Home » News » ಬಸ್ ನಿಲ್ದಾಣದಲ್ಲೇ ಚಾಲಕನ ಯರ್ರಾಬಿರ್ರಿ ಚಾಲನೆ: ಮಹಿಳಾ ಪ್ರಯಾಣಿಕರ ಮೇಲೆ ಹರಿದ ಬಸ್..! ಗದಗ ಹೊಸ ಬಸ್ ನಿಲ್ದಾಣದಲ್ಲಿ ಭೀಕರ ಅಪಘಾತ – ಓರ್ವ ಮಹಿಳೆ ಸ್ಥಿತಿ ಗಂಭೀರ..! ಅಪಘಾತದ ಭಯಾನಕ ದೃಶ್ಯ CCTV ಯಲ್ಲಿ ಸೆರೆ..!

ಬಸ್ ನಿಲ್ದಾಣದಲ್ಲೇ ಚಾಲಕನ ಯರ್ರಾಬಿರ್ರಿ ಚಾಲನೆ: ಮಹಿಳಾ ಪ್ರಯಾಣಿಕರ ಮೇಲೆ ಹರಿದ ಬಸ್..! ಗದಗ ಹೊಸ ಬಸ್ ನಿಲ್ದಾಣದಲ್ಲಿ ಭೀಕರ ಅಪಘಾತ – ಓರ್ವ ಮಹಿಳೆ ಸ್ಥಿತಿ ಗಂಭೀರ..! ಅಪಘಾತದ ಭಯಾನಕ ದೃಶ್ಯ CCTV ಯಲ್ಲಿ ಸೆರೆ..!

by CityXPress
0 comments

ಗದಗ:
ಗದಗ ನಗರದ ಹೊಸ ಕೇಂದ್ರ ಬಸ್ ನಿಲ್ದಾಣದಲ್ಲಿ ಚಾಲಕನ ಅಜಾಗರೂಕ ಹಾಗೂ ಅತಿವೇಗದ ಚಾಲನೆಯಿಂದ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮಹಿಳಾ ಪ್ರಯಾಣಿಕರಲ್ಲಿ ಓರ್ವ ಮಹಿಳೆ ಮೇಲೆ ಬಸ್ ಹರಿದು, ಅದೃಷ್ಟವಶಾತ್ ಇನ್ನಿಬ್ಬರು ಮಹಿಳೆಯರು ಪ್ರಾಣಾಪಯದಿಂದ ಪಾರಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

🖋ವರದಿ: ಮಹಲಿಂಗೇಶ ಹಿರೇಮಠ. ಗದಗ

ನಿನ್ನೆ ಮಧ್ಯಾಹ್ನದ ವೇಳೆ ನಡೆದ ಈ ಅವಘಡದಲ್ಲಿ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ.
ಬಸ್ ನಿಲ್ದಾಣದ ಆವರದಲ್ಲೇ ನಡೆದು ಹೋಗುತ್ತಿದ್ದ ಮಹಿಳಾ ಪ್ರಯಾಣಿಕರ ಮೇಲೆ, ತಿರುವಿನಲ್ಲಿ ಏಕಾಏಕಿ ಅತಿವೇಗದಲ್ಲಿ ಬಸ್ ಚಲಾಯಿಸಿದ ಪರಿಣಾಮ, ಬಸ್‌ನ ಹಿಂಬದಿ ಚಕ್ರ ಮಹಿಳೆಯರ ಮೇಲೆ ಹರಿದಿದೆ.

ಈ ಅಪಘಾತದಲ್ಲಿ ಶಾಂತವ್ವ ಸಿದ್ದಪ್ಪ ಕೊರ್ತಿ ಎಂಬ ಮಹಿಳಾ ಪ್ರಯಾಣಿಕಳ ಕಾಲು ಗಂಭೀರವಾಗಿ ಗಾಯಗೊಂಡಿದ್ದು, ಬೆನ್ನು ಭಾಗಕ್ಕೂ ತೀವ್ರ ಪೆಟ್ಟು ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಶಾಂತವ್ವ ಅವರನ್ನು ತಕ್ಷಣ ಗದಗ ಜಿಲ್ಲಾಸ್ಪತ್ರೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ,‌ ನಂತರ ಹೆಚ್ಚಿನ ಚಿಕಿತ್ಸೆಗೆ SDM ಆಸ್ಪತ್ರೆಗೆ ದಾಖಲಿಸಲಾಗಿದೆ.ಅಪಘಾತದ ಭೀಕರ ದೃಶ್ಯ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಎದೆ ಝಲ್ ಅನಿಸುವಂತಿದೆ.

banner

ಶಾಂತವ್ವ ಅವರು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕು ಸುನಗ ಗ್ರಾಮದ ನಿವಾಸಿಯಾಗಿದ್ದು, ಗದಗಕ್ಕೆ ತಮ್ಮ ಸಂಬಂಧಿಯೊಬ್ಬರ ಆರೋಗ್ಯ ವಿಚಾರಿಸಲು ಸಹೋದರಿಯೊಂದಿಗೆ ಬಂದಿದ್ದರು ಎನ್ನಲಾಗಿದೆ.
ಅಪಘಾತಕ್ಕೆ ಕಾರಣವಾದ ಬಸ್ ರಾಯಚೂರು ವಿಭಾಗದ ಮಸ್ಕಿ ಡಿಪೋಗೆ ಸೇರಿದ KSRTC ಬಸ್ ಆಗಿದ್ದು, ಚಾಲಕ ಅನಿಲ್‌ಕುಮಾರ ವಿರುದ್ಧ ಗದಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸ್ಥಳೀಯರ ಆರೋಪದ ಪ್ರಕಾರ, ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್‌ಗಳಿಗೆ ಯಾವುದೇ ವೇಗ ನಿಯಂತ್ರಣವಿಲ್ಲದೇ ಸಂಚಾರ ನಡೆಯುತ್ತಿರುವುದೇ ಇಂತಹ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಬಸ್‌ಗಳ ಜೊತೆಗೆ ಖಾಸಗಿ ವಾಹನಗಳು ಹಾಗೂ ಆಟೋಗಳ ಅತಿರೇಕ ಸಂಚಾರವೂ ಅಪಾಯವನ್ನು ಹೆಚ್ಚಿಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರಿಗೆ ಸಂಸ್ಥೆಯ ಕಠಿಣ ನಿಯಂತ್ರಣ ಹಾಗೂ ಮೇಲ್ವಿಚಾರಣೆಯ ಕೊರತೆಯಿಂದಲೇ ಇಂತಹ ಅವಘಡಗಳು ಮರುಮರು ನಡೆಯುತ್ತಿವೆ ಎಂದು ಆರೋಪಿಸಲಾಗಿದ್ದು, ಬಸ್ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ಸಂಚಾರ ನಿಯಮ ಜಾರಿಗೆ ತರಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಾಣಾಪಾಯಗಳು ಸಂಭವಿಸುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb