ಲಕ್ಷ್ಮೇಶ್ವರ: ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಪಹಲ್ದಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನ ಬಾಲೇಹೊಸೂರು ಹಾಗೂ ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನಮಠದ ಶ್ರೀ ಜಗದ್ಗುರು ಫಕ್ಕೀರ ದಿಂಗಾಲೇಶ್ವರ ಸ್ವಾಮಿಜಿ ಅತ್ಯಂತ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಸ್ವಾಮಿಜಿ, ಇದು ಒಂದು ಪೈಶಾಚಿಕ ಕೃತ್ಯವಾಗಿದೆ. ಮಾನವ ರೂಪದ ರಾಕ್ಷಸರು ಇಂತಹ ಹೀನ ಕೆಲಸಗಳನ್ನು ಮಾಡುತ್ತಾರೆ. ರಕ್ತ ಮತ್ತು ಜೀವಗಳೊಂದಿಗೆ ಚಲ್ಲಾಟವಾಡುತ್ತಾರೆ. ನಮ್ಮ ಭೂಮಿಯಲ್ಲಿ ಶತ್ರುಗಳು ಬಂದು ಅಮಾಯಕರ ಮೇಲೆ ದಾಳಿ ಮಾಡುವದು ನಮ್ಮ ದೌರ್ಬಲ್ಯ ಅಥವಾ ದಿವ್ಯ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ. ಇಂತಹ ಘಟನೆಗಳು ಹಿಂದಿನಿಂದಲೂ ನಡೆಯುತ್ತಲೆ ಇವೆ. ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡು ಹಿಡಿಯಬೇಕಾಗಿದೆ ಎಂದಿದ್ದಾರೆ.
ಭಯೋತ್ಪಾದಕರನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲುವ ಕೆಲಸವಾಗಬೇಕಿದೆ. ಅಮಾಯಕರ ಜೀವಕ್ಕೆ ಬೆಲೆಬರುವ ಕ್ರಮಗಳನ್ನು ಕೇಂದ್ರ ಸರ್ಕಾರವು ಜಾರಿ ಮಾಡಬೇಕು. ಗಡಿಭಾಗದಲ್ಲಿ ಯಾತ್ರೆ ಕೈಗೊಳ್ಳುವವರ ಸುರಕ್ಷತೆಗೆ ಯೋಗ್ಯ ಭದ್ರತಾ ಕ್ರಮಗಳನ್ನು ಮತ್ತು ಕಾನೂನನ್ನು ಜಾರಿ ಮಾಡುವದು ಅನಿವಾರ್ಯವಾಗಿದೆ. ಗಡಿಭಾಗದಲ್ಲಿ ವಾಸಿಸುವ ಸೈನಿಕರ ಜೀವರಕ್ಷಣೆ ಸರ್ಕಾರದ ಮೊದಲ ಆದ್ಯತೆಯಾಗಬೇಕು. ಅಲ್ಲದೇ ಸೈನಿಕರಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಬೇಕು ಎಂದು ಹೇಳಿದರು.

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ವಿಹಾರಕ್ಕೆಂದು ಬಂದಂತಹ ಸುಮಾರು 30 ಜನರನ್ನು ಅಮಾನುಷವಾಗಿ ಹತ್ಯೆಗೈದಿರುವುದು ಅಮಾನವೀಯ, ಮನುಷ್ಯತ್ವವಿಲ್ಲದ ಕ್ರೂರತೆಯ ಮತ್ತು ಕ್ಷಮೆಗೆ ಅರ್ಹವಲ್ಲದ ಕೃತ್ಯ ಇದಾಗಿದೆ. ಇದನ್ನು ನಾವು ಅತ್ಯಂತ ಕಠೋರವಾಗಿ ಖಂಡಿಸುತ್ತೇವೆ. ಇಲ್ಲಿ ಧರ್ಮ ಜಾತಿಗಳಿಗಿಂತ ಮುಖ್ಯವಾದದು ಮನುಷ್ಯ ಜಾತಿ ಮತ್ತು ಮಾನವ ಧರ್ಮ, ಇದನ್ನು ಮರೆತು ಇಂತಹ ಕೃತ್ಯಗಳ ಮೂಲಕ ಸಮಾಜದ ಶಾಂತಿ ಕದಡುವ, ಭಯವನ್ನು ಬಿತ್ತುವ ಯಾರೇ ಇರಲಿ ಅವರು ಯಾವದೇ ರೀತಿಯ ಕ್ಷಮೆಗೆ ಅರ್ಹರಲ್ಲವೆಂಬುವುದು ನಮ್ಮ ಭಾವನೆಯಾಗಿದೆ ಎಂದರು.

ಸಂತ್ರಸ್ತ ಕುಟುಂಬಗಳಿಗೆ ನಾವು ತೀರ್ವ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಸರ್ವಶಕ್ತನಾದ ಪರಮಾತ್ಮನು ಈ ಕುಟುಂಬಗಳಿಗೆ ಈ ದುಖಃವನ್ನು ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ. ಅದೇ ರೀತಿ, ಮುಂಬರುವ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಸಂಬಂಧಪಟ್ಟ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಇದು ಮೇಲ್ನೋಟಕ್ಕೆ ಭದ್ರತಾ ವೈಫಲ್ಯವೆಂದೆನಿಸುತ್ತದೆ. ಈ ರೀತಿಯ ದೋಷಗಳು ಮರುಕಳಿಸದಂತೆ ಜಾಗೃತಿ ವಹಿಸಬೇಕು ಎಂದು ದಿಂಗಾಲೇಶ್ವರ ಸ್ವಾಮಿಜಿ ಆಗ್ರಹಿಸಿದ್ದಾರೆ.
