Home » News » 03 ಎಕರೆಯಿಂದ 31 ಎಕರೆತನಕ..!ಬೆಂಗಳೂರಿನ ಉದ್ಯೋಗದ ಆಸೆ ತೊರೆದು ತವರಿನ‌ ಮಣ್ಣಿನಲ್ಲೇ ಚಿನ್ನ ಬೆಳೆದ ಗರುಡಪ್ಪ ಜಂತ್ಲಿ: ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆ.!ಧಾರವಾಡದ ಕೃಷಿಮೇಳದಲ್ಲಿ ಗದಗ ಜಿಲ್ಲೆಯ ರೈತನಿಗೆ ಮುಖ್ಯಮಂತ್ರಿಗಳಿಂದ ಗೌರವ..

03 ಎಕರೆಯಿಂದ 31 ಎಕರೆತನಕ..!ಬೆಂಗಳೂರಿನ ಉದ್ಯೋಗದ ಆಸೆ ತೊರೆದು ತವರಿನ‌ ಮಣ್ಣಿನಲ್ಲೇ ಚಿನ್ನ ಬೆಳೆದ ಗರುಡಪ್ಪ ಜಂತ್ಲಿ: ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆ.!ಧಾರವಾಡದ ಕೃಷಿಮೇಳದಲ್ಲಿ ಗದಗ ಜಿಲ್ಲೆಯ ರೈತನಿಗೆ ಮುಖ್ಯಮಂತ್ರಿಗಳಿಂದ ಗೌರವ..

by CityXPress
0 comments

ಗದಗ, ಮುಂಡರಗಿ ತಾಲೂಕು:
ಗದಗ ಜಿಲ್ಲೆ, ಮುಂಡರಗಿ ತಾಲೂಕಿನ ಹೆಸರೂರ ಗ್ರಾಮದ ಪರಿಶ್ರಮಿ ರೈತ ಗರುಡಪ್ಪ ಜಂತ್ಲಿ ಅವರು ಈ ವರ್ಷದ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆಯಲಿರುವ ಅದ್ಧೂರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಗೌರವ ಸಲ್ಲಿಸಲಾಗುವುದು.

ಹೆಸರೂರು ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಗರುಡಪ್ಪ ಜಂತ್ಲಿಯವರ ಜೀವನ ಕಥೆ ಸತ್ಯಸಂಗ್ರಾಮದಂತಿದೆ. ತಂದೆ ಯಂಕಪ್ಪ ಜಂತ್ಲಿ ಹಾಗೂ ತಾಯಿ ಲಕ್ಷ್ಮವ್ವ ಜಂತ್ಲಿ ಅವರಿಗೆ ಸ್ವಂತ ಜಮೀನು ಕೇವಲ ಮೂರು ಎಕರೆ ಮಾತ್ರ ಇದ್ದ ಕಾರಣ ಕುಟುಂಬ ನಿರ್ವಹಣೆ ಬಹಳ ಕಷ್ಟಕರವಾಗಿತ್ತು. ಪೋಷಕರು ಬೇವಿನ ಬೀಜಗಳನ್ನು ಸಂಗ್ರಹಿಸಿ ಊರು ಊರು ಅಲೆದು ಮಾರಾಟ ಮಾಡಿ ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸುತ್ತಿದ್ದರು. ಗರುಡಪ್ಪ ಜಂತ್ಲಿಯವರು ಬಾಲ್ಯದಿಂದಲೇ ಹಾಸ್ಟೆಲಿನಲ್ಲಿ ವಾಸಿಸಿ ವಿದ್ಯಾಭ್ಯಾಸ ಮಾಡಿಕೊಂಡು ಐಟಿಐ ಪದವಿ ಪಡೆದಿದ್ದರು.

ಐಟಿಐ ಬಳಿಕ ಉದ್ಯೋಗಕ್ಕಾಗಿ ಬೆಂಗಳೂರಿನಲ್ಲಿ ಅಪ್ರೆಂಟೀಸ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರೂ, ಅಲ್ಲಿ ಹೋಗಲು ತಾಯಿಯವರಿಂದ 2000 ರೂಪಾಯಿ ಬೇಕೆಂದು ಕೇಳಿದಾಗ, “ಲಾವಣಿ ಹಾಕುವುದು ಬೇಡ, ಭೂಮಿತಾಯಿಯ ನಂಬಿ ಹೊಲದಲ್ಲಿ ದುಡಿ” ಎಂದು ಕಣ್ಣೀರಿನಿಂದ ಮನವಿ ಮಾಡಿದ ತಾಯಿಯ ಮಾತಿಗೆ ತಲೆಬಾಗಿದ ಗರುಡಪ್ಪ ಜಂತ್ಲಿಯವರು ನಗರ ಉದ್ಯೋಗದ ಕನಸು ತೊರೆದು ಗ್ರಾಮದಲ್ಲೇ ಕೃಷಿ ಉದ್ಯಮಕ್ಕೆ ತೊಡಗಿದರು. ಕೇವಲ ಮೂರು ಎಕರೆ ಜಮೀನಿನಿಂದ ಆರಂಭವಾದ ಕೃಷಿಯ ಪಯಣ ಇಂದು 31 ಎಕರೆ ಹಸಿರು ಹೊಲಗಳ ಸಾಧನೆಗೆ ತಲುಪಿರುವುದು ಪ್ರೇರಣಾದಾಯಕವಾಗಿದೆ.

