ನರೇಗಲ್ಲ: ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ಕೆಸಿಸಿ ಬ್ಯಾಂಕ್ ಶಾಖೆಯಲ್ಲಿ ಕೆಸಿಸಿ ಬ್ಯಾಂಕಿನ ಸಂಸ್ಥಾಪನಾ ದಿನವನ್ನು ಬುಧವಾರ ಆಚರಿಸಲಾಯಿತು.ಈ ವೇಳೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಶಿಧರ ಸಂಕನಗೌಡ್ರ ಮಾತನಾಡಿ, ಈ ಭಾಗದ ರೈತರಿಗೆ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಶಾಂತವೀರಪ್ಪ ಮೆಣಸಿನಕಾಯಿ ಮತ್ತು ಅರಟಾಳ ರುದ್ರಗೌಡರು ಸಹಕಾರ ತತ್ವದಡಿ ಕೆಸಿಸಿ ಬ್ಯಾಂಕ್ ಸ್ಥಾಪಿಸಿದರು.
30 ಸಾವಿರ ರೂ. ಬಂಡವಾಳದೊಂದಿಗೆ ಆರಂಭವಾದ ಬ್ಯಾಂಕ್, ಇಂದು ನೂರಾರು ಕೋಟಿ ರೂ.ಗಳ ವಹಿವಾಟು ನಡೆಸುತ್ತಿದೆ. ರೈತರಿಗೆ ಕೃಷಿ ಸಾಲ, ಕೃಷಿಯೇತರ, ವೇತನ ಆಧಾರಿತ ಸಾಲಗಳು, ಸ್ವಯಂ ಉದ್ಯೋಗಿಗಳಿಗೆ ಆರ್ಥಿಕ ನೆರವು ನೀಡುತ್ತಿದೆ. ಜತೆಗೆ ಸ್ವ ಸಹಾಯ ಸಂಘಗಳಿಗೆ ಹಣಕಾಸು ಸೌಲಭ್ಯ ನೀಡುವ ಮೂಲಕ ಎಲ್ಲ ವರ್ಗಗಳ ಕಲ್ಯಾಣಕ್ಕೆ ಶ್ರಮಿಸುತ್ತಿದೆ. ಠೇವಣಿ ಸಂಗ್ರಹ ಮತ್ತು ಸಾಲ ವಸೂಲಾತಿಯಲ್ಲಿ ನಿರೀಕ್ಷೆ ಮೀರಿ ಪ್ರಗತಿ ಸಾಧಿಸಲಾಗಿದೆ. ನಿರಂತರ ಲಾಭ ಗಳಿಸುವ ಮೂಲಕ ಆರ್ಥಿಕವಾಗಿ ಸದೃಢತೆ ಹೊಂದಲಾಗಿದೆ ಎಂದರು.
ಬ್ಯಾಂಕಿನ ಸಂಸ್ಥಾಪಕರಾದ ರಾವಬಹದ್ದೂರ ಶಾಂತವೀರಪ್ಪ ಮೆಣಸಿನಕಾಯಿ ಹಾಗೂ ರಾವಬಹದ್ದೂರ ಅರಟಾಳ ರುದ್ರಗೌಡರ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು. ಇದೆ ಸಂದರ್ಭದಲ್ಲಿ ಇಬ್ಬರು ರೈತರಿಗೆ ಕೃಷಿ ಯಂತ್ರ ಸಾಲದಡಿ ಟ್ರ್ಯಾಕ್ಟರ್ ವಿತರಣೆ ಜರುಗಿತು.ಎಪಿಎಂಸಿ ಮಾಜಿ ಉಪಾಧ್ಯಕ್ಷ ಬಾಳಪ್ಪ ಸೋಮಗೊಂಡ, ನಿಂಗಪ್ಪ ಕಣವಿ, ಬಿ.ಬಿ. ಬಿಷ್ಟನಗೌಡ್ರ, ಕೆ.ಎಚ್. ಕಿರಟಗೇರಿ, ಎ.ಬಿ. ನಾಯಕ, ಎಂ.ಪಿ. ಮೂಲಿಮನಿ, ಕರಿಯಪ್ಪ ಛಲವಾದಿ, ಕೆ.ಎಲ್. ಪಾಟೀಲ, ಸೇರಿದಂತೆ ಇತರರಿದ್ದರು.