ಗದಗ ಜಿಲ್ಲೆಯು ಇತ್ತೀಚೆಗೆ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದ ಲಕ್ಕುಂಡಿ ನಿಧಿ ಪತ್ತೆ ಪ್ರಕರಣದ ಬಳಿಕ, ಇದೀಗ ಮತ್ತೊಂದು ಅಚ್ಚರಿಯ ಮತ್ತು ಚಕಿತಕಾರಿ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ.
🖋ವರದಿ: ಮಹಲಿಂಗೇಶ ಹಿರೇಮಠ.ಗದಗ
ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಕೇಳಿಬರುತ್ತಿರುವ ನಿಗೂಢ ಗೆಜ್ಜೆ ಶಬ್ದ ಗ್ರಾಮಸ್ಥರ ನಿದ್ದೆಗೆಡಿಸಿದ್ದು, ಇಡೀ ಗ್ರಾಮದಲ್ಲಿ ಆತಂಕ ಮತ್ತು ಕುತೂಹಲ ಮೂಡಿಸಿದೆ.ಗ್ರಾಮದಲ್ಲಿ ರಾತ್ರಿ ಸಮಯ ಆರಂಭವಾದಂತೆಲ್ಲಾ ಅಸ್ಪಷ್ಟವಾದ ಗೆಜ್ಜೆಯ ಶಬ್ದ ಕೇಳಿಬರುತ್ತಿದ್ದು, ಈ ಶಬ್ದವು ಗ್ರಾಮದ ಜನರನ್ನು ಭಯಭೀತಗೊಳಿಸುತ್ತಿದೆ.
ವಿಶೇಷವಾಗಿ ದೇವಿಯ ಮೂರ್ತಿ ಇಡಲಾಗಿರುವ ಸ್ಥಳದ ಸುತ್ತಮುತ್ತಲೇ ಈ ಶಬ್ದ ಹೆಚ್ಚು ಕೇಳಿಸುತ್ತಿರುವುದರಿಂದ, ಗ್ರಾಮಸ್ಥರಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಕೆಲ ದಿನಗಳ ಹಿಂದೆ ಕೊರ್ಲಹಳ್ಳಿ ಗ್ರಾಮದಲ್ಲಿರುವ ದುರ್ಗಮ್ಮ ದೇವಿಯ ಮೂರ್ತಿ ಭಗ್ನಗೊಂಡ ಘಟನೆ ನಡೆದಿತ್ತು.
ಇದರಿಂದ ನೋವಿಗೊಳಗಾದ ಗ್ರಾಮಸ್ಥರು, ದೇವಿಗೆ ಹೊಸ ಮೂರ್ತಿ ನಿರ್ಮಿಸಿ ಅದನ್ನು ಮಾರ್ಚ್ ತಿಂಗಳಲ್ಲಿ ಅದ್ಧೂರಿಯಾಗಿ ಪ್ರತಿಷ್ಠಾಪಿಸಲು ನಿರ್ಧರಿಸಿದ್ದರು. ಹೊಸ ಮೂರ್ತಿಯನ್ನು ಸಿದ್ಧಪಡಿಸಿ, ತಾತ್ಕಾಲಿಕವಾಗಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಇಡಲಾಗಿದ್ದು, ಮೂರ್ತಿಗೆ ಬಣ್ಣ ಹಚ್ಚುವ ಕೆಲಸ ಮಾತ್ರ ಇನ್ನೂ ಬಾಕಿಯಿದೆ.
ಇಂತಹ ಸಂದರ್ಭದಲ್ಲಿ, ಕಳೆದ ಎರಡು ಮೂರು ದಿನಗಳಿಂದ ಇಡೀ ಗ್ರಾಮವನ್ನೇ ಆವರಿಸುವಂತೆ ರಾತ್ರಿ ವೇಳೆಯಲ್ಲಿ ಕೇಳಿಬರುತ್ತಿರುವ ಗೆಜ್ಜೆ ಶಬ್ದವು ಗ್ರಾಮಸ್ಥರನ್ನು ಅಚ್ಚರಿಗೊಳಿಸಿದೆ. ಕೆಲವರು ಇದು ದೈವದ ಗೆಜ್ಜೆ ಶಬ್ದವಾಗಿರಬಹುದು ಎಂದು ನಂಬುತ್ತಿದ್ದರೆ, ಇನ್ನೂ ಕೆಲವರು ಇದನ್ನು ಅಸಾಮಾನ್ಯ ಅಥವಾ ನಿಗೂಢ ಘಟನೆಯೆಂದು ಪರಿಗಣಿಸುತ್ತಿದ್ದಾರೆ.
ಗೆಜ್ಜೆ ಶಬ್ದದಿಂದಾಗಿ ಅನೇಕ ಗ್ರಾಮಸ್ಥರು ರಾತ್ರಿ ನಿದ್ರೆ ಮಾಡಲಾಗದೆ, ಭಯಭೀತ ಸ್ಥಿತಿಯಲ್ಲಿ ದಿನ ಕಳೆಯುವಂತಾಗಿದೆ. “ರಾತ್ರಿ ಕತ್ತಲಾಗುತ್ತಿದ್ದಂತೆ ಶಬ್ದ ಶುರುವಾಗುತ್ತದೆ. ಇಡೀ ಗ್ರಾಮದಲ್ಲಿ ಅದು ಪ್ರತಿಧ್ವನಿಸುತ್ತಿದೆ” ಎಂದು ಕೆಲ ಗ್ರಾಮಸ್ಥರು ಹೇಳುತ್ತಿದ್ದಾರೆ.
ಈ ಘಟನೆ ಕಾಕತಾಳೀಯವೇ, ಅಥವಾ ದೈವದ ಲೀಲೆಯೇ ಎಂಬ ಪ್ರಶ್ನೆ ಇದೀಗ ಕೊರ್ಲಹಳ್ಳಿ ಗ್ರಾಮದಲ್ಲಿ ಚರ್ಚೆಯ ವಿಷಯವಾಗಿದೆ. ಮತ್ತೊಂದೆಡೆ, ಇದು ಮೂಢನಂಬಿಕೆಯೋ ಅಥವಾ ಸಹಜ ಕಾರಣಗಳಿಂದ ಉಂಟಾಗುವ ಶಬ್ದವೋ ಎಂಬ ಕುರಿತು ಸ್ಪಷ್ಟತೆ ಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.
ಒಟ್ಟಿನಲ್ಲಿ, ಲಕ್ಕುಂಡಿ ನಿಧಿ ಪ್ರಕರಣದ ಬಳಿಕ ಗದಗ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ನಿಗೂಢ ಬೆಳವಣಿಗೆ ಇದೀಗ ಜನಮನ ಸೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇದರ ಹಿಂದೆ ಇರುವ ನಿಜವಾದ ಕಾರಣ ಏನು ಎಂಬುದರ ಬಗ್ಗೆ ಎಲ್ಲರ ದೃಷ್ಟಿ ನೆಟ್ಟಿದೆ.