ರೇಷ್ಮೆ ಇಲಾಖೆಯ ಸಹಯೋಗದೊಂದಿಗೆ ಪ್ರಾರಂಭಿಸಿದ ರೇಷ್ಮೆ ಬೆಳೆಯೊಂದಿಗೆ ಕೃಷಿಯಲ್ಲಿ ಹೊಸ ಮಾರ್ಗಗಳನ್ನು ಅನುಸರಿಸಿ ಯಶಸ್ಸಿನ ಮೆಟ್ಟಿಲು ಏರಿದರು. ಅತಿ ಬಡತನದ ಪರಿಸ್ಥಿತಿಯಲ್ಲಿದ್ದಾಗಲೂ ತಮ್ಮ ಸಹೋದರ ದೇವಪ್ಪ ಜಂತ್ಲಿಯವರೊಂದಿಗೆ ಹಗಲು-ರಾತ್ರಿ ಎನ್ನದೆ ಹೊಲದಲ್ಲಿ ದುಡಿಯುತ್ತಾ ಕೃಷಿ ವಿಸ್ತರಣೆ ನಡೆಸಿದರು.

banner

ಇಂದು ಅವರ ಹೊಲಗಳಲ್ಲಿ 13 ಎಕರೆ ಗೋವಿನ ಜೋಳ, 8 ಎಕರೆ ದ್ರಾಕ್ಷಿ, 8 ಎಕರೆ ಬಾಳೆ ಹಾಗೂ 2 ಎಕರೆ ಅಡಕೆ ಬೆಳೆಗಳು ಬೆಳೆಯುತ್ತಿದ್ದು, ಸಾವಯವ ವಿಧಾನದಲ್ಲಿ ಎತ್ತು-ಆಕಳಗಳನ್ನು ಬಳಸಿಕೊಂಡು ಶ್ರೇಷ್ಠ ಕೃಷಿ ಮಾಡುತ್ತಿದ್ದಾರೆ. ತಂತ್ರಜ್ಞಾನ ಹಾಗೂ ಪರಿಶ್ರಮವನ್ನು ಸಮನ್ವಯಗೊಳಿಸಿರುವ ಇವರ ಕೃಷಿ ಮಾದರಿಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.

“ರೈತರಿಗೆ ಕನ್ಯೆ ಕೊಡಬೇಡಿ” ಎಂಬ ಮಾತನ್ನು ಕೆಲವರು ನಂಬುತ್ತಿದ್ದರೂ, ಗರುಡಪ್ಪ ಜಂತ್ಲಿ ಅವರ ಜೀವನ ಸಾಧನೆಯನ್ನು ಕಂಡವರು ರೈತರ ಜೀವನವೇ ಸುವರ್ಣಮಯ ಎಂಬ ನಂಬಿಕೆಗೆ ಬರುವರು. ಮಣ್ಣಿನಲ್ಲಿ ಚಿನ್ನ ಬೆಳೆದಂತೆ ಅವರು ಸಾಧಿಸಿರುವುದು ಗ್ರಾಮೀಣ ಯುವಕರಿಗೆ ಸ್ಪೂರ್ತಿದಾಯಕವಾಗಿದೆ.

ಇದೇ ಕೃಷಿ ಉದ್ಯೋಗದಿಂದಲೇ ತಮ್ಮ ಮಕ್ಕಳನ್ನು ಬಿಎಂಎಸ್ ಪದವಿ ಹಾಗೂ ಇಂಜಿನಿಯರಿಂಗ್ ಶಿಕ್ಷಣ ಪಡೆಯುವಂತೆ ಮಾಡಿದ್ದಾರೆ. “ಕೃಷಿಯಲ್ಲೇ ಖುಷಿಯಿದೆ” ಎಂಬ ಸಂದೇಶವನ್ನು ತಮ್ಮ ಬದುಕಿನಿಂದಲೇ ತೋರಿಸಿದ ಗರುಡಪ್ಪ ಜಂತ್ಲಿ ಅವರು ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾಗಿರುವುದು ಗದಗ ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb