ಬೆಂಗಳೂರು: ಕರ್ನಾಟಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸರಿಯಾಗಿ ಕನ್ನಡ ಬರಲ್ಲ ಎಂದು ವಿದ್ಯಾರ್ಥಿಯೊಬ್ಬ ಅವರ ಮುಂದೆಯೇ ಜೋರಾಗಿ ಕೂಗಿ ಹೇಳಿರುವ ಘಟನೆ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದಿದೆ.
ಇದರಿಂದ ಕೋಪಗೊಂಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಆ ಹುಡುಗನ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸಭೆಯಲ್ಲೇ ಆದೇಶಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ ಅವರು ಮಾತನಾಡುತ್ತಿರುವಾಲೇ ವಿದ್ಯಾರ್ಥಿಯೊಬ್ಬ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎಂದು ಜೋರಾಗಿ ಕಿರುಚಿದ್ದಾನೆ. ಇದನ್ನು ಕೇಳಿರುವ ಮಧು ಬಂಗಾರಪ್ಪ ಗರಂ ಆಗಿದ್ದಾರೆ. ಮೊದಲು ನಕ್ಕ ಅವರು ಕೂಡಲೇ ಯಾರ್ರಿ ಅದು ಅವರ ಮೇಲೆ ಆಕ್ಷನ್ ತಗೊಳ್ರಿ ನಾನು ಇದನ್ನೆಲ್ಲ ಸಹಿಸಲ್ಲ ಎಂದಿದ್ದಾರೆ.
ಯತ್ನಾಳ್ ವ್ಯಂಗ್ಯ:
ಇದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಶಿಕ್ಷಣ ಸಚಿವರಿಗೆ ಕನ್ನಡ ಬರುವುದಿಲ್ಲ ಎಂಬುದು ರಾಜ್ಯಕ್ಕೆ ತಿಳಿದಿರುವ ವಿಚಾರ. ವಿದ್ಯಾರ್ಥಿ ಒಬ್ಬ ಸಚಿವರಿಗೆ ಕನ್ನಡ ಬರೋದಿಲ್ಲ ಅಂತ ಹೇಳಿದ್ದಕ್ಕೆ ಅವನ ಮೇಲೆ ಕ್ರಮ ಕೈಗೊಳ್ಳುವಂತೆ ಮಾಧ್ಯಮಗಳ ಎದುರೇ ಸಚಿವರು ಹೇಳಿದ್ದು ಇವರು ಎಷ್ಟು ಅಪ್ರಾಮಾಣಿಕರು ಎಂಬುದು ತೋರಿಸುತ್ತದೆ ಎಂದು ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಕರ್ನಾಟಕದ ಶಿಕ್ಷಣ ಸಚಿವರು ಸ್ಫುಟವಾಗಿ ಕನ್ನಡವನ್ನು ಮಾತನಾಡಲು, ಬರೆಯಲು, ಓದಲು ಹಾಗೂ ಸಂವಹನ ಮಾಡಲು ಕಲಿಯಬೇಕು. ವಿದ್ಯಾರ್ಥಿಗಳಾಗಲಿ ಹಾಗೂ ಪತ್ರಕರ್ತರಿಂದ ರಚನಾತ್ಮಕ ಟೀಕೆಗಳನ್ನು ಸ್ವೀಕರಿಸಬೇಕು. ಪ್ರಜಾಪ್ರಭುತ್ವ ದಲ್ಲಿ ವಿದ್ಯಾರ್ಥಿಗಳಿಗೂ ಸೇರಿದಂತೆ ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿರುತ್ತದೆ.
ಇದನ್ನು ದಮನಿಸುವುದು ಹೇಯ ಹಾಗೂ ಖಂಡನೀಯ. ಅಲ್ಲದೇ ಸಚಿವರ ಅಸಮರ್ಥತೆಯನ್ನು ಪ್ರಶ್ನಿಸಿದ ವಿದ್ಯಾರ್ಥಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದೂ ಬಿಜೆಪಿ ನಾಯಕ ಬಸನಗೌಡ ಯತ್ನಾಳ್ ಆಗ್ರಹಿಸಿದ್ದಾರೆ.
ಸಚಿವರ ಕೋಪಕ್ಕೆ ಆಕ್ರೋಶ: ಸಚಿವ ಮಧು ಬಂಗಾರಪ್ಪ ಅವರು ವಿದ್ಯಾರ್ಥಿಯ ಮೇಲೆ ಗರಂ ಆಗಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿದ್ಯಾರ್ಥಿ ತಿಳಿಯದೆ ತಪ್ಪು ಮಾಡಿರಬಹುದು. ಆದರೆ, ಅವನ ಮೇಲೆ ಈ ರೀತಿ ಗರಂ ಆಗುವುದು ಹಾಗೂ ಕ್ರಮ ತೆಗೆದುಕೊಳ್ಳಿ ಎಂದು ಹೇಳುವುದು ಎಷ್ಟು ಸರಿ. ಸಣ್ಣ ಹುಡುಗ ಅವನಿಗೆ ಬುದ್ಧಿ ಮಾತು ಹೇಳಿದ್ದರೆ ಸಾಕಾಗಿತ್ತು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.