ಗದಗ:ಸಮಯ ಸಾಧಕರಾಗದೇ ಸಮಯ ಸಾರ್ಥಕರಾಗೋಣ ಎನ್ನುವ ನುಡಿಯರಿತು ಸಮಯಕ್ಕೆ ಬೆಲೆ ಕೊಟ್ಟು ಕೆಲಸ ಮಾಡಬೇಕು.ನಾವು ಮಾಡುವ ಕೆಲಸ ಯಾವುದೇ ಇರಲಿ.ಆ ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆ, ಅಚಲ ನಿಷ್ಠೆ ಇರಬೇಕು. ಅಂದಾಗ ಮಾತ್ರ ನಮ್ಮ ಕೆಲಸದಲ್ಲಿ ಯಶಸ್ಸು ಸಾಧ್ಯ ಎಂದು ಇಂಜನೀಯರ ಪವನಕುಮಾರ ವಗ್ಗಿಯವರ ಹೇಳಿದರು.
ಇಂಜನೀಯರ್ ಪವನಕುಮಾರ ವಗ್ಗಿಯವರು ನೆದರ್ ಲ್ಯಾಂಡ್ ಪ್ರವಾಸಕ್ಕೆ ತೆರಳುತ್ತಿರುವ ನಿಮಿತ್ತ,ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಶುಭಕೋರುವ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷರಾದ ಪ್ರೊ.ಎಸ್.ವಾಯ್ ಚಿಕ್ಕಟ್ಟಿಯವರು ಈ ವೇಳೆ ಮಾತನಾಡಿ, ಪವನಕುಮಾರ ವಗ್ಗಿಯವರು ಸಿವಿಲ್ ಇಂಜನೀಯರಾಗಿದ್ದು, ಎಮ್.ಟೆಕ್ ಪದವಿ ಹೊಂದಿದ್ದು ಕಿಂಚಿತ್ತು ಗರ್ವಪಡದೇ ಸರಳ ಸಜ್ಜನಿಕೆಯ ಸ್ವಭಾವದವರಾಗಿದ್ದಾರೆ. ಯಾವುದೇ ಕಾರ್ಯವಾಗಲಿ ತಾವೇ ಸ್ವತಃ ಮಾಡುತ್ತ, ಸಮಯಕ್ಕಿಂತ ಮುಂಚಿತವಾಗಿ ಹಾಜರಿದ್ದು, ತಮ್ಮ ಕಾರ್ಯದಲ್ಲಿ ನಿರತರಾಗಿರುತ್ತಾರೆ, ಅಂದಿನ ದಿನದ ಸಮಯ ಮುಕ್ತಾಯವಾದರೂ ತಾವೂ ಮಾಡುತ್ತಲಿರುವ ಕಾರ್ಯ ಸಂಪೂರ್ಣ ಮುಗಿಸಿಯೇ ತೆರಳುವಂತ ವ್ಯಕ್ತಿತ್ವದವರು. ಶ್ರೀಯುತರು ತಮ್ಮ ಉನ್ನತವಾದ ಜ್ಞಾನ ಪಡೆಯಲು ನೆದರ್ ಲ್ಯಾಂಡ್ ದೇಶಕ್ಕೆ ತೆರಳುತ್ತಿದ್ದು, ಅಲ್ಲಿನ ಕಾರ್ಯ ಕೌಶಲ್ಯಗಳನ್ನು ನಮ್ಮ ದೇಶದಲ್ಲೂ ಅನುಸರಿಸಿ ಹೆಸರುವಾಸಿಯಾಗಲಿ ಎಂದು ಶುಭ ಹಾರೈಸಿದರು.

ಬಿಸಿಎ ಕಾಲೇಜಿನ ಪ್ರಾಚಾರ್ಯರಾದ ಬಿಪಿನ್ ಎಸ್ ಚಿಕ್ಕಟ್ಟಿಯವರು ಮಾತನಾಡಿ, ಪವನಕುಮಾರ ವಗ್ಗಿಯವರು ಕಾರ್ಯ ದಕ್ಷತೆಯುಳ್ಳವರಾಗಿದ್ದು, ತಾವೂ ಅಂದುಕೊಂಡ ಕೆಲಸ ಮುಗಿಯುವವರೆಗೂ ವಿರಮಿಸದೇ,ಸ್ವಲ್ಪವೂ ಕಾಲಹರಣ ಮಾಡದೇ ಕಾರ್ಯ ಮಾಡುವಂತ ಕಾಯಕಯೋಗಿ. ನೆದರಲ್ಯಾಂಡ್‌ನಲ್ಲಿ ಅತ್ಯತ್ತಮವಾದ ಶಿಕ್ಷಣ ಪದ್ದತಿ ಇದೆ. ಅಲ್ಲಿರುವ ಶಿಕ್ಷಣ ವ್ಯವಸ್ಥೆಯನ್ನು ತಿಳಿದು ಬನ್ನಿ, ಅಲ್ಲಿರುವ ಕಲಿಕೆಯು ಮಕ್ಕಳಿಗೆ ಪಠ್ಯಪುಸ್ತಕದ ಓದಿಗಿಂತ, ವೈಜ್ಞಾನಿಕ ಮನೋಭಾವವನ್ನು ಹೆಚ್ಚಿಸುವಂತ ಪ್ರಯೋಗಗಳನ್ನು ಮಾಡಿಸುವ ಮೂಲಕ ಮಕ್ಕಳ ಅಂತರಂಗದ ಜ್ಞಾನವನ್ನು ಬಹಿರಂಗ ಪಡಿಸುತ್ತಾರೆ. ತಮ್ಮ ಜೀವನದ ಮುಂದಿನ ಗುರಿಯನ್ನು ಸಾಧಿಸಲು ಚಿಕ್ಕವರಿರುವಾಗಲೇ ಕಾರ್ಯಪ್ರವೃತ್ತರನ್ನಾಗಿ ಮಾಡುತ್ತಾರೆ ಎಂದರು.
ಆಡಳಿತಾಧಿಕಾರಿಗಳಾದ ಕಲಾವತಿ ಕೆಂಚರಾಹುತ್ ಅವರು ಮಾತನಾಡಿ,ಸನ್ಮಾನಿತರು ವಿದೇಶ ಪ್ರವಾಸದಲ್ಲಿ ಪಡೆಯುವ ಶೈಕ್ಷಣಿಕ ಕ್ಷೇತ್ರದಲ್ಲಿನ ಅನುಭವವನ್ನು ಸ್ವದೇಶಕ್ಕೆ ಬಂದಾಗ ನಮ್ಮೆಲ್ಲರ ಶಿಕ್ಷಕ ಭಾಂದವರೊಂದಿಗೆ ಹಂಚಿಕೊಳ್ಳುವ ಆಶಯವನ್ನು ವ್ಯಕ್ತಪಡಿಸಿದರು.
ಉಪನ್ಯಾಸಕರಾದ ಶ್ರೀಶೈಲ ಬಡಿಗೇರ ಮಾತನಾಡಿ ಶ್ರೀಯುತರು ಕಾಯಕವೇ ಕೈಲಾಸ ಎನ್ನುವ ಕಾಯಕ ತತ್ವವನ್ನು ಮೈಗೂಡಿಸಿಕೊಂಡವರು. ಇಪ್ಪತ್ನಾಲ್ಕು ತಾಸು ತಪಸ್ಸಿಗಿಂತ ಒಂದು ತಾಸಿನ ಕಾಯಕ ಮುಖ್ಯ ಎಂದು ನಂಬಿ ಕೆಲಸ ಮಾಡುವಂತವರು. ಅವರಲ್ಲಿರುವ ಸಮಯ ಪ್ರಜ್ಞೆಯನ್ನು ನಾವೂ ಸಹ ಪಾಲಿಸೋಣ ಎಂದರು.
ಈ ಸಂದರ್ಭದಲ್ಲಿ ಐ.ಸಿ.ಎಸ್.ಇ ಶಾಲೆಯ ಉಪಪ್ರಾಚಾರ್ಯರಾದ ಶೋಭಾ ಸ್ಥಾವರಮಠ, ಬಿಪಿನ್ ಚಿಕ್ಕಟ್ಟಿ ಶಾಲೆಯ ಉಪಮುಖ್ಯೋಪಾಧ್ಯಾಯನಿಯರಾದ ರಿಯಾನಾ ಮುಲ್ಲಾ ಉಪಸ್ಥಿತರಿದ್ದರು. ಬಿ.ಸಿ.ಎ ಕಾಲೇಜಿನ ಪ್ರಾಧ್ಯಾಪಕರಾದ ಮರಿಯಪ್ಪ ಹರಿಜನ ವಂದನಾರ್ಪಣೆಗೈದರು.