ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಭಾನುವಾರ ಪೊಲೀಸ್ ಅಧಿಕಾರಿಗಳ ಬಂದೂಕುಗಳು ಸದ್ದು ಮಾಡಿವೆ. ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಸಿಸಿಬಿ ಪೊಲೀಸರು ಗುಂಡೇಟಿನ ದಾಳಿ ನಡೆಸಿದ್ದು,ಅಂತರಾಜ್ಯ ದರೋಡೆಕೋರರಿಗೆ ಕಾಲಿಗೆ ಫೈರಿಂಗ್ ಮಾಡುವ ಮೂಲಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಸಿಬಿ ಪೊಲೀಸರು ದಾಳಿ ಮಾಡಿದಾಗ ಮರಳಿ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿ, ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಕೂಡಲೇ ಪ್ರತ್ಯುತ್ತರವಾಗಿ ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ.
ಕುರ್ತಾ ಅಲಿಯಾಸ್ ಭರತ್ ಕುಮಾರ್ ಹಾಗೂ ಫಾರೂಕ್ ಅಲಿಯಾಸ್ ಟೊಮೆಟೊ ಫಾರೂಕ್ ಬಂಧಿತ ಆರೋಪಿಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಂಗಳೂರು ಮೂಲದ ಭರತ್, ಫಾರುಕ್ ಅನ್ನೋ ಆರೋಪಿಗಳು, ಕಾರು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಇವರ ಗ್ಯಾಂಗ್ನಲ್ಲಿ 15 ಜನರಿದ್ದು, ಮಹಾರಾಷ್ಟ್ರದ ಸಾಂಗ್ಲಿ ಮೂಲದ ರಾಹುಲ್ ಸುರ್ವೆ ಅನ್ನೋರು ಕಾರನ್ನ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಹತ್ತಿರ ನವೆಂಬರ್ 8 ರಂದು ಖದೀಮರು ಅಡ್ಡಗಟ್ಟಿ ಬೆದರಿಸಿ ದರೋಡೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
15 ಜನರ ಗ್ಯಾಂಗ್ನಲ್ಲಿ ಇಬ್ಬರನ್ನು ಹುಬ್ಬಳ್ಳಿ ಧಾರವಾಡ ಸಿಸಿಬಿ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದರು.ಭಾನುವಾರ ಸ್ಥಳ ಮಹಜರು ಮಾಡೋ ವೇಳೆ ಖದೀಮರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಆರೋಪಿಗಳ ಕಾಲಿಗೆ ಸಿಸಿಬಿ ಪೊಲೀಸರು ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.