂದಿದ್ದು, ಅನೇಕ ಸಾಧನೆಗಳನ್ನು ದಾಖಲಿಸಿಕೊಂಡಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗದಗ ಜಿಲ್ಲೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ.
ಜಿಲ್ಲೆಯ ಕೀರ್ತಿ – ಹೋರಾಟ, ಸಂಸ್ಕೃತಿ, ಕಲೆ, ಕ್ರೀಡೆ
ಗದಗ ಜಿಲ್ಲೆಯ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಪರಿಚಯಿಸಿದ ಅನೇಕ ವೀರರು, ಸಾಹಿತಿಗಳು, ಕಲಾವಿದರು, ಸಂಗೀತಗಾರರು ಮತ್ತು ಕ್ರೀಡಾಪಟುಗಳು ನಮ್ಮ ನೆಲದಲ್ಲಿ ಜನಿಸಿದ ಹೆಮ್ಮೆಗೈದ ವ್ಯಕ್ತಿಗಳು.
- ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ತರ ಪಾತ್ರ ವಹಿಸಿದ ಫಕೀರಪ್ಪ ಮುಳಗುಂದ, ಅಂದಾನಪ್ಪ ದೊಡ್ದಮೇಟಿ, ಮುಂಡರಗಿ ಭೀಮರಾಯ್, ವೆಂಕುಸಾ ಬಾಂಡಗೆ ಮುಂತಾದ ಹೋರಾಟಗಾರರನ್ನು ಜಿಲ್ಲೆ ನೀಡಿದೆ.
- 15ನೇ ಶತಮಾನದ ಪ್ರಸಿದ್ಧ ಸಾಹಿತ್ಯಿಕರು ಕುಮಾರವ್ಯಾಸ, ಚಾಮರಸ, ದುರ್ಗಸಿಂಹ ಕೀರ್ತಿಯನ್ನು ತಂದುಕೊಟ್ಟರೆ, ಸಂಗೀತ ಲೋಕದಲ್ಲಿ ಪಂ. ಪಂಚಾಕ್ಷರಿ ಗವಾಯಿಗಳು, ಪಂ. ಭೀಮಸೆನ್ ಜೋಶಿ, ಪಂ. ಪುಟ್ಟರಾಜ ಗವಾಯಿಗಳು ಭಾರತೀಯ ಶಾಸ್ತ್ರೀಯ ಸಂಗೀತವನ್ನು ವಿಶ್ವದ ಮಟ್ಟಿಗೆ ಎತ್ತಿಕೊಂಡು ಹೋದರು.
- ಸಾಹಿತ್ಯ ಕ್ಷೇತ್ರದಲ್ಲಿ ಚೆನ್ನವೀರ ಕಣವಿ, ಕ್ರೀಡೆ ಕ್ಷೇತ್ರದಲ್ಲಿ ಸುನೀಲ್ ಜೋಶಿ ಮುಂತಾದ ಅನೇಕರು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
- ಇತ್ತೀಚಿನ ದಿನಗಳಲ್ಲಿ, ಮುಂಡರಗಿ ತಾಲೂಕಿನ ಮುರುಡಿ ತಾಂಡದ ರಮೇಶ ಬೂದಿಹಾಳ ಅವರು ಏಷಿಯನ್ ಸರ್ಫಿಂಗ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದು ಜಿಲ್ಲೆಯ ಕೀರ್ತಿಗೆ ಮತ್ತೊಂದು ರತ್ನವನ್ನು ಜೋಡಿಸಿದ್ದಾರೆ.
ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ರೋಹನ್ ಜಗದೀಶ್ ಅವರು, “ಗದಗ ಜಿಲ್ಲೆಯಲ್ಲಿ ತಯಾರಾಗುವ ಉತ್ಪನ್ನಗಳನ್ನು ನಾವು ಖರೀದಿಸಿ, ಉಪಯೋಗಿಸಿದಾಗ ಮಾತ್ರ ಸ್ಥಳೀಯ ವ್ಯಾಪಾರಸ್ಥರಿಗೆ ಗೌರವ ಸಿಗುತ್ತದೆ. ಗದಗದ ಆರ್ಥಿಕತೆ ಬೆಳೆಸಲು ನಮ್ಮೆಲ್ಲರ ಸಹಕಾರ ಅಗತ್ಯ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗದಗ ಮೂಲದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗೂ ಉದ್ಘಾಟನೆ ನೀಡಲಾಯಿತು.
28 ವರ್ಷಗಳ ಸ್ಮರಣೀಯ ಪಯಣವನ್ನು ಪೂರೈಸಿ, 29ನೇ ವಸಂತಕ್ಕೆ ಕಾಲಿಟ್ಟಿರುವ ಗದಗ ಜಿಲ್ಲೆ, ತನ್ನ ಭವ್ಯ ಇತಿಹಾಸ, ಸಾಂಸ್ಕೃತಿಕ ವೈಭವ, ಸಂಗೀತ-ಸಾಹಿತ್ಯದ ಕೊಡುಗೆ ಹಾಗೂ ಕ್ರೀಡಾ ಸಾಧನೆಗಳಿಂದ ಕರ್ನಾಟಕ ನಾಡಿನ ಕೀರ್ತಿಗೆ ಬಣ್ಣ ತುಂಬುತ್ತಿದೆ. ಇಂತಹ ಜಿಲ್ಲೆಯ ಜನರಾಗಿ ನಾವು ಹೆಮ್ಮೆ ಪಡಬೇಕಾದ ಕ್ಷಣ ಇದು.