ನರಗುಂದ: ನಿನ್ನೆ ಮಧ್ಯಾಹ್ನವಷ್ಟೇ ನರಗುಂದ ಪಟ್ಟಣದಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನ ನರಗುಂದ ಪೊಲೀಸರು 18 ಗಂಟೆಯಲ್ಲೇ ಪ್ರಕರಣ ಭೇದಿಸುವ ಮೂಲಕ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಬಸವರಾಜ್ ಮಮ್ಮಟಗೇರಿ (21) ಅನ್ನೋ ಯುವಕ ಪಟ್ಟಣದ ತಾಜ್ ಹೋಟೆಲ್ ನಲ್ಲಿ ಬಿರಿಯಾನಿ ತಿನ್ನುವಾಗ,ಆರೋಪಿಗಳು ಬಸವರಾಜ್ ನ ಕಣ್ಣಿಗೆ ಖಾರದ ಪುಡಿ ಎರಚಿ
ಮಾರಾಕಾಸ್ತ್ರದಿಂದ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ,160/2025 ರ ಅಡಿ ಪ್ರಕರಣ ದಾಖಲಾಗಿತ್ತು.
ಈ ಹಿನ್ನೆಲೆ ಆರೋಪಿಗಳಾದ ಮಾಂತೇಶ್ ರಂಗಣ್ಣವರ, ರಾಚನಗೌಡ ಅಲಿಯಾಸ್ ಆನಂದ್ ಅಯ್ಯನಗೌಡರ, ಹಾಗೂ ಚಂದ್ರಶೇಖರ ಹಾರೂಗೇರಿ ಎಂಬುವರನ್ನ ಗುರುತಿಸಿದ ಪೊಲೀಸರು ಮೂರು ಜನರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಕೊಲೆಗೆ ಕಾರಣ, ಇತ್ತೀಚೆಗೆ ನರಗುಂದದಲ್ಲಿ ನಡೆದ ಜಾತ್ರೆಯಲ್ಲಿ, ಕೊಲೆಯಾದ ಬಸವರಾಜ್ ಸಹೋದರನ ಜೊತೆಗೆ, ಆರೋಪಿಗಳು ಕಿರಿಕ್ ಮಾಡಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಬಸವರಾಜ್ ಕೊಲೆ ಆರೋಪಿಗಳಿಗೆ ಧಮ್ಕಿ ಹಾಕಿದ್ದನು. ಇದರಿಂದ ರೊಚ್ಚಿಗೆದ್ದ ಈ ಮೂವರು ಆರೋಪಿಗಳು ಸೇರಿ, ಬಸವರಾಜ್ ನನ್ನ ಕೊಲೆ ಮಾಡಿರಬಹುದು ಎಂದು ತಿಳಿದು ಬಂದಿದ್ದು, ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಇನ್ನು ಘಟನೆ ನಡೆದ ತಕ್ಷಣ ಆಗಂತುಕರ ಬೆನ್ನು ಹತ್ತಿದ ಖಾಕಿ, 18 ಗಂಟೆಯಲ್ಲಿ ಕೊಲೆ ಪ್ರಕರಣವನ್ನು ಭೇದಿಸಿ, ಕೊಲೆ ಮಾಡಿದ್ದ ಮೂರೂ ಜನ ಆರೋಪಿಗಳನ್ನ ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.