ಗದಗ:ಮೇ 27:“ಲಕ್ಷಣವಂತರಾಗುವ ಮುನ್ನ ಶಿಕ್ಷಣವಂತರಾಗಿರಿ”ಎಂಬ ಮೌಲ್ಯಮಯ ವಾಕ್ಯವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ಬಿಪಿನ್ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ ಪ್ರಗತಿ ಮಾಡೊಳ್ಳಿಯವರಿಗೆ ಶಾಲೆಯ ವತಿಯಿಂದ ಭಾವಪೂರ್ಣ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಪ್ರಗತಿಯವರು ಈ ಶಾಲೆಯಲ್ಲಿ ಶಿಕ್ಷಕಿಯಾಗಿ ಕೇವಲ ಪಾಠ ಮಾತ್ರವಲ್ಲದೆ, ಮಕ್ಕಳಿಗೆ ನೈತಿಕ ಮೌಲ್ಯಗಳು, ಸಂಸ್ಕೃತಿ ಹಾಗೂ ಶ್ಲೋಕಾಧ್ಯಯನದ ಮೂಲಕ ಜೀವನಮೌಲ್ಯಗಳನ್ನು ಬೋಧಿಸುತ್ತಿದ್ದರು. ಮಕ್ಕಳಲ್ಲಿ ಅಭ್ಯಾಸ, ಶಿಸ್ತಿನ ಮಹತ್ವ ಹಾಗೂ ಮನುಷ್ಯತ್ವ ಬೆಳೆಸುವಲ್ಲಿ ಅವರು ಮುಂದಾಳತ್ವ ವಹಿಸಿದ್ದರು.
ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡುತ್ತಿರುವ ಅವರು ಮುಂದೆ ಸಂತೋಷದ ಜೀವನ ಸಾಗಿಸಬೇಕೆಂಬ ಶುಭಾಶಯವನ್ನು ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರು ವ್ಯಕ್ತಪಡಿಸಿದರು. “ಶಾಲೆಯ ಶ್ರೇಷ್ಠ ಶಿಕ್ಷಕಿಯೆಂಬ ಬಿರುದಿಗೆ ಸೂಕ್ತ ವ್ಯಕ್ತಿ ಪ್ರಗತಿ. ಅವರು ಮಕ್ಕಳ ಜೀವನದ ರೂಪುಗೊಳ್ಳುವ ಹಂತದಲ್ಲಿ ಪ್ರಭಾವ ಬೀರುವಂತಹ ಶಿಕ್ಷಣವನ್ನು ನೀಡಿದ ಧೀಮಂತಿ,” ಎಂದರು.
ಹಿರಿಯ ಪ್ರಾಧ್ಯಾಪಕರಾದ ಪ್ರೊ. ಹಬೀಬ್ ಆಯ್. ಖತಿಬ ಅವರು ಮಾತನಾಡುತ್ತ, “ಪ್ರಗತಿಯವರ ಹೆಸರು ಅವರ ವ್ಯಕ್ತಿತ್ವದ ಪ್ರತಿಬಿಂಬ. ಅವರು ಖಚಿತವಾಗಿಯೂ ಉತ್ತಮ ಪ್ರಗತಿ ಹೊಂದಿದ ಶಿಕ್ಷಣ ಸೇವೆಯನ್ನು ನೀಡಿದವರು. ಅವರ ಮುಂದಿನ ದಾಂಪತ್ಯ ಜೀವನ ಯಶಸ್ವಿಯಾಗಿ ಸಾಗಲಿ,” ಎಂದು ಶುಭಕೋರಿದರು.

ಶಾಲೆಯ ಉಪಪ್ರಾಚಾರ್ಯರಾದ ಶ್ರೀಮತಿ ಶೋಭಾ ಸ್ಥಾವರಮಠ ಅವರು ಪ್ರಗತಿಯವರ ಕೆಲಸದ ಮೇಲಿನ ನಿಷ್ಠೆ ಹಾಗೂ ಮಕ್ಕಳಿಗೆ ಶಿಕ್ಷಣ ನೀಡುವ ವೈಖರಿಯನ್ನು ಶ್ಲಾಘಿಸಿದರು. “ಅವರು ಶಿಕ್ಷಣದಲ್ಲಿ ಮಾತ್ರವಲ್ಲದೆ, ವಿದ್ಯಾರ್ಥಿಗಳಲ್ಲಿ ಸಮಾಜ ಹಾಗೂ ಸಂಸ್ಕೃತಿಯ ಅರಿವು ಮೂಡಿಸಿದರು. ಇತ್ತೀಚೆಗೆ ಅವರು ದಿನದ ದಿನದಷ್ಟು ದುಃಖಭರಿತ ಮನಸ್ಸಿನಿಂದ ಕೆಲಸ ಮಾಡುತ್ತಿರುವ ದೃಶ್ಯ ಮನದಟ್ಟಾಗಿದ್ದು, ಇದು ಅವರ ಶಿಕ್ಷಣದ ಮೇಲೆ ಇರುವ ಭಾವನಾತ್ಮಕ ಬದಿಯ ಪ್ರತೀಕ,” ಎಂದರು.
ಶಿಕ್ಷಕಿಯ ಸಹೋದರಿಯಾದ ಶ್ರೀಮತಿ ಲಕ್ಷ್ಮೀ ಮೂಲಿಮನಿ ಅವರು, “ಈ ಶಾಲೆಯು ನನಗೂ ಅಧ್ಯಯನದ ನೆಲೆಯಲ್ಲಿ ಜ್ಞಾಪಕ. ನನ್ನ ಸಹೋದರಿ ಇಲ್ಲಿ ಸೇವೆ ಸಲ್ಲಿಸುತ್ತಿದ್ದದ್ದು ನನಗೆ ಹೆಮ್ಮೆಯ ವಿಷಯ. ಇಂತಹ ಪಠಶಾಲೆಯಲ್ಲಿ ನನ್ನ ಮಕ್ಕಳಿಗೂ ವಿದ್ಯಾಭ್ಯಾಸ ಮಾಡಲು ಅವಕಾಶ ಸಿಗಲಿ ಎಂಬ ಆಶಯವಿದೆ,” ಎಂದರು.
ಈ ಭಾವನಾತ್ಮಕ ಕ್ಷಣದಲ್ಲಿ, ಮುಖ್ಯೋಪಾಧ್ಯಾಯನಿಯಾದ ರೀಯಾನಾ ಮುಲ್ಲಾರವರು, ಕನ್ನಡ ಉಪನ್ಯಾಸಕರಾದ ಶ್ರೀಶೈಲ ಬಡಿಗೇರ, ಶಿಕ್ಷಕರಾದ ರಾಹುಲ ಮಾಡೊಳ್ಳಿ ಹಾಗೂ ಮಾಧುರಿ ಶೇಷನಗೌಡ್ರ ಅವರು, ಶಿಕ್ಷಕಿಯ ಸೇವೆ ಹಾಗೂ ವ್ಯಕ್ತಿತ್ವದ ಕುರಿತಂತೆ ತಮ್ಮ ಆತ್ಮೀಯ ಅನಿಸಿಕೆಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಸಂಸ್ಥೆಯ ವತಿಯಿಂದ ಪ್ರಗತಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇನ್ನು ಬೀಳ್ಕೊಡುಗೆ ಸಮಾರಂಭದಲ್ಲಿ ಭಾವನಾತ್ಮಕವಾಗಿ ಮಾತನಾಡಿದ ಶಿಕ್ಷಕಿ ಪ್ರಗತಿ ಮಾಡೊಳ್ಳಿ ಅವರು,“ಅಜ್ಞಾನ ಅಳಿಯಲು ವಿಜ್ಞಾನ ಕಾರಣ, ವಿಜ್ಞಾನ ಬೆಳೆಯಲು ಸುಜ್ಞಾನ ಕಾರಣ,ಅಂತೆಯೇ ನನ್ನಲ್ಲಿದ್ದ ಅಂಧಕಾರವನ್ನು ಕಳೆಯುವುದು ಸುಜ್ಞಾನದ ಮೌಲ್ಯ. ಈ ಬೆಳಕು ನನಗೆ ಈ ಶಾಲೆಯ ಮೂಲಕ ದೊರೆತಿದೆ,” ಎಂದು ಭಾವುಕರಾದರು.
ತಮ್ಮ ಶಿಕ್ಷಣದ ಜೀವನದಲ್ಲಿ ನುಡಿಮುತ್ತುಗಳಂತೆ ಮೈಗೂಡಿದ ಜ್ಞಾನ, ಸಂಸ್ಕøತಿ, ಸಂಸ್ಕಾರ, ನಿಷ್ಠೆ, ಶಿಸ್ತು ಮುಂತಾದ ಮೌಲ್ಯಗಳನ್ನು ಈ ಶಾಲೆಯೇ ಅವರಿಗೆ ನೀಡಿದ ಆಶೀರ್ವಾದವೆಂದು ಅವರು ತಿಳಿಸಿದರು. ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಚಿಕ್ಕಟ್ಟಿಯವರ ಮಾರ್ಗದರ್ಶನ ಹಾಗೂ ಎಲ್ಲಾ ಗುರುಗಳ ಸಹಕಾರಕ್ಕಾಗಿ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.