ಗದಗ: ಕೇಂದ್ರ ಗೃಹ ಸಚಿವ ಅಮಿತ್ ಷಾ ಡಾ.ಅಂಬೇಡ್ಕರ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆ ಇಂದು ವಿವಿಧ ಸಂಘಟನೆಗಳು ಗದಗ-ಬೆಟಗೇರಿ ಬಂದ್ ಗೆ ಕರೆ ನೀಡಿವೆ.
ಆದರೆ ಇಂದು ಬೆಳಿಗ್ಗೆ 10 ಗಂಟೆವರೆಗೂ ಶಾಲೆಗೆ ರಜೆ ನೀಡದ ಶಿಕ್ಷಣ ಇಲಾಖೆ ಪ್ರತಿಭಟನೆ ಬಿಸಿ ಹೆಚ್ಚಾದ ಬಳಿಕ ಎಚ್ಚೆತ್ತು ರಜೆ ನೀಡಿದೆ. ಡಿಡಿಪಿಓ ಆರ್.ಎಸ್. ಬುರುಡಿ ಗದಗ-ಬೆಟಗೇರಿ ಅವಳಿ ನಗರದ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಶಿಸಿದ್ದು, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ರಜೆ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ಎಚ್ಚೆತ್ತ ಅಧಿಕಾರಿವರ್ಗ!
ಪ್ರತಿಭಟನೆ ವೆಳೆಯೇ ವಿದ್ಯಾರ್ಥಿಗಳನ್ನ ಕರೆದುಕೊಂಡು ಹೊರಟಿದ್ದ ಬೈಕ್ ಗೆ ಸ್ಕೂಲ್ ವ್ಯಾನ್ ಡಿಕ್ಕಿಯಾಗಿ ವಿದ್ಯಾರ್ಥಿನಿಗೆ ಸಣ್ಣ ಪುಟ್ಟ ಗಾಯಗಳಾಗಿರೋ ಘಟನೆ ನಗರದ ಮುಳಗುಂದ ನಾಕಾ ಸರ್ಕಲ್ ನಲ್ಲಿ ನಡೆದಿದೆ. ಪ್ರತಿಭಟನೆ ಹಿನ್ನೆಲೆ ಸರ್ಕಲ್ ನ ಕಿರಿದಾದ ರಸ್ತೆಯಲ್ಲಿ ವಾಹನಗಳು ಹೊರಟಿದ್ದವು. ಬೈಕ್, ಸ್ಕೂಲ್ ವ್ಯಾನ್ ಮುಖಾ ಮುಖಿಯಾಗಿ ಆಕ್ಸಿಡೆಂಟ್ ಸಂಭವಿಸಿದೆ.
ಬೈಕ್ ಮೇಲಿದ್ದ ವಿದ್ಯಾರ್ಥಿನಿ ಕಾಲಿಗೆ ಪೆಟ್ಟಾಗಿದ್ದು, ಪ್ರತಿಭಟನಾಕಾರರು ವಿದ್ಯಾರ್ಥಿನಿಗೆ ಆರೈಕೆ ಮಾಡಿದ್ದಾರೆ. ಶಾಲೆಗೆ ರಜೆ ನೀಡದೆ ಇರೋ ಜಿಲ್ಲಾಡಳಿತವೇ ಈ ಅಪಘಾತಕ್ಕೆ ಕಾರಣ ಅಂತಾ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕಲಬುರಗಿ ಮಾದರಿಯಲ್ಲಿ ಸ್ಕೂಲ್ ಗೆ ರಜೆ ನೀಡಬೇಕಿತ್ತು. ರಜೆ ನೀಡದ ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ವಿರುದ್ಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಆನಂತರ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಮ್ಮ ಹಂತದಲ್ಲಿ ನಗರದ ಶಾಲೆಗಳಿಗೆ ರಜೆ ಘೋಶಿಸಿದ್ದಾರೆ.