ಗದಗ:ಯುವತಿಯೋರ್ವಳಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಯುವಕನಿಗೆ ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ಥಳಿಸಿ ಗೂಸಾ ನೀಡಿರುವ ಘಟನೆ ಇಂದು ಬೆಳಿಗ್ಗೆ ಗದಗ ನಗರದಲ್ಲಿ ನಡೆದಿದೆ. ನಗರದ ಮುಳಗುಂದ ನಾಕಾ ಬಳಿ ಈ ಘಟನೆ ನಡೆದಿದ್ದು, ಬೆಟಗೇರಿ ಮೂಲದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂಬ ಆರೋಪದ ಮೇಲೆ ಹರ್ತಿ ಗ್ರಾಮದ ನವೀನ್ ಎಂಬ ಯುವಕನಿಗೆ ಯುವತಿ ಹಾಗೂ ಆಕೆಯ ಸಹೋದರರು ನಡು ರಸ್ತೆಯಲ್ಲೇ ಥಳಿಸಿದ್ದಾರೆ.
🖊ವರದಿ: ಮಹಲಿಂಗೇಶ ಹಿರೇಮಠ.ಗದಗ
ಆರೋಪಿತ ಯುವಕ ಬ್ಯಾಟರಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದನೆಂದು ತಿಳಿದುಬಂದಿದ್ದು, ಅಂಗಡಿಯೊಳಗಿದ್ದ ಯುವಕನನ್ನು ಹೊರಗೆಳೆದು ಸರ್ಕಲ್ ಗೆ ಕರೆತಂದು ಮನಬಂದಂತೆ ಗೂಸಾ ನೀಡಲಾಗಿದೆ.
ಯುವತಿ ಯುವಕನಿಗೆ ಚಪ್ಪಲಿಯಿಂದ ಹೊಡೆದಿದ್ದು, ಆಕೆಯ ಸಹೋದರರು ಯುವಕನನ್ನು ಅಟ್ಟಾಡಿಸಿಕೊಂಡು ಥಳಿಸಿರುವ ದೃಶ್ಯಗಳು ಸ್ಥಳಿಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಅಲ್ಲದೇ ಇದೇ ವೇಳೆ ಸ್ಥಳದಲ್ಲಿ ಸೇರಿದ್ದ ಅನೇಕ ಸಾರ್ವಜನಿಕರೂ ಸಹ ಯುವಕನ ಮೇಲೆ ಕೋಪ ವ್ಯಕ್ತಪಡಿಸಿ ಧರ್ಮದೇಟು ನೀಡಿದ್ದಾರೆ ಎನ್ನಲಾಗಿದೆ. ಘಟನೆಯ ಮಾಹಿತಿ ಪಡೆದ ಟ್ರಾಫಿಕ್ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದರೂ, ಪೊಲೀಸರ ಸಮ್ಮುಖದಲ್ಲಿಯೇ ಯುವತಿ ಹಾಗೂ ಆಕೆಯ ಸಹೋದರರು ಯುವಕನಿಗೆ ಮತ್ತೊಮ್ಮೆ ಗೂಸಾ ನೀಡಿದ್ದಾರೆ ಎಂಬ ಮಾಹಿತಿ ಕೇಳಿಬಂದಿವೆ.
ನಂತರ ಯುವತಿ ಮತ್ತು ಆಕೆಯ ಸಹೋದರರು ಆರೋಪಿತ ಯುವಕನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಘಟನೆ ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಆರೋಪಿತ ಯುವಕನನ್ನ ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಜೊತೆಗೆ ಸಾರ್ವಜನಿಕವಾಗಿ ನಡೆದ ಹಲ್ಲೆ ಪ್ರಕರಣವು ನಗರದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಕಾನೂನು ಕೈಗೆತ್ತಿಕೊಳ್ಳುವಂತಹ ಘಟನೆಗಳ ಕುರಿತು ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
