ಬ್ಯಾಂಕಾಕ್: ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮ್ಯಾನ್ಮಾರ್‌ನಲ್ಲಿ ಅಪಾಯಕಾರಿ ಭೂಕಂಪನದ (Earthquake) ಅನುಭವವಾಗಿದೆ. ಇದರ ಭೀಕರತೆಯು ಎಷ್ಟಿತ್ತೆಂದರೆ, ಬ್ಯಾಂಕಾಕ್‌ನಿಂದ ದೆಹಲಿಯವರೆಗೆ ಅದರ ಕಂಪನದ ಅನುಭವವಾಗಿದೆ. ಇದರ ನಂತರ ಭೂಕಂಪದ ತೀವ್ರತೆಯು ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ಚೀನಾ, ಲಾವೋಸ್ ಮತ್ತು ಥೈಲ್ಯಾಂಡ್ (Thailand) ಹಾಗೂ ಭಾರತಕ್ಕೂ ಮುಟ್ಟಿದೆ. ಇದರ ಪರಿಣಾಮವಾಗಿ, ಥೈಲ್ಯಾಂಡ್ನಲ್ಲಿ 25 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಜೊತೆಗೆ 43 ಜನರು ಕಾಣೆಯಾಗಿದ್ದಾರೆ. ಏತನ್ಮಧ್ಯೆ, ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿದೆ. ಇದರ ನಡುವೆ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಎರಡು ಭೂಕಂಪನದಲ್ಲಿ 59 ಸಾವು ಹಾಗೂ 250 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಇದರ ನಡುವೆ, ಮಿಲಿಟರಿ ಸರ್ಕಾರವು ಅಂತರರಾಷ್ಟ್ರೀಯ ನೆರವು ಕೋರಿದೆ.

ಮುಂದುವರೆದು, ಪ್ರಬಲ ಭೂಕಂಪದ ನಂತರ ಥಾಯ್ ಪ್ರಧಾನಿ ಪಟೊಂಗ್‌ಟಾರ್ನ್ ಶಿನವಾತ್ರ ತುರ್ತು ಸಭೆ ಕರೆದಿದ್ದಾರೆ. ಭೂಕಂಪದ ನಂತರ, ಅವರು ದಕ್ಷಿಣ ದ್ವೀಪವಾದ ಫುಕೆಟ್‌ಗೆ ತಮ್ಮ ಅಧಿಕೃತ ಭೇಟಿಯನ್ನು ಮುಂದೂಡಿದ್ದಾರೆ ಎಂದು ವರದಿಯಾಗಿದೆ. ಥೈಲ್ಯಾಂಡ್ ಸರ್ಕಾರ ಬ್ಯಾಂಕ್ಯಾಕ್ ಪ್ರದೇಶದಲ್ಲಿ ವಿಮಾನಯಾನವನ್ನು ರದ್ದುಪಡಿಸಿದೆ. ಇನ್ನು ಶುಕ್ರವಾರ ಸಂಭವಿಸಿದ ಭೂಕಂಪದ ಸಮಯದಲ್ಲಿ ಬ್ಯಾಂಕಾಕ್‌ನಲ್ಲಿರುವ ಪ್ರಸಿದ್ಧ ಮಹಾನಕೋರ್ನ್ ಕಟ್ಟಡ ಕುಸಿತದ ಪರಿಣಾಮವಾಗಿ 43 ಜನರು ಕಾಣೆಯಾಗಿದ್ದಾರೆ.