Home » News » ಚಿಕ್ಕಟ್ಟಿ ಸಂಸ್ಥೆಯಲ್ಲಿ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ:ಚಿಕ್ಕಟ್ಟಿ ಶಾಲಾ ಪರಿಸರ ನೋಡಿದರೆ ಹೃದಯ ತುಂಬಿ ಮಾತು ಮೌನವಾಗುತ್ತದೆ: ಪ್ರೊ.ಶಿವಾನಂದ ಎಸ್. ಪಟ್ಟಣಶೆಟ್ಟಿ

ಚಿಕ್ಕಟ್ಟಿ ಸಂಸ್ಥೆಯಲ್ಲಿ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ:ಚಿಕ್ಕಟ್ಟಿ ಶಾಲಾ ಪರಿಸರ ನೋಡಿದರೆ ಹೃದಯ ತುಂಬಿ ಮಾತು ಮೌನವಾಗುತ್ತದೆ: ಪ್ರೊ.ಶಿವಾನಂದ ಎಸ್. ಪಟ್ಟಣಶೆಟ್ಟಿ

by CityXPress
0 comments

ಗದಗ:ಚಿಕ್ಕಟ್ಟಿ ಶಾಲಾ ಆವರಣದಲ್ಲಿನ ನುಡಿಮುತ್ತುಗಳ ತೋರಣ ನೋಡಿದಾಗ ಹೃದಯ ತುಂಬಿ ಬರುತ್ತದೆ. ಹೃದಯ ತುಂಬಿ ಬಂದಾಗ ಸಹಜವಾಗಿಯೇ ಮಾತು ಮೌನವಾಗುತ್ತದೆ ಎಂದು ಗದಗನ ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳಾದ ಪ್ರೊ.ಶಿವಾನಂದ ಪಟ್ಟಣಶೆಟ್ಟಿ ಹೇಳಿದರು.

ಅವರು ಗದಗನ ಪ್ರತಿಷ್ಠಿತ ಸಂಸ್ಥೆಯಾದ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿನ 2024-25 ನೇ ಸಾಲಿನ ICSE ಮತ್ತು ಸ್ಟೇಟ್ ಬೋರ್ಡ್ ಪಠ್ಯಕ್ರಮದ ಎಸ್ ಎಸ್ ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಪೂಜ್ಯ ಗುರುಗಳಾದ ಲಿಂಗೈಕ್ಯ ತೋಂಟದ ಸಿದ್ಧಲಿಂಗ ಸ್ವಾಮಿಗಳು ಆಗಾಗ ಹೇಳುತ್ತಿದ್ದ ಮಾತು ಈ ಸಂದರ್ಭದಲ್ಲಿ ನನಗೆ ನೆನಹಿಗೆ ಬರುತ್ತದೆ. ಶಾಲಾ ಕಾಲೇಜುಗಳು, ಆಸ್ಪತ್ರೆಗಳು ಹಾಗೂ ಉದ್ಯಾನವನಗಳು ಆಧುನಿಕ ದಿನಮಾನದ ದೇವಾಲಯಗಳು. ಹೀಗಾಗಿ ಶ್ರೀಗಳು ಹೇಳಿದ ಮಾತು, ಚಿಕ್ಕಟ್ಟಿ ಶಾಲೆಗಳ ಪರಿಸರ ನೋಡಿದಾಗ ಅಕ್ಷರಶಃ ನಿಜವಾಗುತ್ತದೆ ಎಂದು ಹೇಳಿದರು.

ಯಾರು ಅಸಾಧ್ಯವಾದುದನ್ನು ಸಾಧ್ಯ ಮಾಡುತ್ತಾರೋ ಅವರೇ ನಿಜವಾದ ದೇವರಾಗುತ್ತಾರೆ. ನಮಗೆ ದೊಡ್ಡ ಮನಸ್ಸಿಗಿಂತ ಮಕ್ಕಳಂತ ಮನಸ್ಸಿರಬೇಕಂತೆ. ಯಾರಿಗೆ ಮಕ್ಕಳಂತ ಮನಸ್ಸಿದೆಯೋ ಅಂತವರು ಮಾತ್ರ ಸ್ವರ್ಗಕ್ಕೆ ಹೋಗುತ್ತಾರೆ ಎಂದು ನಮ್ಮ ಪೂಜ್ಯರು ಹೇಳುತ್ತಿದ್ದರು. ಅಂತಹ ಮಕ್ಕಳ ಮನಸ್ಸಿನವರು ನಾವೆಲ್ಲರೂ ಆಗೋಣ. ನನ್ನನ್ನು ಗುರುತಿಸಿ ಕರೆದ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಸ್ ವಾಯ್. ಚಿಕ್ಕಟ್ಟಿಯವರಿಗೆ ನನ್ನ ಧನ್ಯವಾದಗಳನ್ನ ತಿಳಿಸುತ್ತೇನೆ ಎಂದರು.         

banner

ಇನ್ನೋರ್ವ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಕೆ.ಎಸ್.ಎಸ್ ಕಾಲೇಜಿನ ಪ್ರಾಚಾರ್ಯರಾದ ಡಾ. ದುರದುಂಡಿ ಬಿ ಗವಾನಿ ಅವರು ಮಾತನಾಡಿ, ಮಕ್ಕಳು ದೀಪದ ಸ್ವರೂಪವಿದ್ದಂತೆ.ದೀಪವು ಹೇಗೆ ಬೆಳಕನ್ನು ಪಸರಿಸುತ್ತದೆಯೋ ಅಂತೆಯೇ ಮಕ್ಕಳೂ ಸಹ ತಮ್ಮಲ್ಲಿನ ಜ್ಞಾನದ ಬೆಳಕನ್ನು ಪಸರಿಸುವಂತಾಗಲಿ. ಅಕ್ಕಮಹಾದೇವಿಯವರ ವಚನದಂತೆ, ಹೂವು ತರುವೆನು ಹೊರತು ಹುಲ್ಲು ತಾರೆನು ಎಂಬುವುದನ್ನು ಸ್ಮರಿಸುತ್ತಾ ಮಕ್ಕಳು ಸಹ ಜ್ಞಾನದ ಪರಿಮಳವನ್ನು ಸೂಸುವಂತ ಹೂವುಗಳಾಗಲಿ ಹೊರತು ಹುಲ್ಲಿನಂತಾಗಬಾರದು ಎಂದು ಮಕ್ಕಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.

ಸಂಸ್ಥೆಯ ಅಧ್ಯಕ್ಷರಾದ ಪ್ರೊ.ಎಸ್.ವಾಯ್ ಚಿಕ್ಕಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಮಠ ಕರ್ನಾಟಕದಲ್ಲಿ ಹೆಸರುವಾಸಿಯಾಗಲು ಪಟ್ಟಣಶೆಟ್ಟಿಯವರ ನಿಸ್ವಾರ್ಥ ಸೇವಾ ಮನೋಭಾವನೆ ಹಾಗೂ ಅವರ ಪರಿಶ್ರಮ ಸಾಕಷ್ಟಿದೆ. ಸಹಾಯ ಮಾಡುವಂಥ ಗುಣವುಳ್ಳವರು, ಆದರೆ ಸಹಾಯ, ಸಹಕಾರ ನೀಡಿದ್ದನ್ನ  ಎಂದಿಗೂ, ಯಾರೊಂದಿಗೂ ಹೇಳಿಕೊಂಡವರಲ್ಲ. ಶರಣ ತತ್ವ ಪರಿಪಾಲಕರಾಗಿ, ಸರಳ ಜೀವಿಗಳಾಗಿ, ನಿಗರ್ವಿಗಳಾಗಿ, ಮತ್ತೊಬ್ಬರಿಗೆ ಆದರ್ಶಪ್ರಾಯರಾಗಿ ಜೀವನ ನಡೆಸುವಂತವರು. ಹೀಗಾಗಿ ಅವರ ಕಾಯಕದ ಮಾರ್ಗವನ್ನ ನಾವುಗಳೂ ಸಹಿತ ಅನುಸರಿಸುವದರಲ್ಲಿ ತಪ್ಪೇನೂ ಇಲ್ಲ ಹಾಗೂ ದುರದುಂಡಿ ಬಿ ಗವಾನಿ ಅವರ ಆಗಮನವೂ ಸಹ ನಮಗೆ ಸತ್ಯಂತ ಹರ್ಷದಾಯಕವಾಗಿದ್ದು, ಗವಾನಿ ಅವರು ತಮ್ಮ ಕರ್ತವ್ಯದಲ್ಲಿ ಕಟ್ಟುನಿಟ್ಟಾಗಿ ಶಿಸ್ತಿನ ಸಿಪಾಯಿಗಳಂತೆ ಕಾರ್ಯನಿರ್ವಹಿಸುವದು ಇನ್ನುಳಿದವರಿಗೆ ಮಾದರಿಯಾಗಿದೆ ಎಂದರು.

ಹತ್ತನೇ ತರಗತಿ ಮಕ್ಕಳಿಂದ ಒಂಬತ್ತನೇ ತರಗತಿ ಮಕ್ಕಳಿಗೆ ದೀಪವನ್ನು ಹಸ್ತಾಂತರಿಸುವ ಮೂಲಕ ದೀಪದಾನ ಕಾರ್ಯಕ್ರಮ ಮಾಡಲಾಯಿತು. ಅದೇ ರೀತಿ 10ನೇ ತರಗತಿ ಮಕ್ಕಳಿಗೆ ಅವರ ಜೀವನ ಸಮೃದ್ಧಿಯಿಂದ ತುಂಬಿರಲಿ ಎಂದು ಹಾರೈಸಿ,ಉಪಸ್ಥಿತರಿದ್ದ ಗಣ್ಯಮಾನ್ಯರಿಂದ ಫಲಪುಷ್ಪ ನೀಡಲಾಯಿತು.

ಇದೇ ವೇಳೆ, ಅಥಣಿಯ ಮೋಟಗಿ ಮಠದ ವತಿಯಿಂದ, ಪ್ರತಿಷ್ಠಿತ ಸಮಾಜಭೂಷಣ ಪ್ರಶಸ್ತಿಯನ್ನು ಪಡೆದ ಪ್ರೊ. ಶಿವಾನಂದ ಎಸ್. ಪಟ್ಟಣಶೆಟ್ಟಿಯವರನ್ನು ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಾಚಾರ್ಯರಾದ ಡಾ. ದುರದುಂಡಿ ಬಿ ಗವಾನಿ ಅವರನ್ನ ಚಿಕ್ಕಟ್ಟಿ ಸಂಸ್ಥೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

 ಸಮಾರಂಭದಲ್ಲಿ ಬಿ.ಸಿ.ಎ ಕಾಲೇಜಿನ ಪ್ರಾಚಾರ್ಯರಾದ ಬಿಪಿನ್ ಎಸ್ ಚಿಕ್ಕಟ್ಟಿ ಹಾಗೂ ಐ.ಸಿಎಸ್.ಇ ಉಪ ಪ್ರಾಚಾರ್ಯರಾದ ಶೋಭಾ ಸ್ಥಾವರಮಠ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಪ್ರಿಯಾಂಕ ಬಿದರೂರು ಪ್ರಾರ್ಥನಾ ಗೀತೆಯನ್ನು ಸಾದರಪಡಿಸಿದರೆ, ಆಡಳಿತಾಧಿಕಾರಿಗಳಾದ ಕಲಾವತಿ ಕೆಂಚರಾಹುತ ಸ್ವಾಗತಿಸಿದರು.

ಒಂಬತ್ತನೇ ತರಗತಿಯ ವಿಧ್ಯಾರ್ಥಿನಿಯರಾದ ಅನುಷ್ಕಾ ಹಟ್ಟಿ ಹಾಗೂ ಸಾನಿಯಾ ನಧಾಪ ಕಾರ್ಯಕ್ರಮ ನಿರೂಪಿಸಿದರು. ಅತಿಥಿಗಳ ಪರಿಚಯವನ್ನು ಶಿಕ್ಷಕಿಯರಾದ ರಜನಿ ಕೆ ಹಾಗೂ ಒಂಬತ್ತನೇ ತರಗತಿಯ ವಿಧ್ಯಾರ್ಥಿನಿಯರಾದ ಸ್ಪೂರ್ತಿ ಜೋಗಿನ, ರಕ್ಷಾ ಸೊಪ್ಪಿನ ನೆರವೇರಿಸಿದರು. ಉಪಮುಖ್ಯೋಪಾದ್ಯಾಯನಿಯರಾದ ರಿಯಾನಾ ಮುಲ್ಲಾ ವಂದನಾರ್ಪಣೆ ಗೈದರು. ಕಾರ್ಯಕ್ರಮದ ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb