ಮುಂಡರಗಿ:
“ಸರ್ಕಾರದ ಕೆಲಸ ದೇವರ ಕೆಲಸ” ಎಂಬ ಮಾತಿಗೆ ಜೀವಂತ ಉದಾಹರಣೆ ನೀಡುವಂತಹ ಮಾನವೀಯ ಕಾರ್ಯ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ನಡೆದಿದೆ.
ಕಳೆದ ಎರಡು ವರ್ಷಗಳಿಂದ ರೇಷನ್ ಕಾರ್ಡ್ಗಾಗಿ ಕಚೇರಿಗಳ ಬಾಗಿಲು ತಟ್ಟುತ್ತಿದ್ದ ಕುಟುಂಬಕ್ಕೆ, ದಲಿತ ಕುಂದುಕೊರತೆಗಳ ಸಭೆಯಲ್ಲಿ ವಿಷಯ ಪ್ರಸ್ತಾಪವಾದ ಕೇವಲ ಎರಡೇ ದಿನಗಳಲ್ಲಿ ಬಿಪಿಎಲ್ ರೇಷನ್ ಕಾರ್ಡ್ ವಿತರಿಸುವ ಮೂಲಕ ತಾಲೂಕು ಆಡಳಿತ ಮಾನವೀಯತೆ ಮೆರೆದಿದೆ.
ಮುಂಡರಗಿ ತಾಲೂಕಿನ ಗಂಗಾಪೂರ ಗ್ರಾಮದ ನಿವಾಸಿಗಳಾದ ಮಂಜುಳಾ ಹಾಗೂ ಆಕಾಶ ತಳಗೇರಿ ದಂಪತಿಯ 2 ವರ್ಷ 6 ತಿಂಗಳ ಪುತ್ರ ಪ್ರಣಯ ಎಂಬ ಮಗು ಗಂಭೀರ ಹೃದಯ ಕಾಯಿಲೆಯಿಂದ ಬಳಲುತ್ತಿದೆ. ಮಗುವಿನ ತುರ್ತು ಚಿಕಿತ್ಸೆಗೆ ಸರ್ಕಾರದ ವಿವಿಧ ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಬಿಪಿಎಲ್ (BPL) ರೇಷನ್ ಕಾರ್ಡ್ ಅತ್ಯವಶ್ಯಕವಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಈ ಕುಟುಂಬ ಸಂಬಂಧಿಸಿದ ಇಲಾಖೆಗಳಿಗೆ ಅನೇಕ ಬಾರಿ ಅರ್ಜಿ ಸಲ್ಲಿಸಿದ್ದರೂ, ತಾಂತ್ರಿಕ ಸಮಸ್ಯೆಗಳ ನೆಪದಲ್ಲಿ ರೇಷನ್ ಕಾರ್ಡ್ ಮಂಜೂರಾಗಿರಲಿಲ್ಲ.
ಈ ಕುಟುಂಬ ಎದುರಿಸುತ್ತಿದ್ದ ಸಮಸ್ಯೆಯನ್ನು ದಿನಾಂಕ 30-12-2025 ರಂದು ನಡೆದ ದಲಿತ ಕುಂದುಕೊರತೆಗಳ ಸಭೆಯಲ್ಲಿ ದಲಿತ ಮುಖಂಡ ಲಕ್ಷ್ಮಣ ತಗಡಿನಮನಿ ಅವರು ಅಧಿಕಾರಿಗಳ ಗಮನಕ್ಕೆ ತಂದರು. ಮಗುವಿನ ಆರೋಗ್ಯದ ಗಂಭೀರತೆಯನ್ನು ಅರಿತ ತಾಲೂಕು ದಂಡಾಧಿಕಾರಿ ಪಿ.ಎಸ್. ಎರ್ರಿಸ್ವಾಮಿ ಹಾಗೂ ಆಹಾರ ನಿರೀಕ್ಷಕ ಶಿವರಾಜ್ ಆಲೂರು ಅವರು ತಕ್ಷಣ ಸ್ಪಂದಿಸಿ, ಪ್ರಕ್ರಿಯೆಗಳನ್ನು ತ್ವರಿತಗೊಳಿಸಿ ಕೇವಲ ಎರಡು ದಿನಗಳಲ್ಲೇ ಮಂಜುಳಾ – ಆಕಾಶ ತಳಗೇರಿ ಅವರ ಹೆಸರಿನಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಸಿದ್ಧಪಡಿಸಿ ವಿತರಿಸಿದರು.
ತಹಶೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಅವರು ಮಗುವಿನ ತಂದೆಗೆ ರೇಷನ್ ಕಾರ್ಡ್ ಹಸ್ತಾಂತರಿಸಿ, “ಮಗು ಶೀಘ್ರವೇ ಗುಣಮುಖವಾಗಲಿ” ಎಂದು ಹಾರೈಸಿದರು.
ಅಧಿಕಾರಿಗಳ ಈ ಮಿಂಚಿನ ವೇಗದ ಹಾಗೂ ಮಾನವೀಯ ಕ್ರಮಕ್ಕೆ ಕುಟುಂಬಸ್ಥರು ಕೃತಜ್ಞತೆ ವ್ಯಕ್ತಪಡಿಸಿದರು.ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದ ದಲಿತ ಮುಖಂಡ ಲಕ್ಷ್ಮಣ ತಗಡಿನಮನಿ ಅವರು, “ಇದು ಕೇವಲ ರೇಷನ್ ಕಾರ್ಡ್ ವಿತರಣೆ ಅಲ್ಲ, ಅನಾರೋಗ್ಯದಿಂದ ಬಳಲುತ್ತಿರುವ ಮಗುವಿಗೆ ಹೊಸ ಜೀವ ನೀಡಿದಂತಾಗಿದೆ. ಸರ್ಕಾರದ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಿದರೆ ಜನರಿಗೆ ಎಷ್ಟೊಂದು ಸಹಾಯವಾಗುತ್ತದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ” ಎಂದು ಹೇಳಿದರು.
ಈ ಘಟನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು, ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಆಡಳಿತ ವ್ಯವಸ್ಥೆಯ ಅಗತ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
