ಗದಗ: ಗದಗ ಜಿಲ್ಲೆಯ ಮಾಗಡಿ ಕೆರೆ ವಿದೇಶಿ ಪಕ್ಷಿಗಳಿಗೆ ಹೆಸರುವಾಸಿಯಾದ ತಾಣ. ಪ್ರತಿ ವರ್ಷ ಇಲ್ಲಿಗೆ ತಮ್ಮ ಸಂತಾನೋತ್ಪತ್ತಿಗಾಗಿ ದೇಶ ವಿದೇಶಗಳಿಂದ ಅಪರೂಪದ ಅತಿಥಿಗಳಾಗಿ ನಾನಾ ರೀತಿಯ ಲಕ್ಷಾಂತರ ವಿದೇಶೀ ಪಕ್ಷಿಗಳು ಈ ಮಾಗಡಿ ಕೆರೆಗೆ ಆಗಮಿಸುತ್ತವೆ.ಇದರಿಂದ ವಿದೇಶಿ ಪಕ್ಷಿಗಳನ್ನ ಕಣ್ತುಂಬಿಕೊಳ್ಳೋಕೆ ಪಕ್ಷಿಪ್ರೀಯರು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಮಾಗಡಿ ಕೆರೆಯಲ್ಲಿನ ಪಕ್ಷಿಗಳ ವಿಹಂಗಮ ನೋಟವನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ.
ಆದರೆ ಈ ವಿದೇಶಿ ಹಕ್ಕಿಗಳಿಗೆ ಸ್ವದೇಶಿ ರಕ್ಷಣೆಯೇ ಇಲ್ಲದಂತಾಗಿದೆ. ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆ ಸಂರಕ್ಷಣಾ ಮೀಸಲು ಕೆರೆಯಾಗಿದ್ದು, ಸುಮಾರು 50 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದೆ. ಸರಿಸುಮಾರು 166 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿಗೆ ಈ ಮಾಗಡಿ ಕೆರೆ ವಿಶ್ರಾಂತ ತಾಣವಾಗಿದ್ದು, ಚಳಿಗಾಲದಲ್ಲಿ ಇಲ್ಲಿಗೆ ಸುಮಾರು 8 ಸಾವಿರಕ್ಕೂ ಹೆಚ್ಚು ವಿದೇಶಿ ಪಕ್ಷಿಗಳು ಬರುತ್ತವೆ ಎಂದು ಅಂದಾಜಿಸಲಾಗಿದೆ.
ಈಗಾಗಲೇ ರಾಜ್ಯ ಸರ್ಕಾರ ಇದನ್ನು ಸಂರಕ್ಷಿತ ಮೀಸಲು ಪ್ರದೇಶ ಹಾಗೂ ಸಂರಕ್ಷಿತ ವಲಸೆ ಪಕ್ಷಿಗಳ ಧಾಮವೆಂದು ಸಹ ಘೋಷಣೆ ಮಾಡಿದೆ.
ಇಷ್ಟೆಲ್ಲಾ ಆದರೂ ಕೂಡ ಈ ಕೆರೆಯ ಸಂರಕ್ಷಣೆ ಹಾಗೂ ಈ ಕೆರೆಗೆ ವಲಸೆ ಬರುವ ವಿದೇಶಿ ಬಾನಾಡಿಗಳಿಗೆ ಸುರಕ್ಷತೆ ಇಲ್ಲವಾ? ಅನ್ನೋ ಪ್ರಶ್ನೆ ಕಾಡತೊಡಗಿದೆ. ಹೌದು, ಕೆರೆಗೆ ಬಂದ ವಿದೇಶಿ ಹಕ್ಕಿಗಳನ್ನು ಬಿಡಾಡಿ ನಾಯಿಗಳು ಬೇಟೆಯಾಡುತ್ತಿವೆ. ಹೀಗೆ ಬೇಟೆಯಾಡಿ ವಿದೇಶಿ ಹಕ್ಕಿಯನ್ನ ತಿನ್ನುತ್ತಿರುವ ದೃಶ್ಯವನ್ನ, ಸ್ಥಳಿಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರತಿಯಾಗಿ ಪಕ್ಷಿ ಪ್ರೀಯರು ಕೂಡ ಇಲ್ಲಿನ ಅವ್ಯವಸ್ಥೆ ಬಗ್ಗೆ ಸಾಕಷ್ಟು ವಿರೋಧ ಕೂಡ ವ್ಯಕ್ತಪಡಿಸಿದ್ದಾರೆ
ಸುಮಾರು 16 ಕ್ಕಿಂತ ಹೆಚ್ಚಿನ ಜಾತಿಯ ಪಕ್ಷಿಗಳು ಇಲ್ಲಿಗೆ ಆಗಮಿಸಿದ್ದು, ಬಾರ ಹೆಡೆಡ್ ಗೂಸ್, ಬ್ರಾಹ್ಮಿಣಿ ಡಕ್ ಜಾತಿಯ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿವೆ. ಪ್ರತಿ ವರ್ಷ ಜಮ್ಮು ಕಾಶ್ಮೀರದ ಲಡಾಕ, ಲೇಹ್, ವಿದೇಶಗಳಾದ ಮಲೇಷಿಯಾ, ರಶಿಯಾ, ಆಸ್ಟ್ರೇಲಿಯಾ, ಟಿಬೇಟ್, ಸೈಬಿರಿಯಾಗಳಿಂದಾ ಈ ಪಕ್ಷಿಗಳು ವಲಸೆ ಬರುತ್ತವೆ. ಲಡಾಕ, ಲೇಹ್, ಟಿಬೇಟ್‌ಗಳಲ್ಲಿ ವಿಪರೀತ ಚಳಿಗಾಲ ಹಿನ್ನೆಲೆ, ನವೆಂಬರ್ ತಿಂಗಳಿಂದ ಮಾರ್ಚವರೆಗೆ ಅಲ್ಲಿನ ಸರೋವರಗಳು ಹೆಪ್ಪುಗಟ್ಟುತ್ತವೆ.
ಅವುಗಳ ವಾಸಕ್ಕೆ ಹವಾಮಾನ ಸರಿ ಹೊಂದದೇ ಇರುವುದರಿಂದ ಫೆಬ್ರುವರಿ ತಿಂಗಳದವರೆಗೂ ಈ ಮಾಗಡಿ ಕೆರೆಗೆ ಬಂದು ನೆಲೆಸುತ್ತವೆ.ಆದರೆ ಇಲ್ಲಿಯೂ ಸಹ ಪಕ್ಷಿಗಳಿಗೆ ಸುರುಕ್ಷತೆ ಇಲ್ಲವಾಯಿತಾ ಅನ್ನೋ ಬೇಸರವನ್ನ ಪಕ್ಷಿಪ್ರೀಯರು ಹೊರಹಾಕುತ್ತಿದ್ದು, ಪಕ್ಷಿಗಳ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮವನ್ನ ಆದಷ್ಟು ಬೇಗ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.