ಮುಂಡರಗಿ: ತೀವ್ರ ಬರದ ಪರಿಸ್ಥಿತಿಯಲ್ಲಿ ತಾವು ಬೆಳೆದ ಬೆಳೆ ನೀರಿಲ್ಲದೆ ರೈತರು ನಾಶವಾಗುವ ಆತಂಕದಲ್ಲಿದ್ದು, ಮುಂಡರಗಿ ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಉಪ ವಿಭಾಗ ಕಚೇರಿಯ ಮುಂದೆ ಗೇಟ್ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು.
ಮುಂಡರಗಿ ವರದಿ: ರಂಗನಾಥ ಕಂದಗಲ್ಲ.
ತಮಗೆ ಜೀವದಂತಿರುವ ನೀರನ್ನು ಕೂಡ ನೀಡದ ರಾಜ್ಯ ಸರ್ಕಾರ ಹಾಗೂ ನೀರಾವರಿ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಅಕ್ರೊಶಗೊಂಡ ರೈತರು, “ಕೆರೆಗೆ ನೀರು ಬಿಡಿ ಅಥವಾ ರೈತರಿಗೆ ವಿಷ ಕೊಡಿ” ಎಂಬ ತೀವ್ರ ಘೋಷಣೆಗಳ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ತಾಮ್ರಗುಂಡಿ ಕೆರೆಗೆ ನೀರು ಅವಶ್ಯಕ ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದು, ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ನೀರು ಹರಿಸಲು ಆಗಬೇಕಾದುದನ್ನು ರೈತರು ಬಲವಾಗಿ ಒತ್ತಾಯಿಸಿದರು. ಈ ಯೋಜನೆಯಡಿ ಸಾವಿರಾರು ರೈತರು ತಮ್ಮ ಭೂಮಿಯನ್ನು ನಿರೀಕ್ಷೆಯೊಂದಿಗೆ ನೀಡಿದ್ದರೂ, ತಮ್ಮ ಜಮೀನುಗಳಿಗೆ ನೀರಿನ ನುಗ್ಗಿಲ್ಲದಿರುವ ಹಿನ್ನಲೆಯಲ್ಲಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು, “ದೇಶ ಜೀವಂತವಾಗಿರುವುದು ರೈತನು ಬೆಳೆಯುವ ಅನ್ನದಿಂದ. ಆದರೆ, ಅನ್ನದಾತನನ್ನೇ ನಿರ್ಲಕ್ಷಿಸುವ ಸ್ಥಿತಿ ಬಂದಿದೆಯೇನೋ ಅನ್ನಿಸುತ್ತದೆ. ಅಧಿಕಾರಿಗಳು ತಮ್ಮ ನಿರ್ಲಕ್ಷ್ಯದ ನೀತಿಯ ತಿದ್ದುಪಡಿ ಮಾಡಬೇಕು” ಎಂದು ಕಿಡಿಕಾರಿದರು.
ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕಾಧ್ಯಕ್ಷರಾದ ಶರಣಪ್ಪ ಕಂಬಳಿ ಅವರು ಕೂಡ ಮಾತನಾಡಿ, “ಮುಂಡರಗಿ ತಾಲೂಕಿನ ಕನಸಿನ ಯೋಜನೆಯಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ಜಲಾವೃತ ಪ್ರದೇಶದ ಕೆರೆಗಳು ಹಾಗೂ ಜಮೀನುಗಳಿಗೆ ನೀರು ಹರಿಯಬೇಕಿತ್ತು. ಆದರೆ ಯೋಜನೆಯ ಅನುಷ್ಠಾನ ವಿಳಂಬ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರಿಗೆ ನೀರಿಲ್ಲದೇ ಬೆಳೆ ಹಾಳಾಗುತ್ತಿದೆ. ರೈತರು ಸಾಲ ಮಾಡಿ ಶ್ರಮಿಸಿದ ಬೆಳೆ ಹಾನಿಯಾದರೆ ಅದರ ಹೊಣೆ ಯಾರು?” ಎಂದು ಪ್ರಶ್ನಿಸಿದರು.
ಇದೆ ವೇಳೆ ಸ್ಥಳಕ್ಕೆ ಆಗಮಿಸಿದ ನೀರಾವರಿ ಉಪ ವಿಭಾಗದ ಅಧಿಕಾರಿ ಬಸವರಾಜ್ ಅಂಬಿಗರ್, “ರೈತರು ಆತಂಕಪಡಬೇಕಾಗಿಲ್ಲ. ಎರಡು ದಿನಗಳೊಳಗೆ ನೀರು ಬಿಡಲಾಗುತ್ತದೆ” ಎಂಬ ಭರವಸೆ ನೀಡಿದರೂ, ರೈತರು “ನೀರು ಹರಿಸಲಿಲ್ಲದಿದ್ದರೆ ಶನಿವಾರದಿಂದ ಇನ್ನು ದೊಡ್ಡ ಮಟ್ಟದ ಹೋರಾಟ ಆರಂಭಿಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಹೀಗೆ ತೀವ್ರ ನಿರಾಶೆಯಲ್ಲಿರುವ ರೈತರು ಈಗ ಅಧಿಕಾರಿಗಳ ಭರವಸೆಯನ್ನು ನಂಬಿಕೊಂಡು ಕಾದು ನೋಡುತ್ತಿದ್ದಾರೆ. ಆದರೆ ನಿರ್ಧಾರ ಕೈಗೊಂಡು ತಕ್ಷಣ ಕ್ರಿಯಾತ್ಮಕ ಕ್ರಮ ಕೈಗೊಳ್ಳದೇ ಹೋದರೆ, ಮುಂಬರುವ ದಿನಗಳಲ್ಲಿ ಈ ಹೋರಾಟ ಇನ್ನೂ ಉಗ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.