ಗದಗ:
ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನಲ್ಲಿ ಅತಿವೃಷ್ಟಿ ಹಾಗೂ ಪ್ರಕೃತಿ ವಿಕೋಪದಿಂದಾಗಿ ತೀವ್ರ ಹಾನಿಗೊಳಗಾದ ಬೆಳೆಗಳಿಗೆ ಸೂಕ್ತ ಪರಿಹಾರ ದೊರಕಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಭರ್ಜರಿ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯಲ್ಲಿ ನೂರಾರು ರೈತರು ಭಾಗವಹಿಸಿ, ಪಟ್ಟಣದ ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಮೆರವಣಿಗೆಯಲ್ಲಿ ಹೊರಟು, ಪಟ್ಟಣದ ವಿವಿಧ ಬೀದಿಗಳಲ್ಲಿ ಘೋಷಣೆ ಕೂಗುತ್ತಾ ಸಾಗಿದರು. ಕೊನೆಗೆ ತಾಲೂಕು ದಂಡಾಧಿಕಾರಿ ಕಚೇರಿ ಎದುರು ಸೇರಿ ಅರಬಾವಿ-ಚಳ್ಳಿಕೆರೆ ರಾಜ್ಯ ಹೆದ್ದಾರಿಯನ್ನು ತಡೆದು ಕುಳಿತುಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವರದಿ: ರಂಗನಾಥ ಕಂದಗಲ್ಲ. ಮುಂಡರಗಿ.
ರೈತರು ಹಾನಿಗೊಳಗಾದ ಎಲ್ಲಾ ಬೆಳೆಗಳಿಗೆ ಪರಿಹಾರ ನೀಡಬೇಕು, ಈಗಾಗಲೇ ಬೆಳೆ ವಿಮೆ ಹಣವನ್ನು ಕಟ್ಟಿದ ರೈತರಿಗೆ ಶೀಘ್ರದಲ್ಲೇ ಪರಿಹಾರವನ್ನು ತಲುಪಿಸಬೇಕು, ಸೂರ್ಯಪಾನ ಮತ್ತು ಗೋವಿನಜೋಳ ಖರೀದಿ ಕೇಂದ್ರವನ್ನು ತಕ್ಷಣ ಆರಂಭಿಸಬೇಕು ಹಾಗೂ ಯೂರಿಯಾ ಗೊಬ್ಬರದ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಗದಗ ಉಪ ಕೃಷಿ ನಿರ್ದೇಶಕಿ ಸ್ಪೂರ್ತಿ ಜಿ.ಹೆಚ್. ಅವರು ರೈತರ ಜೊತೆ ಮಾತುಕತೆ ನಡೆಸಿದರು. ಅವರು ತಾಲ್ಲೂಕಿನಲ್ಲಿ ಹೆಸರುಬೇಳೆ ಬೆಳೆ ಸಂಪೂರ್ಣ ಹಾನಿಗೊಳಗಾಗಿರುವುದನ್ನು ಇಲಾಖೆಯು ಈಗಾಗಲೇ ಪರಿಗಣಿಸಿದೆ ಎಂದು ತಿಳಿಸಿದರು. ಬೆಳೆ ವಿಮೆ ಯೋಜನೆಯಡಿ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿ, ಇನ್ನುಳಿದ ಎಲ್ಲಾ ಬೆಳೆಗಳಿಗೆ ಅತಿವೃಷ್ಟಿ ಪರಿಹಾರ ದೊರಕಲೆಂದು ಇಲಾಖೆಯು ಕ್ರಮ ಕೈಗೊಂಡಿದೆ ಎಂದರು. ಜೊತೆಗೆ ರೈತರಿಗೆ ಇಲಾಖೆಯಿಂದ ಒದಗಿಸಲಾದ ಟೋಲ್ ಫ್ರೀ ಸಂಖ್ಯೆಗೆ ಕರೆಮಾಡಿ ತಮ್ಮ ಬೆಳೆ ನಷ್ಟವನ್ನು ದಾಖಲಿಸಲು ಸೂಚಿಸಿದರು. ಇಂದು ಸಾಯಂಕಾಲದವರೆಗೆ ರೈತರಿಗೆ ನೋಂದಣಿ ಅವಕಾಶವಿದೆ ಎಂದೂ ತಿಳಿಸಿದರು. ರೈತರ ಬೇಡಿಕೆಯಾದ ಖರೀದಿ ಕೇಂದ್ರವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಇನ್ನೊಂದೆಡೆ, ವಿಜಯನಗರ ಶುಗರ್ ಫ್ಯಾಕ್ಟರಿಯ ಎಂಡಿ ವಿರುದ್ಧ ರೈತರು ಅಸಮಾಧಾನ ವ್ಯಕ್ತಪಡಿಸಿ, ಪೊಲೀಸ ಠಾಣೆಗೆ ತೆರಳಿ ದೂರು ದಾಖಲಿಸುವುದಾಗಿ ಘೋಷಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಶಿವಾನಂದ ಇಟಗಿ, ತಾಲ್ಲೂಕು ಅಧ್ಯಕ್ಷ ಶರಣಪ್ಪ ಕುಂಬಳಿ, ಹಾಗೂ ರೈತ ಮುಖಂಡರಾದ ಅಶ್ವಿನಿಗೌಡ ಬಿಡನಾಳ, ಹುಚ್ಚಪ್ಪ ಹಂದ್ರಾಳ, ಯಲ್ಲಪ್ಪ ಡೋಣಿ, ಈರಣ್ಣ ಗಡಾದ್, ವೀರಭದ್ರಪ್ಪ ಮುದ್ದಿ, ಗೀತಾ ರೋಣದ್, ರಾಘವೇಂದ್ರ ಕುರಿ, ಅಶೋಕ್ ಬನ್ನಿಕೊಪ್ ಮುಂತಾದವರು ಉಪಸ್ಥಿತರಿದ್ದು, ರೈತರ ಹಕ್ಕುಗಳಿಗೆ ಧ್ವನಿ ಎತ್ತಿದರು.
ರೈತರ ಬೇಡಿಕೆಗಳನ್ನು ಪೂರೈಸುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ನಾಯಕರು ಎಚ್ಚರಿಕೆ ನೀಡಿದರು. ಪ್ರತಿಭಟನೆ ಸಂದರ್ಭದಲ್ಲಿ “ದೇಶದ ಬೆನ್ನೆಲುಬು ರೈತ, ಆದರೆ ರೈತನ ಬೆನ್ನೆಲುಬು ಮುರಿಯುತ್ತಿರುವುದು ಸರ್ಕಾರ” ಎಂದು ಆಕ್ರೋಶ ವ್ಯಕ್ತಪಡಿಸಿದ ಶಿವಾನಂದ ಇಟಗಿ ಅವರ ಮಾತುಗಳು ರೈತರ ಭಾವನೆಗಳನ್ನು ಪ್ರತಿಬಿಂಬಿಸಿದವು.